ಪುತ್ತೂರು: ತಾಲ್ಲೂಕಿನ ಮುಂಡೂರು ಗ್ರಾಮದ ಬರೆಕೊಲಾಡಿಯಲ್ಲಿ ಜಾಗದ ವಿಚಾರದಲ್ಲಿ ಅಕ್ಕಪಕ್ಕದ ಮನೆಯ ಎರಡು ಕುಟುಂಬಗಳ ನಡುವೆ ಸೋಮವಾರ ರಾತ್ರಿ ಹೊಡೆದಾಟ ನಡೆದಿದ್ದು, ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಸಂಪ್ಯ ಪೊಲೀಸ್ ಠಾಣೆಯಲ್ಲಿ ಎರಡೂ ಕುಟುಂಬಗಳು ಪ್ರತ್ಯೇಕ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
‘ಸೋಮವಾರ ರಾತ್ರಿ ತೋಟದ ಮೂಲಕ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಗಳಾದ ಕೇಶವ, ಧನಂಜಯ, ಜಗದೀಶ ಎಂಬುವರು ತಡೆದು ನಿಲ್ಲಿಸಿ, ಹಲ್ಲೆ ನಡೆಸಿದ್ದಾರೆ. ಗಲಾಟೆ ಕೇಳಿ ಸ್ಥಳಕ್ಕೆ ಬಂದ ತಾಯಿ ಸವಿತಾ ಅವರಿಗೂ ಆರೋಪಿಗಳು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ. ಗಲಾಟೆಯ ವೇಳೆ ತನ್ನ ಮೊಬೈಲ್ ಮತ್ತು₹ 25 ಸಾವಿರ ಹಣವಿದ್ದ ಪರ್ಸ್ ಕಳೆದು ಹೋಗಿದೆ’ ಎಂದು ಸಂತೋಷ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಸಂತೋಷ್ ಮತ್ತು ಸವಿತಾ ನಗರದ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ.
ಪ್ರತಿದೂರು :
ಇದೇ ಘಟನೆಗೆ ಸಂಬಂಧಿಸಿ ಕೇಶವ ನಾಯ್ಕ್ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.‘ಸಂದೀಪ್ ಮತ್ತು ಸಂತೋಷ್ ಅವರ ಪತ್ನಿ ಜೊತೆ ಬಂದು ಸೋಮವಾರ ರಾತ್ರಿ ನನ್ನ ಜಮೀನಿನ ಬೇಲಿ ಕಿತ್ತರು. ಇದನ್ನು ಪ್ರಶ್ನಿಸಿದಾಗ ಅವಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆಯೊಡ್ಡಿದ್ದಾರೆ. ಅಲ್ಲೇ ಇದ್ದ ಕೊರಗಪ್ಪ ನಾಯ್ಕ್ ಮತ್ತು ಅವರ ಪತ್ನಿ ಸವಿತಾ ಕೂಡ ಅವಾಚ್ಯವಾಗಿ ಬೈದಿದ್ದಾರೆ. ಈ ಬಗ್ಗೆ ದೂರು ನೀಡಲು ನಾನು ಚಿಕ್ಕಪ್ಪನ ಪುತ್ರ ಧನಂಜಯ ಅವರೊಂದಿಗೆ ತೆರಳುತ್ತಿದ್ದಾಗ ಸಂತೋಷ್ ನನಗೆ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ್ದಾರೆ. ಗಲಾಟೆ ಕೇಳಿ ಬಂದ ನನ್ನ ತಾಯಿ ಜಯಂತಿ ಅವರಿಗೂ ಹಲ್ಲೆ ನಡೆಸಿದ್ದಾರೆ’ ಅವರು ಆರೋಪಿಸಿದ್ದಾರೆ. ಕೇಶವ ನಾಯ್ಕ್ ಮತ್ತು ಜಯಂತಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ.
‘ಜಾಗದ ವಿವಾದಕ್ಕಾಗಿ ನಡೆದ ಹಲ್ಲೆ ಇದಾಗಿದೆ. ರಾಮ ಮಂದಿರದ ಮಂತ್ರಾಕ್ಷತೆ ವಿತರಣೆ ಮಾಡುತ್ತಿದ್ದ ವೇಳೆ ಬಿಜೆಪಿಗರ ಮೇಲೆ ಪುತ್ತಿಲ ಪರಿವಾರದ ಬೆಂಬಲಿಗರಿಂದ ಹಲ್ಲೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದುದು’ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.