ADVERTISEMENT

ಗುಡ್ಡ ಕುಸಿತದಿಂದ ಹಲವೆಡೆ ಹಾನಿ

ಉಳ್ಳಾಲ ತಾಲ್ಲೂಕು ವ್ಯಾಪ್ತಿಯಲ್ಲಿ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 2:40 IST
Last Updated 3 ಜುಲೈ 2022, 2:40 IST
ಕುತ್ತಾರುಪದವಿನ ರಾಜರಾಜೇಶ್ವರಿ ಲೇನ್‌ ಬಳಿ ಆವರಣಗೋಡೆ ಕುಸಿದು ಕಾರು ಜಖಂಗೊಂಡಿದೆ
ಕುತ್ತಾರುಪದವಿನ ರಾಜರಾಜೇಶ್ವರಿ ಲೇನ್‌ ಬಳಿ ಆವರಣಗೋಡೆ ಕುಸಿದು ಕಾರು ಜಖಂಗೊಂಡಿದೆ   

ಉಳ್ಳಾಲ: ಉಳ್ಳಾಲ ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಎಂಟು ಮನೆಗಳಿಗೆ ತೀವ್ರ ಹಾನಿಯಾಗಿದೆ. 58ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಒಂಬತ್ತು ಮನೆಗಳು ಜಲಾವೃತಗೊಂಡಿವೆ. ಗುಡ್ಡ ಕುಸಿತದಿಂದಲೂ ಕೆಲವೆಡೆ ಹಾನಿ ಉಂಟಾಗಿದೆ.

ಕೋಟೆಕಾರ್ ಪನೀರು ಬಳಿ ಅಬೂಸಾಲಿ ಮತ್ತು ಸೆಕಿನಾ ಅವರ ಮನೆ ಬದಿಯ ಮಣ್ಣು ಕುಸಿದು ಮನೆ ಆಪಾಯದಲ್ಲಿದೆ. ಹರೇಕಳ ಬೈತಾರ್ ಬಳಿ ನಾಜ್ಮ ಅವರ ಮನೆಗೆ ಮಳೆಯಿಂದ ಭಾಗಶಃ ಹಾನಿಗೊಳಗಾಗಿದೆ. ಬೋಳಿಯಾರುಗುತ್ತು ಬಳಿ ಹವ್ವಾ ಪೆಟ್ರೋಲ್ ಪಂಪ್ ಆವರಣ ಗೋಡೆ ಕುಸಿದು ಬಿದ್ದಿದೆ. ನರಿಂಗಾನ ಮೋರ್ಲ ಆರಿಫ್ ಅವರ ಮನೆಯ ತಡೆಗೋಡೆ ಕುಸಿದಿದೆ. ಮೀನಂಕೋಡಿ ಮುತಾಲಿಕ್ ಅವರ ಮನೆಯ ಹಿಂಬದಿಯಲ್ಲಿ ಗುಡ್ಡೆ ಕುಸಿತ ಉಂಟಾಗಿದೆ.

ಕುಕ್ಕಾಜೆ ಬೈಲು ಆಕಸಗಿಯಲ್ಲಿ ತೋಟಕ್ಕೆ ಮಣ್ಣು ತುಂಬಿದೆ. ಪಜೀರು ಅರ್ಕಾನದಲ್ಲಿ ರಸ್ತೆಗೆ ಗುಡ್ಡ ಕುಸಿತ ಉಂಟಾಗಿದ್ದರಿಂದ ಬದಲಿ ರಸ್ತೆ ವ್ಯವಸ್ಥೆ ಕಲ್ಪಿಸಲಾಯಿತು.

ADVERTISEMENT

ಅಡ್ಕ ಬಳಿ ಮಣ್ಣಿನ ಸಂಪರ್ಕ ರಸ್ತೆಗೆ ಹಾನಿ, ಬದಲಿ ರಸ್ತೆಯನ್ನು ಮಾಡಲಾಗಿದೆ. ಕುರ್ನಾಡು ಪಡೀಲು ಮಿತ್ತ ಕೋಡಿಯಲ್ಲಿ ರಸ್ತೆಯಲ್ಲಿ ಮಣ್ಣು ಮತ್ತು ಕೆಸರು ತುಂಬಿ ಸಂಚಾರಕ್ಕೆ ತಡೆ ಉಂಟಾಗಿತ್ತು.

ಹರೇಕಳ ಕಡೆಂಜ ಬಳಿ ಮೈಮುನ ಅವೆ ಮನೆಗೆ ಮರಬಿದ್ದು ಹಾನಿ, ಬೆಳ್ಮ ಬದ್ಯಾರ್‌ನಲ್ಲಿ ಅಬ್ದುಲ್ ರಹೆಮಾನ್ ಅವರ ಮನೆಗೆ ತಡೆಗೋಡೆ ಕುಸಿದು ಹಾನಿ ಉಂಟಾಗಿದೆ. ಅಂಬ್ಲಮೊಗರು ಅಂಗನವಾಡಿ ಬಳಿ ಗುಡ್ಡ ಕುಸಿತ, ಮದಕ ಬಳಿ ರಸ್ತೆಗೆ ಗುಡ್ಡ ಕುಸಿದುಬಿದ್ದಿದೆ.

ಮಳೆ ಸಂತ್ರಸ್ತ ಪ್ರದೇಶಗಳಿಗೆ ಶಾಸಕ ಯು.ಟಿ.ಖಾದರ್ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂತ್ರಸ್ತರಿಗೆ ಶೀಘ್ರ ಪರಿಹಾರ ಒದಗಿಸುವ ಭರವಸೆ ನೀಡಿದರು.

ಪ್ರಯಾಣಿಕ ಆಕ್ಷೇಪ

ಮಂಗಳೂರು: ಕುವೈಟ್‌ ವಿಮಾನಿಲ್ದಾಣವೊಂದರಲ್ಲಿ ಏರ್‌ಇಂಡಿಯಾ ಕೌಂಟರ್‌ನ ವ್ಯವಸ್ಥಾಪಕ ಉದ್ಧಟತನದ ವರ್ತನೆ ತೋರಿರುವುದಾಗಿ ಕುವೈತ್‌ನ ಅನಿವಾಸಿ ಭಾರತೀಯರಾಗಿರುವ ಎಂಜಿನಿ
ಯರ್‌ ಮಂಜೇಶ್ವರದ ಮೋಹನ್‌ದಾಸ್ ಕಾಮತ್ ಅವರು ಟ್ವೀಟ್ ಮಾಡಿದ್ದಾರೆ.

ಕಾಮತ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಸಂಸ್ಥೆಯು ಘಟನೆಗೆ ಕ್ಷಮೆ ಯಾಚಿಸಿದೆ. ‘ಪ್ರಕರಣದ ತನಿಖೆ ನಡೆಸಲು ಸಂಬಂಧಪಟ್ಟ ವಿಭಾಗಕ್ಕೆ ದೂರನ್ನು ಕಳುಹಿಸಲಾಗಿದೆ’ ಎಂದು ಮಾಹಿತಿ ನೀಡಿದೆ.

ಮೋಹನ್‌ದಾಸ್ ಅವರ ಕುಟುಂಬ ಸದಸ್ಯರು ಶುಕ್ರವಾರ ಬೆಳಗ್ಗೆ 10.50 ಕ್ಕೆ ಮಂಗಳೂರಿಗೆ ತೆರಳುವ ಏರ್‌ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಪ್ರಯಾಣದ ದಿನ ಸರದಿಯಲ್ಲಿ ನಿಂತು ತಪಾಸಣೆಗೆ ಒಳಗಾಗುವುದನ್ನು ತಪ್ಪಿಸಲು ಕಾಮತ್ ಅವರ ಕುಟುಂಬದ ಸದಸ್ಯರು ಪ್ರಯಾಣದ 24 ಗಂಟೆ ಮುಂಚಿತವಾಗಿಯೇ ವೆಬ್ ಚೆಕ್ಕಿಂಗ್ ಪೂರ್ಣಗೊಳಿಸಿದ್ದರು.

‘ವೆಬ್ ಚೆಕ್ಕಿಂಗ್ ಪೂರ್ಣಗೊಳಿಸಿದ ಪ್ರಯಾಣಿಕರು ಪ್ರಯಾಣದ ಒಂದೂವರೆ ಗಂಟೆ ಮೊದಲು ವಿಮಾನ ನಿಲ್ದಾಣಕ್ಕೆ ಆಗಮಿಸಿ ತಮ್ಮ ಲಗೇಜ್‌ಗಳನ್ನು ನಿದಿಪಡಿಸಿದ ಸ್ಥಳದಲ್ಲಿ ತಲುಪಿಸಿ ಬೋರ್ಡಿಂಗ್ ಪಾಸ್ ತೋರಿಸಿದರೆ ಸಾಕು. ಅವರು ತಪಾಸಣಾ ಪ್ರಕ್ರಿಯೆ ಪೂರ್ಣಗೊಳಿಸದ ಪ್ರಯಾಣಿಕರ ಜೊತೆ ಸರದಿನಲ್ಲಿ ನಿಲ್ಲುವ ಅಗತ್ಯವಿಲ್ಲ. ವೆಬ್‌ಚೆಕ್ಕಿಂಗ್ ಮಾಡಿಸಿಕೊಂಡಿದ್ದರೂ ನಮ್ಮ ಕುಟುಂಬವನ್ನು ತಪಾಸಣೆ ಸಲುವಾಗಿ ಇತರ ಪ್ರಯಾಣಿಕರ ಜೊತೆಯಲ್ಲೇ ಸರದಿಯಲ್ಲಿ ನಿಲ್ಲಿಸಲಾಯಿತು. ಇದನ್ನು ಪ್ರಶ್ನಿಸಿದಾಗ ಈ ಬಗ್ಗೆ ಏರ್‌ಇಂಡಿಯಾ ಕೌಂಟರ್‌ನ ವ್ಯವಸ್ಥಾಪಕರು ಉದ್ಧಟತನದಿಂದ ಉತ್ತರಿಸಿದರು’ ಎಂದು ಮೋಹನ್‌ದಾಸ್ ಕಾಮತ್ ಟ್ವೀಟ್ ಮಾಡಿದ್ದರು.

ಕಸದ ಲಾರಿ ಪಲ್ಟಿ

ಮಂಗಳೂರು: ಪಚ್ಚನಾಡಿ ಭೂಭರ್ತಿ ಕೇಂದ್ರದಿಂದ ಪ್ಲಾಸ್ಟಿಕ್ ಕಸವನ್ನು ಕಲಬುರಗಿಗೆ ಒಯ್ಯುತ್ತಿದ್ದ ಲಾರಿಯೊಂದು ಕುಡುಪು ಬಳಿಯ ತಿರುವಿನಲ್ಲಿ ಶನಿವಾರ ಮಧ್ಯಾಹ್ನ ಉರುಳಿಬಿದ್ದಿದೆ.

ಕುಡುಪು ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಲಾರಿ ರಸ್ತೆ ಪಕ್ಕಕ್ಕೆ ಉರುಳಿದೆ. ಲಾರಿಯಲ್ಲಿದ್ದ ಪ್ಲಾಸ್ಟಿಕ್ ಕಸವು ರಸ್ತೆಯ ಪಕ್ಕಕ್ಕೆ ಚೆಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.