ADVERTISEMENT

ತುಳು ಭಾಷೆಗೆ ಮಾನ್ಯತೆ | ಸಿಎಂ ಜೊತೆ ಚರ್ಚಿಸಿ ರೂಪುರೇಷೆ: ಖಾದರ್

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2025, 13:53 IST
Last Updated 15 ಮಾರ್ಚ್ 2025, 13:53 IST
ಯು.ಟಿ.ಖಾದರ್
ಯು.ಟಿ.ಖಾದರ್   

ಮಂಗಳೂರು: ತುಳುಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ ನೀಡುವ ಸಂಬಂಧ ಬಜೆಟ್‌ ಅಧಿವೇಶನದ ನಂತರ ಮುಖ್ಯಮಂತ್ರಿ ಜೊತೆ ಚರ್ಚಿಸಿ ಅಂತಿಮ ರೂಪುರೇಷೆ ಸಿದ್ಧಪಡಿಸಲು ಯೋಚಿಸಲಾಗಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ಶನಿವಾರ ಇಲ್ಲಿ ಆಯೋಜಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಂಗಳೂರಿನಿಂದ ಬ್ರಹ್ಮಾವರದವರೆಗೆ ಮಾತ್ರ ತುಳು ಭಾಷೆ ಮಾತನಾಡುವವರು ಇದ್ದಾರೆ. ತುಳುಭಾಷಿಕರ ಸಂಖ್ಯೆ 10 ಲಕ್ಷಕ್ಕೂ ಕಡಿಮೆ ಇದೆ. ಕರಾವಳಿಯ ತುಳು ವಿದ್ವಾಂಸರ ಸಲಹೆ ಪಡೆದು, ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು. ಲಂಬಾಣಿಗರು ಅವರ ಭಾಷೆಗೆ ಮಾನ್ಯತೆ ನೀಡುವಂತೆ ಒತ್ತಡ ತರುತ್ತಿದ್ದಾರೆ ಎಂದರು.

ADVERTISEMENT

ಉಳ್ಳಾಲದಲ್ಲಿ ಒಂದೂವರೆ ಎಕರೆಯಲ್ಲಿ ತುಳುಗ್ರಾಮ ಸ್ಥಾಪನೆಗೆ ಯೋಚಿಸಲಾಗಿದ್ದು, ಅದನ್ನು ಪ್ರವಾಸಿ ಕೇಂದ್ರವಾಗಿ ರೂಪಿಸಲಾಗುವುದು. ತುಳುಭಾಷೆ ಉಳಿಸುವ ನಿಟ್ಟಿನಲ್ಲಿ ತುಳು ವಾರ ಪತ್ರಿಕೆ ಹೊರತಂದು, ಪ್ರತಿ ಮನೆಯಲ್ಲಿ ಕಡ್ಡಾಯ ಚಂದಾದಾರಿಕೆ ಇರಬೇಕು ಎಂದರು.

ಚಳವಳಿ ಪ್ರಾರಂಭಿಸಿ: ಜನಗಣತಿ ನಡೆಯುವ ವೇಳೆ ಆಡುಭಾಷೆಯನ್ನು ಸ್ಪಷ್ಟವಾಗಿ ತಿಳಿಸುವ ಕೆಲಸ ಆಗಬೇಕು. ಈ ಬಗ್ಗೆ ಜಾಗೃತಿ ಮೂಡಿಸಲು ತುಳು ಸಾಹಿತ್ಯ ಅಕಾಡೆಮಿ ಚಳವಳಿ ಪ್ರಾರಂಭಿಸಲಿ. ಜನಗಣತಿಯಲ್ಲಿ ನಮೂದಾಗಿರುವ ಭಾಷೆ, ಭಾಷಿಕರ ಸಂಖ್ಯೆ ಆಧರಿಸಿ, ಅನೇಕ ಕಾರ್ಯಕ್ರಮಗಳು ರೂಪಿತವಾಗುತ್ತವೆ. ಆದರೆ, ಅರಿವಿನ ಕೊರತೆಯಿಂದ ನಾವು ಜನಗಣತಿ ವೇಳೆ ನೀಡುವ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದರು. 

ವಿನಾಶದ ಅಂಚಿನಲ್ಲಿರುವ ಎಲ್ಲ ಭಾಷೆಗಳ ಬಗ್ಗೆಯೂ ಈ ರೀತಿ ಜಾಗೃತಿ ನಡೆಯಲಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.