ಮಂಗಳೂರು: ‘ತುಳು ಭಾಷೆಯನ್ನು ರಾಜ್ಯದ ದ್ವಿತೀಯ ಅಧಿಕೃತ ಭಾಷೆ ಯನ್ನಾಗಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರ ಅನುಷ್ಠಾನಗೊಳ್ಳುವ ಸಾಧ್ಯತೆಗಳಿವೆ’ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು.
ತುಳು ಸಾಹಿತ್ಯ ಅಕಾಡೆಮಿ, ಸಿಂಗಾರ ಸುರತ್ಕಲ್ ಮತ್ತು ಚೇಳ್ಯಾರು ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಭಾಗಿತ್ವದಲ್ಲಿ ಬುಧವಾರ ಪ್ರಾರಂಭವಾದ ‘ನಲ್ಮೆ– ಬಲ್ಮೆ’ ಮೂರು ದಿನಗಳ ರಂಗ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತುಳುನಾಡಿನ ಸಾಹಿತ್ಯ, ಸಂಸ್ಕೃತಿಯನ್ನು ವಿದ್ಯಾರ್ಥಿ ಸಮುದಾಯಕ್ಕೆ ತಲುಪಿಸುವ ಜವಾಬ್ದಾರಿ ಹಿರಿಯ ತಲೆಮಾರಿಗೆ ಇದೆ. ಈ ನಿಟ್ಟಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಗೊಳಿಸುತ್ತಿದೆ ಎಂದರು.
ಕಾರ್ಯಾಗಾರ ಉದ್ಘಾಟಿಸಿದ ರಂಗ ಕಲಾವಿದೆ ಗೀತಾ ಸುರತ್ಕಲ್ ಮಾತನಾಡಿ, ರಂಗಭೂಮಿ ಆತ್ಮವಿಶ್ವಾಸ ಮತ್ತು ಮಾನವೀಯ ಮೌಲ್ಯ ಕಲಿಸುತ್ತದೆ ಎಂದರು.
ಚೇಳ್ಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಾನಂದ, ಸಂಶೋಧಕಿ ಇಂದಿರಾ ಹೆಗ್ಗಡೆ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೆಂಕಟೇಶ್ ಶೆಟ್ಟಿ, ಸದಸ್ಯ ಪುಷ್ಪರಾಜ್ ಶೆಟ್ಟಿ, ಸಿಂಗಾರ ಸುರತ್ಕಲ್ ಕಾರ್ಯದರ್ಶಿ ಕೃಷ್ಣ ಮೂರ್ತಿ ಪಿ. ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ಚೇಳ್ಯಾರು ಸ್ವಾಗತಿಸಿದರು. ಉಪನ್ಯಾಸಕಿ ಜಯಶ್ರೀ ಜಿ. ವಂದಿಸಿದರು.
ಉಪನ್ಯಾಸಕ ಚಂದ್ರನಾಥ್ ಎಂ. ನಿರೂಪಿಸಿದರು. ರಂಗ ನಿರ್ದೇಶಕ ಜಗನ್ ಪವಾರ್ ಬೇಕಲ್, ಕನ್ನಡ ಸಾಹಿತ್ಯ ಪರಿಷತ್ ಸುರತ್ಕಲ್ ಹೋಬಳಿ ಘಟಕದ ಅಧ್ಯಕ್ಷೆ ಗುಣವತಿ ರಮೇಶ್, ಉಪನ್ಯಾಸಕಿಯರಾದ ಶೋಭಾ ಶರ್ಮಾ, ಜಯಶ್ರೀ, ತ್ರಿವೇಣಿ, ವಿದ್ಯಾರ್ಥಿ ಸಾಂಸ್ಕೃತಿಕ ಕಾರ್ಯದರ್ಶಿ ರಕ್ಷಿತ್, ವಿದ್ಯಾರ್ಥಿ ನಾಯಕ ರಾದ ಚಂದನ್ ಮತ್ತು ಅಕ್ಷತಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.