ADVERTISEMENT

ಉಳ್ಳಾಲಕ್ಕೆ ಎರಡು ಮಹಿಳಾ ಕಾಲೇಜು: ಸ್ಪೀಕರ್ ಯು.ಟಿ. ಖಾದರ್

ಮಹಿಳೆಯರ ಸಬಲೀಕರಣಕ್ಕೆ ಪೂರಕ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 4:49 IST
Last Updated 22 ಜುಲೈ 2025, 4:49 IST
ಯು.ಟಿ.ಖಾದರ್ 
ಯು.ಟಿ.ಖಾದರ್    

ಮಂಗಳೂರು: ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದಂತೆ ಉಳ್ಳಾಲ ಕ್ಷೇತ್ರಕ್ಕೆ ವಸತಿಯುತ ಮಹಿಳಾ ಕಾಲೇಜು ಪ್ರಾರಂಭಕ್ಕೆ ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಇದಕ್ಕಾಗಿ ₹17 ಕೋಟಿ ಅನುದಾನ ಮಂಜೂರು ಆಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ವಸತಿ ಶಾಲೆಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಅವಕಾಶ ದೊರೆಯುವುದಿಲ್ಲ. ಸ್ಥಳೀಯರ ಸಹಕಾರದಿಂದ ನಿರ್ಮಾಣವಾಗುವ ಶಾಲೆಗಳಲ್ಲಿ ಸ್ಥಳೀಯರೇ ಅವಕಾಶ ವಂಚಿತರಾಗುತ್ತಾರೆ. ಈ ಕಾರಣಕ್ಕೆ ನಿಯಮದಲ್ಲಿ ವಿನಾಯಿತಿ ನೀಡಿ, ಮನೆಯಿಂದ ಕಾಲೇಜಿಗೆ ಬರುವ ವಿದ್ಯಾರ್ಥಿನಿಯರಿಗೂ (ಡೇ ಸ್ಕಾಲರ್‌) ಅವಕಾಶ ಕಲ್ಪಿಸಲಾಗುವುದು ಎಂದರು.

ಕೊಣಾಜೆ ಅಥವಾ ಪಜೀರುವಿನಲ್ಲಿ ಸ್ಥಳ ಗುರುತಿಸಲಾಗುವುದು. ಮಂಗಳೂರು ವಿಶ್ವವಿದ್ಯಾಲಯದ ಸಮೀಪ ಜಾಗ ದೊರೆತಿದರೆ, ಬಸ್ ಸೌಲಭ್ಯ ಸೇರಿದಂತೆ ಎಲ್ಲ ದೃಷ್ಟಿಯಿಂದ ಅನುಕೂಲ. 1ನೇ ತರಗತಿಯಿಂದ ಪದವಿ ಶಿಕ್ಷಣದವರೆಗೆ ಇಲ್ಲಿಯೇ ದೊರೆಯುವಂತೆ ಮಾಡುವ ಯೋಚನೆ ಇದೆ. ಮಂಗಳವಾರ (ಜು.22) ನಡೆಯುವ ಅಧಿಕಾರಿಗಳ ಸಭೆಯಲ್ಲಿ ಅಂತಿಮ ರೂಪುರೇಷೆ ಸಿದ್ಧಪಡಿಲಾಗುವುದು ಎಂದು ಹೇಳಿದರು.

ADVERTISEMENT

ಅಲ್ಪಸಂಖ್ಯಾತ ಇಲಾಖೆ ಅಡಿಯಲ್ಲಿ ಮಂಜೂರು ಆಗಿರುವ ಈ ಕಾಲೇಜಿನಲ್ಲಿ ಶೇ 75 ಅಲ್ಪಸಂಖ್ಯಾತರಿಗೆ ಹಾಗೂ ಶೇ 25 ಇತರರಿಗೆ ಪ್ರವೇಶಕ್ಕೆ ಅವಕಾಶ ಇರುತ್ತದೆ. ವಿಜ್ಞಾನ, ವಾಣಿಜ್ಯ, ಬಿಬಿಎ ಕೋರ್ಸ್ ಪ್ರಾರಂಭಿಸಲು ಯೋಚಿಸಲಾಗಿದೆ. ವಕ್ಫ್ ಮಂಡಳಿ ಅಡಿಯಲ್ಲಿ ರಾಜ್ಯದಲ್ಲಿ ಒಟ್ಟು 16 ಮಹಿಳಾ ಪಿಯು ಕಾಲೇಜು ಮಂಜೂರು ಆಗಿದ್ದು, ಅವುಗಳಲ್ಲಿ ಒಂದು ಕಾಲೇಜು ಉಳ್ಳಾಲ ನಗರಕ್ಕೆ ದೊರೆತಿದ್ದು, ಮೇಲಂಗಡಿಯಲ್ಲಿ ಸ್ಥಳ ಗುರುತಿಸಲಾಗುವುದು. ಸದ್ಯದಲ್ಲಿ ಇದಕ್ಕೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆಯಲಿದೆ ಎಂದು ಖಾದರ್ ತಿಳಿಸಿದರು. ‌

ಡ್ರೋನ್ ಸರ್ವೆ:

ಈ ಬಾರಿ ಮಳೆಗಾಲದಲ್ಲಿ ಉಳ್ಳಾಲ ಕ್ಷೇತ್ರದ ಕೆಲವು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಗರಿಷ್ಠ ಪರಿಹಾರಕ್ಕೆ ಸರ್ಕಾರವನ್ನು ವಿನಂತಿಸಲಾಗಿದೆ. ಕೆಲವು ಕಡೆ ಅತಿಕ್ರಮಣದಿಂದಲೂ ಸಮಸ್ಯೆಯಾಗಿದ್ದು, ಈ ಸಂಬಂಧ ಡ್ರೋನ್ ಮೂಲಕ ಸಮೀಕ್ಷೆ ನಡೆಸಿ, ಎಲ್ಲೆಲ್ಲಿ ಅತಿಕ್ರಮಣ ಆಗಿದೆ ಎಂದು ಗುರುತಿಸಲು ಸೂಚಿಸಲಾಗಿದೆ ಎಂದು ಹೇಳಿದರು.

‘ಹೆಸರಿಗಿಂತ ಸೌಹಾರ್ದ ಮುಖ್ಯ’:

ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಬದಲಾಯಿಸಿ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಬೇಕೆಂಬ ವಿಚಾರ ಚರ್ಚೆಯಲ್ಲಿದೆ.‌ ಹೆಸರಿನ ಹಿಂದೆ ಪರಂಪರೆ ಇತಿಹಾಸ ಸಂಸ್ಕೃತಿ ಎಲ್ಲವೂ ಅಡಕವಾಗಿರುತ್ತವೆ. ಹಿರಿಯರು ಸಾಹಿತಿಗಳು ಬರಹಗಾರರು ತಜ್ಞರ ಜೊತೆ ಸಾಧಕ–ಬಾಧಕಗಳ ಬಗ್ಗೆ ಚರ್ಚಿಸಿ ಈ ಬಗ್ಗೆ ಒಮ್ಮತದ ಅಭಿಪ್ರಾಯಕ್ಕೆ ಬರಬೇಕು. ಮಂಗಳೂರು ಅಭಿವೃದ್ಧಿಯಾಗಲು ಹೆಸರಿಗಿಂತ ಈ ನೆಲ ಸೌಹಾರ್ದ ಮುಖ್ಯ. ಅದಕ್ಕೆ ನಾವೆಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕು. ಹೆಸರಿಗಿಂತ ಪ್ರೀತಿ ವಿಶ್ವಾಸ ಭಯರಹಿತ ದ್ವೇಷರಹಿತ ಸಮಾಜ ಮಂಗಳೂರಿಗೆ ಅತಿ ಅಗತ್ಯವಾಗಿದೆ. ಇದರ ಬಗ್ಗೆಯೂ ಚರ್ಚೆಯಾಗಲಿ‌ ಎಂದು ಖಾದರ್ ಹೇಳಿದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.