ADVERTISEMENT

ಮಂಗಳೂರು | ಕೋಮು ದ್ವೇಷದಿಂದ ಇಬ್ಬರ ಕೊಲೆ: ಒಟ್ಟು 10 ಮಂದಿ ದೋಷಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 4:31 IST
Last Updated 15 ಏಪ್ರಿಲ್ 2024, 4:31 IST
ಆನಂದ ಸಪಲ್ಯ
ಆನಂದ ಸಪಲ್ಯ   

ಮಂಗಳೂರು: ಕೋಮು ದ್ವೇಷದಿಂದ ಇಬ್ಬರ ಕೊಲೆ ಪ್ರಕರಣದಲ್ಲಿ ಒಟ್ಟು 10 ಮಂದಿ ದೋಷಿಗಳು ಎಂದು ಒಂದನೇ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯ ಘೋಷಿಸಿದ್ದು ಇದೇ 15ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

2015ರಲ್ಲಿ ಬಂಟ್ವಾಳ ತಾಲ್ಲೂಕು ಸಜಿಪ ಮೂಡ ಗ್ರಾಮದ ಕೊಳಕೆಯಲ್ಲಿ ನಡೆದ ಮೊಹಮ್ಮದ್ ನಾಸಿರ್ ಎಂಬವರನ್ನು ಕೊಲೆ ಮಾಡಿದ ವಿಜೇತ್ ಕುಮಾರ್ (22), ಕಿರಣ್ ಪೂಜಾರಿ (24), ಅನೀಶ್‌ (23) ಮತ್ತು ಅಭಿ (24) ದೋಷಿಗಳು ಎಂದು ಸಾಬೀತಾಗಿದೆ. 2016ರಲ್ಲಿ ಉಳ್ಳಾಲ ಗ್ರಾಮದ ಕೋಟೆಪುರದಲ್ಲಿ ರಾಜೇಶ್ ಕೋಟ್ಯಾನ್ ಅವರ ಹತ್ಯೆ ಮಾಡಿದ ಮೊಹಮ್ಮದ್ ಆಸಿಫ್‌ (23), ಮೊಹಮ್ಮದ್ ಸುಹೈಲ್‌ (20), ಅಬ್ದುಲ್ ಮುತಾಲಿಕ್ (20) ಮತ್ತು ಅಬ್ದುಲ್‌ ಅಸ್ಫೀರ್ (19) ದೋಷಿಗಳು ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣದಲ್ಲಿ ಇಬ್ಬರು ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕರಾಗಿದ್ದು ಅವರ ವಿಚಾರಣೆ ಬಾಲನ್ಯಾಯ ಮಂಡಳಿಯಲ್ಲಿ ಬಾಕಿ ಇದೆ.

ADVERTISEMENT

ಮೊಹಮ್ಮದ್ ನಾಸಿರ್ 2015ರ ಆಗಸ್ಟ್ 6ರಂದು ಮುಡಿಪು ಕಡೆಗೆ ಹೋಗುವುದಕ್ಕಾಗಿ ಮೊಹಮ್ಮದ್ ಮುಸ್ತಫಾ ಅವರ ಆಟೊ ಹತ್ತಿದ್ದರು. ಕೊಳಕೆ ಬಳಿ ತಲುಪಿದಾಗ ದ್ವಿಚಕ್ರ ವಾಹನಗಳಲ್ಲಿ ಬಂದ ಆರೋಪಿಗಳು ದಾರಿ ಕೇಳುವ ನೆಪದಲ್ಲಿ ಆಟೊ ನಿಲ್ಲಿಸಿ ಮುಸ್ತಫಾ ಮತ್ತು ನಾಸಿರ್ ಮೇಲೆ ತಲವಾರ್‌ನಿಂದ ಹಲ್ಲೆ ಮಾಡಿದ್ದರು. ಮುಸ್ತಫಾ ಗಂಭೀರ ಗಾಯಗೊಂಡಿದ್ದರೆ, ನಾಸಿರ್ ಮರುದಿನ ಸಾವಿಗೀಡಾಗಿದ್ದರು.

ಬಂಟ್ವಾಳ ತಾಲ್ಲೂಕು ಮಂಚಿ ಗ್ರಾಮದ ವಿಜೇತ್ ಕುಮಾರ್‌, ಮಂಚಿ ಗ್ರಾಮದ ಅಭೀ, ಮಂಗಳೂರು ತಾಲ್ಲೂಕು ಬಡಗ ಉಳಿಪ್ಪಾಡಿಯ ಕಿರಣ್‌ ಮತ್ತು ತಿರುವೈಲು ಗ್ರಾಮದ ಅನೀಶ್‌ ರಕ್ತಸಿಕ್ತ ಬಟ್ಟೆಗಳನ್ನು ಪಾಣೆಮಂಗಳೂರು ಬಳಿ ನೇತ್ರಾವತಿ ನದಿಗೆ ಎಸೆದು ಹೋಗಿದ್ದರು.

ರಾಜೇಶ್ ಕೋಟ್ಯಾನ್ ಅವರನ್ನು 2016ರ ಏಪ್ರಿಲ್ 12ರಂದು ಮುಂಜಾನೆ ಮೀನುಗಾರಿಕೆಗೆ ಹೋಗುತ್ತಿದ್ದಾಗ ದೊಣ್ಣೆಯಿಂದ ಹೊಡೆದು ಕೊಂದು ಮುಖವನ್ನು ಕಲ್ಲಿನಿಂದ ಜಜ್ಜಿ ಪರಿಚಯ ಸಿಗದಂತೆ ಮಾಡಲಾಗಿತ್ತು. ಉಳ್ಳಾಲ ಕೋಡಿ ರಸ್ತೆಯ ಮೊಹಮ್ಮದ್ ಆಸಿಫ್‌, ಮುಕ್ಕಚ್ಚೇರಿಯ ಮೊಹಮ್ಮದ್ ಸುಹೈಲ್‌, ಕೋಡಿ ಮಸೀದಿ ಬಳಿಯ ಅಬ್ದುಲ್ ಮುತಾಲಿಕ್ ಹಾಗೂ ಉಳಿಯ ರಸ್ತೆಯ ಅಬ್ದುಲ್ ಅಸ್ವೀರ್ ಬಂಧಿಸಿದ ಉಳ್ಳಾಲ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.