ADVERTISEMENT

ಉಪ್ಪಿನಂಗಡಿ: ನದಿಯಲ್ಲಿ ತೇಲಿ ಹೋದ ಮೃತದೇಹ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 5:23 IST
Last Updated 29 ಆಗಸ್ಟ್ 2024, 5:23 IST

ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ನದಿಯಲ್ಲಿ ಬುಧವಾರ ಸಂಜೆ ವ್ಯಕ್ತಿಯೊಬ್ಬರ ಮೃತದೇಹವೊಂದು ತೇಲಿ ಹೋಗಿದೆ.

ಪ್ರವಾಹ ರಕ್ಷಣಾ ತಂಡದವರು ಮೃತದೇಹವನ್ನು ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. 
ನೀಲಿ ಬಣ್ಣದ ಒಳ ಉಡುಪನ್ನು ಧರಿಸಿದ್ದ ವ್ಯಕ್ತಿಯ ಮೃತದೇಹವೊಂದು ನದಿಯಲ್ಲಿ ತೇಲಿ ಹೋಗುತ್ತಿರುವುದನ್ನು ಸಾರ್ವಜನಿಕರು ಮಠ ಪ್ರದೇಶದಲ್ಲಿ ನೋಡಿದ್ದರು.

ಉಪ್ಪಿನಂಗಡಿ ಬಸ್ ನಿಲ್ದಾಣ ಬಳಿಯ ನೇತ್ರಾವತಿ ಸೇತುವೆಯ ಮೇಲೆ ನಿಂತಿದ್ದ ಸಾರ್ವಜನಿಕರಿಗೂ ಅದು ಕಾಣಸಿಕ್ಕಿತ್ತು. ಅವರು ಗೃಹರಕ್ಷಕ ದಳ ಹಾಗೂ ಪ್ರವಾಹ ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದ್ದರು. ರಕ್ಷಣಾ ತಂಡವು ಸ್ಥಳಕ್ಕೆ ಬರುವಷ್ಟರಲ್ಲಿ ದೇಹವು ನದಿಯಲ್ಲಿ ಮತ್ತಷ್ಟು ಮುಂದಕ್ಕೆ ಸಾಗಿತ್ತು. 

ADVERTISEMENT

‘ನಮ್ಮದು 30 ಎಚ್‌ಪಿ ಸಾಮರ್ಥ್ಯದ ಮೋಟಾರಿನ ರಬ್ಬರ್ ದೋಣಿ. ನದಿಯಲ್ಲಿ ನೀರಿನ ಮಟ್ಟ 25.05 ಮೀ.ಗಿಂತ  ಹೆಚ್ಚು ಇದ್ದರೆ ಮಾತ್ರ  ಇದಕ್ಕೆ ಒಬಿಎಂ (ಎಂಜಿನ್) ಸಿಕ್ಕಿಸಿ ಬಳಸಬಹುದು. ನೀರಿನ ಮಟ್ಟ  ಇದಕ್ಕಿಂತ ಕಡಿಮೆ ಇದ್ದರೆ  ಯಂತ್ರದ ರೆಕ್ಕೆಗಳು ನದಿಯಲ್ಲಿರುವ ಕುರುಚಲು ಗಿಡಗಳಿಗೆ ಸಿಲುಕುತ್ತವೆ’ ಎಂದು ರಕ್ಷಣಾ ತಂಡದ ಸಿಬ್ಬಂದಿ ತಿಳಿಸಿದರು.

‘ಯಂತ್ರವನ್ನು ಸಿಕ್ಕಿಸದೆಯೇ ದೋಣಿಯನ್ನು ನದಿಗೆ ಇಳಿಸಿದೆವು.  ಆದರೆ  ನದಿಯ ಮತ್ತೊಂದು ಬದಿಯಲ್ಲಿ ಮೃತದೇಹ ತೇಲಿ ಹೋಯಿತು.  ಹುಟ್ಟಿನ ಮೂಲಕ ದೋಣಿಯನ್ನು ನದಿಯ ಮತ್ತೊಂದು ಬದಿಗೆ ಕೊಂಡೊಯ್ಯಲು ಸಾಧ್ಯವಾಗಿಲ್ಲ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.