ADVERTISEMENT

ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು: ಕ್ರಮ ಏಕಿಲ್ಲ; ವೀರಪ್ಪ ಮೊಯಿಲಿ ಪ್ರಶ್ನೆ

'ಲೋಕಗೆಂದಿನ ಗಾಂಧಿಯೆರ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವೀರಪ್ಪ ಮೊಯಿಲಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 6:23 IST
Last Updated 5 ಅಕ್ಟೋಬರ್ 2025, 6:23 IST
ಮಂಗಳೂರಿನಲ್ಲಿ 'ಲೋಕಗೆಂದಿನ ಗಾಂಧಿಯೆರ್' ಪುಸ್ತಕವನ್ನು ಎಂ.ವೀರಪ್ಪ ಮೊಯಿಲಿ ಶನಿವಾರ ಬಿಡುಗಡೆ ಮಾಡಿದರು.  ಕುಂಬ್ರ ದುರ್ಗ ಪ್ರಸಾದ್ ರೈ, ಮಮತಾ ರೈ, ಪೂರ್ಣಿಮಾ,  ಎನ್ ಇಸ್ಮಾಯಿಲ್, ಎಂ.ಸುಂದರ ಬೆಳುವಾಯಿ, ತಾರನಾಥ ಗಟ್ಟಿ ಕಾಪಿಕಾಡ್‌, ಅರವಿಂದ ಚೊಕ್ಕಡಿ, ಕೃತಿಯ ಲೇಖಕ ಉದಯ ಕುಮಾರ ಇರ್ವತ್ತೂರು, ಹರೀಶ್ ಬಂಟ್ವಾಳ, ವಾಸುದೇವ ಬೆಳ್ಳೆ ಮೊದಲಾದವರು ಭಾಗವಹಿಸಿದ್ದರು
ಮಂಗಳೂರಿನಲ್ಲಿ 'ಲೋಕಗೆಂದಿನ ಗಾಂಧಿಯೆರ್' ಪುಸ್ತಕವನ್ನು ಎಂ.ವೀರಪ್ಪ ಮೊಯಿಲಿ ಶನಿವಾರ ಬಿಡುಗಡೆ ಮಾಡಿದರು.  ಕುಂಬ್ರ ದುರ್ಗ ಪ್ರಸಾದ್ ರೈ, ಮಮತಾ ರೈ, ಪೂರ್ಣಿಮಾ,  ಎನ್ ಇಸ್ಮಾಯಿಲ್, ಎಂ.ಸುಂದರ ಬೆಳುವಾಯಿ, ತಾರನಾಥ ಗಟ್ಟಿ ಕಾಪಿಕಾಡ್‌, ಅರವಿಂದ ಚೊಕ್ಕಡಿ, ಕೃತಿಯ ಲೇಖಕ ಉದಯ ಕುಮಾರ ಇರ್ವತ್ತೂರು, ಹರೀಶ್ ಬಂಟ್ವಾಳ, ವಾಸುದೇವ ಬೆಳ್ಳೆ ಮೊದಲಾದವರು ಭಾಗವಹಿಸಿದ್ದರು   

ಮಂಗಳೂರು: ‘ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ನೇಮಿಸಿದ್ದ ಸಮಿತಿ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ‌ ಸೇರಿಸಲು ಶಿಫಾರಸ್ಸು ಮಾಡಿದೆ. ಕೇಂದ್ರ ಸರ್ಕಾರ ಇನ್ನೂ ಈ ಕುರಿತು ಏಕೆ ಕ್ರಮ ಕೈಗೊಂಡಿಲ್ಲ ಎಂಬುದು ತಿಳಿಯದು’ ಎಂದು ಕಾಂಗ್ರೆಸ್ ಮುಖಂಡ ಎಂ.ವೀರಪ್ಪ ಮೊಯಿಲಿ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ‘ಲೋಕಮಾನ್ಯರು’ ಲೇಖನ ಮಾಲಿಕೆಯಡಿ ಉದಯ ಕುಮಾರ ಇರ್ವತ್ತೂರು ರಚಿಸಿದ, 'ಲೋಕಗೆಂದಿನ ಗಾಂಧಿಯೆರ್ ' (ಲೋಕವನ್ನೇ ಗೆದ್ದ ಗಾಂಧೀಜಿ) ಕೃತಿ  ಬಿಡುಗಡೆ ಮಾಡಿ ಅವರು ಶನಿವಾರ ಇಲ್ಲಿ ಮಾತನಾಡಿದರು.

‘ಸಮಿತಿಯ ಶಿಫಾರಸುಗಳನ್ನು ಕೇಂದ್ರ ಸರ್ಕಾರದ ಸಚಿವ ಸಂಪುಟ ಒಪ್ಪಿದರೆ ತುಳು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರ್ಪಡೆಯಾಗಲಿದೆ. ಇನ್ನಾದರೂ ಕೇಂದ್ರ ಈ ಬಗ್ಗೆ ತೀರ್ಮಾನಿಸಬೇಕು’ ಎಂದರು.

ADVERTISEMENT

‘ತುಳುನಾಡು ಭ್ರಾತೃತ್ವ ಮತ್ತು ಸತ್ಯದ ನಡವಳಿಕೆಗೆ ಹೆಸರಾದ ನೆಲ. ಇಲ್ಲಿನ ದೈವಗಳ ಕತೆಗಳಲ್ಲಿ ಸತ್ಯದ ಆವಿಷ್ಕಾರ ಹಾಗೂ ಸೋದರತ್ವ ಇದೆ. ದೈವಗಳಾಗಿರುವುದೆಲ್ಲ ಶೋಷಣೆಗೆ ಒಳಗಾದವರು. ಈಗ ಯಾವ ಕಡೆಗೆ ಹೋಗಿದೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು.‌ ಅದು ಮತ್ತೆ ಸತ್ಯದ ನಾಡಾಗಿಯೆ ಪ್ರಜ್ವಲಿಸುವಂತಾಗಬೇಕು’ ಎಂದರು.   

ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಎನ್.ಇಸ್ಮಾಯಿಲ್, ‘ಸತ್ಯ, ಅಹಿಂಸೆ, ಪ್ರೀತಿಯ ಮಹಾನ್ ದಾತಾರ ಮಹಾತ್ಮ ಗಾಂಧೀಜಿ. ಅವರನ್ನು ಯುವ ಪೀಳಿಗೆ ಸ್ವೀಕರಿಸುತ್ತಿಲ್ಲ ಎಂಬುದನ್ನು  ಒಪ್ಪಲಾರೆ. ಅವರಿಗೆ ಗಾಂಧೀಜಿಯನ್ನು ತಲುಪಿಸುವ ರೀತಿಯಲ್ಲೇ  ತಲುಪಿಸಬೇಕು' ಎಂದರು.

ಕೃತಿ ಲೇಖಕ ಉದಯ ಕುಮಾರ್ ಇರ್ವತ್ತೂರು, 'ಗಾಂಧಿಜಿಯಿಂದಲೇ ಸ್ವಾತಂತ್ರ್ಯ ಬಂದಿದ್ದು ಹೌದಾ ಎಂದು ಯುವಜನರು ಪ್ರಶ್ನಿಸುತ್ತಾರೆ. ಎಂತಹ ಕಷ್ಟದ ದಾರಿಯಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳದೇ  ಬದುಕಿದ ಗಾಂಧೀಜಿಯ ಹೆಸರೇ ಜಗತ್ತಿಗೆ ಸ್ಪೂರ್ತಿ. ಜಗತ್ತಿನಾದ್ಯಂತ ಅವರ ಸ್ಮಾರಕಗಳನ್ನು ಸುಮ್ಮನೆ ನಿರ್ಮಿಸಿಲ್ಲ’  ಎಂದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಗಾಂಧಿ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ, ಕದಿಕೆ ಟ್ರಸ್ಟ್‌ನ ಅಧ್ಯಕ್ಷೆ ಮಮತಾ ರೈ, ಸುಳ್ಯ ಗಾಂಧಿ ಚಿಂತನ ವೇದಿಕೆಯ ಸಂಚಾಲಕ ಸಂಪಾದಕ ಹರೀಶ್ ಬಂಟ್ವಾಳ, ದ.ಕ. ಜಿಲ್ಲಾ ಕೊರಗರ ಸಂಘದ ಅಧ್ಯಕ್ಷ ಸುಂದರ ಬೆಳುವಾಯಿ, ಮೂಲ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಾಸುದೇವ ಬೆಳ್ಳೆ ಮೊದಲಾದವರು ಭಾಗವಹಿಸಿದ್ದರು.

ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಅಕಾಡೆಮಿಯ ಸದಸ್ಯ ಸಂಚಾಲಕ ಕುಂಬ್ರ ದುರ್ಗಾಪ್ರಸಾದ ರೈ ಕಾರ್ಯಕ್ರಮ ನಿರೂಪಿಸಿದರು.  

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಾಂಧಿ ಭವನ ನಿರ್ಮಾಣವಾಗಬೇಕು. ಅವರ ಚಿಂತನೆಗಳನ್ನು ಈಗಿನ ಪೀಳಿಗೆಗೂ ದಾಟಿಸುವ ಚಟುವಟಿಕೆ ಅಲ್ಲಿ ನಡೆಯಬೇಕು
ಹರೀಶ್ ಬಂಟ್ವಾಳ ಸುಳ್ಯದ ಗಾಂಧಿ ಚಿಂತನ ವೇದಿಕೆಯ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.