ADVERTISEMENT

ತುಳುಭವನದಲ್ಲಿ ಮ್ಯೂಸಿಯಂ: ತಾರಾನಾಥ ಗಟ್ಟಿ

ತುಳು ಸಾಹಿತ್ಯ ಅಕಾಡೆಮಿಯ 30ನೇ ವರ್ಷದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 4:39 IST
Last Updated 21 ಜುಲೈ 2024, 4:39 IST
ನಗರದ ಉರ್ವಸ್ಟೋರ್‌ನಲ್ಲಿರುವ ತುಳುಭವನದಲ್ಲಿ ‘ಅಮೃತ ಸೋಮೇಶ್ವರ ಸಭಾಂಗಣ’ವನ್ನು ಬಿ.ರಮಾನಾಥ ರೈ ಶನಿವಾರ ಉದ್ಘಾಟಿಸಿದರು. ಮಮತಾ ಗಟ್ಟಿ, ಎ.ಸಿ.ಭಂಡಾರಿ, ಶಕುಂತಳಾ ಶೆಟ್ಟಿ, ಸದಾಶಿವ ಉಳ್ಳಾಲ್‌, ತಾರಾನಾಥ ಗಟ್ಟಿ ಕಾಪಿಕಾಡ್‌ ಮತ್ತಿತರರು ಭಾಗವಹಿಸಿದ್ದರು
ನಗರದ ಉರ್ವಸ್ಟೋರ್‌ನಲ್ಲಿರುವ ತುಳುಭವನದಲ್ಲಿ ‘ಅಮೃತ ಸೋಮೇಶ್ವರ ಸಭಾಂಗಣ’ವನ್ನು ಬಿ.ರಮಾನಾಥ ರೈ ಶನಿವಾರ ಉದ್ಘಾಟಿಸಿದರು. ಮಮತಾ ಗಟ್ಟಿ, ಎ.ಸಿ.ಭಂಡಾರಿ, ಶಕುಂತಳಾ ಶೆಟ್ಟಿ, ಸದಾಶಿವ ಉಳ್ಳಾಲ್‌, ತಾರಾನಾಥ ಗಟ್ಟಿ ಕಾಪಿಕಾಡ್‌ ಮತ್ತಿತರರು ಭಾಗವಹಿಸಿದ್ದರು   

ಮಂಗಳೂರು: ‘ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ತುಳು ಭಾಷೆ, ಸಂಸ್ಕೃತಿ  ಅಧ್ಯಯನ, ದಾಖಲೀಕರಣ ಮಾಡುವ ಯೋಜನೆ ಹೊಂದಿದೆ. ತುಳುಭವನವನ್ನು ತುಳುನಾಡಿನ ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸಲಿದ್ದೇವೆ. ತುಳುವರ ಬದುಕು ಕಟ್ಟಿಕೊಡುವ ಮ್ಯೂಸಿಯಂ ಆರಂಭಿಸಲಿದ್ದೇವೆ’ ಎಂದು ಅಕಾಡೆಮಿಯ ಅಧ್ಯಕ್ಷ  ತಾರನಾಥ ಗಟ್ಟಿ ಕಾಪಿಕಾಡ್ ತಿಳಿಸಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 30ನೇ ವರ್ಷದ ಸಂಭ್ರಮಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಶನಿವಾರ ಮಾತನಾಡಿದರು.

‘ತುಳುವರ ಡೋಲು–ದುಡಿಯಂತಹ ಅಪೂರ್ವ ಪ್ರಕಾರಗಳು, ಈ ಸಮುದಾಯದ ಸಂಸ್ಕೃತಿ, ಆಚಾರ–ವಿಚಾರಗಳಿಗೆ ಸಂಬಂಧಿಸಿದ ವಿವಿಧ ಆಯಾಮಗಳ ದಾಖಲೀಕರಣದ ಅಗತ್ಯವಿದೆ. ಇದು ತುಳು ಭಾಷೆಗೂ ಮಹತ್ತರ ಕೊಡುಗೆಯಾಗಲಿದೆ’ ಎಂದರು.

ADVERTISEMENT

ತುಳುಭವನದಲ್ಲಿ ಅಮೃತ ಸೋಮೇಶ್ವರ ಸಭಾಂಗಣವನ್ನು ಉದ್ಘಾಟಿಸಿದ ಮಾಜಿ ಸಚಿವ ಬಿ.ರಮಾನಾಥ ರೈ, ‘ಸಮಾಜದಲ್ಲಿ ಸಾಮರಸ್ಯ ತರುವ ಶಕ್ತಿ ತುಳು ಭಾಷೆಗಿದೆ. ಪಂಚದ್ರಾವಿಡ ಭಾಷೆಗಳಲ್ಲೊಂದಾದ ಈ ಭಾಷೆ ಬಗ್ಗೆ ಹೆಮ್ಮೆ ಪಡಬೇಕೇ ಹೊರತು, ಕೀಳರಿಮೆ ಸಲ್ಲದು. ತುಳು ಸಾಹಿತ್ಯದ ಏಳಿಗೆಗಾಗಿ ದುಡಿದ ಅಮೃತ ಸೋಮೇಶ್ವರ ಅವರ ಹೆಸರನ್ನು ಈ ಸಭಾಂಗಣಕ್ಕೆ ಇಟ್ಟಿರುವ ಅಕಾಡೆಮಿಯು ಅವರ ಹೆಸರನ್ನು ಜನ ಸ್ಮರಿಸುವಂತೆ ಮಾಡಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ವ್ಯಾನಿ ಅಲ್ವಾರಿಸ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ, ತುಳು ಸಾಹಿತಿ ಇಂದಿರಾ ಹೆಗ್ಗಡೆ, ಪ್ರಮುಖರಾದ ಎಚ್.ಎಂ. ವಾಟ್ಸನ್, ಎಂ.ದೇವದಾಸ್, ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಭಾಗವಹಿದ್ದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತುಳು ಭಾಷೆಯಲ್ಲಿ 100ಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.  ಕುಂಬ್ರ ದುರ್ಗಾ ಪ್ರಸಾದ್ ನಿರೂಪಿಸಿದರು. ಉದ್ಯಾವರ ನಾಗೇಶ ಕುಮಾರ್ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.