
ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಕಳೆಂಜ ಗ್ರಾಮದಲ್ಲಿ ಸರ್ವೆ ನಂ.309ರಲ್ಲಿ ಸುಮಾರು 125 ವರ್ಷಗಳಿಗಿಂತಲೂ ಹಿಂದಿನಿಂದ ವಾಸ್ತವ್ಯ ಇದ್ದ ಕುಟುಂಬದ ರೈತ ಲೋಲಾಕ್ಷ ಅವರ ಮನೆ ತೆರವು ಕಾರ್ಯಕ್ಕೆ ಸಂಬಂಧಿಸಿ ಶಾಸಕ ಹರೀಶ್ ಪೂಂಜ ಹಾಗೂ ಸಂತ್ರಸ್ತರ ಸಮ್ಮುಖದಲ್ಲಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಂದ ಸೋಮವಾರ ಜಂಟಿ ಸರ್ವೆಗೆ ಚಾಲನೆ ನೀಡಲಾಯಿತು.
ಲೋಲಾಕ್ಷ ಅವರ ಮನೆಯನ್ನು ಅರಣ್ಯ ಇಲಾಖೆ ಕೆಡವಿದ ಸಂದರ್ಭದಿಂದ ಈ ಪ್ರಕರಣ ಆರಂಭವಾಗಿದೆ. ಮನೆಯು ಗಡಿ ಗುರುತಿನಲ್ಲಿದೆ ಎಂಬ ನೆಪದಲ್ಲಿ ಅರಣ್ಯ ಇಲಾಖೆ ಮನೆಯ ಅಡಿಪಾಯ ತೆರವುಗೊಳಿಸಲು ಮುಂದಾಗಿತ್ತು. ಇದಕ್ಕಾಗಿ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಿದ್ದೆ. ಅದನ್ನು ಪರಿಶೀಲಿಸಿ ಅರಣ್ಯ ಇಲಾಖೆ ಸರ್ವೆ ಮಾಡಬೇಕೆಂದು ಸಭಾಧ್ಯಕ್ಷರು ಆದೇಶ ನೀಡಿದ್ದರು ಎಂದು ಹರೀಶ್ ಪೂಂಜ ಹೇಳಿದರು.
ಲೋಲಾಕ್ಷ ಅವರ ಮನೆಯು ಸರ್ವೆ ನಂ. 309ರಲ್ಲಿ ಬರುತ್ತದೆ ಎಂದು ಅರಣ್ಯ ಇಲಾಖೆ ವರದಿ ನೀಡಿತ್ತು. ಆದರೆ, ಈ ಸರ್ವೆ ನಂಬರ್‌ನಲ್ಲಿ 8 ಸಾವಿರ ಎಕರೆ ಹೆಚ್ಚುವರಿ ಭೂಮಿ ಇದೆ. ಇದನ್ನು ನನ್ನ ಸಮ್ಮುಖದಲ್ಲಿ ಮರು ಸರ್ವೆ ಮಾಡಬೇಕೆಂದು ಹಕ್ಕು ಚ್ಯುತಿ ಸಮಿತಿ ಮುಂದೆ ಅಭಿಪ್ರಾಯ ತಿಳಿಸಿದ್ದೆ ಎಂದು ಅವರು ಹೇಳಿದರು.
ಸರ್ವೆಗೆ ಕನಿಷ್ಠ ಮೂರು ತಿಂಗಳು ಬೇಕಾಗಬಹುದು. ನನ್ನ ಪರವಾಗಿ ಖಾಸಗಿ ಸರ್ವೆಯರ್ ದೇವರಾಜ್ ನೇತೃತ್ವದಲ್ಲಿ ಮೂರು ಮಂದಿ ಸರ್ವೆಯರ್‌ಗಳನ್ನು ನೇಮಿಸಿ ಅವರಿಗೆ ನಾನು ವೇತನ ಕೊಡುವುದಾಗಿ ಹೇಳಿದರು.
ಈ ಸರ್ವೆ ನಂಬರ್‌ನಲ್ಲಿ 200 ಮನೆಗಳಿವೆ. ಸರ್ವೆ ಮಾಡುವಾಗ ಪ್ರತಿ ಮನೆಯಿಂದ ಕನಿಷ್ಠ 5 ಮಂದಿ ಸ್ಥಳದಲ್ಲಿ ಇರಲೇಬೇಕು. ಸರ್ವೆ ಆದ ಬಳಿಕ ನಕಾಶೆ ತಯಾರಿಸಬೇಕು. ಸರ್ವೆ ಸರಿಯಾಗಿದೆ ಎಂದು ಗ್ರಾಮಸ್ಥರು ಒಪ್ಪಿಕೊಂಡರೆ ಅದನ್ನು ಅನುಮೋದಿಸಲಾಗುತ್ತದೆ. ನ.18ರಿಂದಲೇ ಸರ್ವೆ ನಡೆಸಬೇಕೆಂದು ಶಾಸಕ ಸಲಹೆ ನೀಡಿದರು.
ಸರ್ವೆ ಮಾಡಿ ಹೆಚ್ಚುವರಿ ಜಾಗವನ್ನು 94ಸಿ ಅಥವಾ ಅಕ್ರಮ-ಸಕ್ರಮದಲ್ಲಿ ನೀಡಲಾಗುವುದು. ಅಲ್ಲಿಯವರೆಗೆ ಯಾರನ್ನೂ ತೆರವುಗೊಳಿಸುವುದು ಸಾಧ್ಯವಿಲ್ಲ. ಈ ಮಧ್ಯೆ ಯಾರಿಗಾದರೂ ತೆರವಿಗೆ ನೋಟಿಸ್ ನೀಡಿದರೆ ಅರಣ್ಯ ಇಲಾಖೆ ಮುಂದೆ ಸತ್ಯಾಗ್ರಹ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದರು.
ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿಸಾನಿಕಂ, ಪುತ್ತೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಚ್.ಪಿ., ಶಿವಮೊಗ್ಗ ಕಾರ್ಯ ಯೋಜನೆ ವಲಯ ಅರಣ್ಯಧಿಕಾರಿ ಶಿವರಾಜ್ ಮಠದ್, ಕಳೆಂಜ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿಶ್ವನಾಥ್, ಸದಸ್ಯರು, ಅರಣ್ಯ ಸಮಿತಿ ಅಧ್ಯಕ್ಷ ಧನಂಜಯ ಗೌಡ ಭಾಗವಹಿಸಿದ್ದರು.
ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ಮಾತನಾಡಿ, ಒಂದು ವರ್ಷದಿಂದ ಸರ್ವೆ ನಡೆಸಲಾಗಿದೆ ಎಂದು ತಿಳಿಸಿದರು. ಅಕ್ರಮ ಸಕ್ರಮದಡಿ ಸಾಧ್ಯವಾದರೆ ಜಾಗ ಮಂಜೂರು ಮಾಡಬಹುದು ಎಂದು ಅವರು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.