ADVERTISEMENT

ಕೆಂಪುಕಲ್ಲು | ನಿಯಮ ಸರಳಗೊಳಿಸಿ: ಇಟ್ಟಿಗೆ ಮಾಲೀಕರ ಒಕ್ಕೂಟ ಒತ್ತಾಯ

ಸರ್ಕಾರದ ಭರವಸೆ, ಪ್ರತಿಭಟನೆ ಮುಂದೂಡಿಕೆ: ಸತೀಶ್ ಆಚಾರ್ಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 5:59 IST
Last Updated 3 ಜುಲೈ 2025, 5:59 IST
ಸುದ್ದಿಗೋಷ್ಠಿಯಲ್ಲಿ ರವಿ ರೈ ಪಜೀರು ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ರವಿ ರೈ ಪಜೀರು ಮಾತನಾಡಿದರು   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೆಂಪು ಮುರ ಇಟ್ಟಿಗೆ (ಕೆಂಪು ಕಲ್ಲು) ಸಮಸ್ಯೆಯನ್ನು ವಾರದೊಳಗೆ ಬಗೆಹರಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದ ಕಾರಣಕ್ಕೆ ಜು.3ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಮುಂದೂಡಲಾಗಿದೆ. ಒಂದು ವಾರದಲ್ಲಿ ಸಮಸ್ಯೆ ಬಗೆಹರಿಯದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೆಂಪು ಮುರ ಇಟ್ಟಿಗೆ ಮಾಲೀಕರ ಒಕ್ಕೂಟದವರು ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಸತೀಶ್ ಆಚಾರ್ಯ, ‘ಕೆಂಪು ಕಲ್ಲು ಪರವಾನಗಿ ಸರಳೀಕರಣಗೊಳಿಸುವಂತೆ ಜಿಲ್ಲಾಧಿಕಾರಿ ಭೇಟಿ ಮಾಡಿ ವಿನಂತಿಸಲಾಗಿದೆ. ಗಣಿ ಸಚಿವರ ಜೊತೆ ಸಭೆ ನಡೆಸಿ, ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದಾರೆ. ಈ ಉದ್ಯಮ ನಂಬಿಕೊಂಡು ಕೆಲಸ ಮಾಡುವ ನಮಗೆ ಹಾಗೂ ಕೂಲಿ ಕಾರ್ಮಿಕರಿಗೆ ಸರ್ಕಾರದ ಈಗಿನ ಪರವಾನಗಿ ನಿಯಮಗಳಿಂದ ತುಂಬಾ ತೊಂದರೆಯಾಗಿದೆ’ ಎಂದರು.

ಪ್ರಸ್ತುತ 3ಎ ನಿಯಮದಡಿ ಪರವಾನಗಿ ಪಡೆಯಲು ತೀವ್ರ ತೊಂದರೆಯಾಗುತ್ತದೆ. ಪಟ್ಟಾ ಜಮೀನಿನಲ್ಲಿ ಕೆಂಪು ಕಲ್ಲು ತೆಗೆಯಲೂ ಕಂದಾಯ ಇಲಾಖೆ, ಕೃಷಿ ಇಲಾಖೆಯ ನಿರಾಕ್ಷೇಪಣಾ ಪತ್ರ ಪಡೆಯಬೇಕಾಗುತ್ತದೆ. ಮಣ್ಣು ಪರೀಕ್ಷೆ ಮಾಡಿಸಬೇಕಾಗುತ್ತದೆ. ಕರಾವಳಿಯ ಅನೇಕ ಭಾಗಗಳಲ್ಲಿ ಮುರ ಮಣ್ಣನ್ನು ಐಎಲ್‌ಎಂಎಸ್ ಪರೀಕ್ಷೆ ಮಾಡಿದಾಗ, ಇದರಲ್ಲಿ ಶೇ 20ಕ್ಕಿಂತ ಹೆಚ್ಚು ಖನಿಜಾಂಶ ಕಂಡುಬಂದಿಲ್ಲ. ಈ ಕಾರಣಕ್ಕೆ ಮಣ್ಣು ಪರೀಕ್ಷೆಗೆ ಒಳಪಡಿಸುವುದನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. 

ADVERTISEMENT

3ಎ ಪರವಾನಗಿ ಅಡಿಯಲ್ಲಿ ಒಂದು ಟನ್ ಮುರ ಇಟ್ಟಿಗೆಗೆ ₹282 ತೆರಿಗೆ ವಿಧಿಸಲಾಗಿದ್ದು, ಪಕ್ಕದ ಕೇರಳದಲ್ಲಿ ₹32 ನಿಗದಿಗೊಳಿಸಲಾಗಿದೆ. ಕೇರಳ ಮಾದರಿ ಅನುಸರಿಸಬೇಕು. ಮುರ ಇಟ್ಟಿಗೆಯನ್ನು ಕಟ್ಟಡ ನಿರ್ಮಾಣಕ್ಕೆ ಮಾತ್ರ ಬಳಸುವ ಕಾರಣ, ಇದು ಗಣಿಗಾರಿಕೆ ಆಗಲಾರದು. ಪರವಾನಗಿ ಅವಧಿಯನ್ನು ಆರು ತಿಂಗಳಿನಿಂದ ಎರಡು ವರ್ಷಕ್ಕೆ ವಿಸ್ತರಿಸಬೇಕು. ಮುರವನ್ನು ತೆಗೆಯುವ ಮೊದಲೇ ಟನ್‌ಗೆ ಶೇ 96ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಗುಣಮಟ್ಟದ ಮುರ ಇಟ್ಟಿಗೆ ದೊರೆಯದಿದ್ದಲ್ಲಿ ಇದರಿಂದ ನಷ್ಟ ಅನುಭವಿಸಬೇಕಾಗುತ್ತದೆ ಎಂದು ವಿವರಿಸಿದರು.

ಒಕ್ಕೂಟದ ಪದಾಧಿಕಾರಿಗಳಾದ ರವಿ ರೈ ಪಜೀರು, ರಾಮ ಮುಗ್ರೋಡಿ, ಮೋಹನ್ ಶೆಟ್ಟಿ, ಸುಧೀರ್ ಕೋಟ್ಯಾನ್, ರವಿ ಇದ್ದರು.

‘ಜಿಲ್ಲೆಯಲ್ಲಿ ಕೇವಲ 6 ಪರವಾನಗಿ’

ಒಕ್ಕೂಟದಲ್ಲಿ 300ರಷ್ಟು ಸದಸ್ಯರು ಇದ್ದು ಜಿಲ್ಲೆಯಲ್ಲಿ ಪ್ರಸ್ತುತ ಆರು ಪರವಾನಗಿ ಮಾತ್ರ ಇದೆ. ಹಿಂದೆ 257 ಪರವಾನಗಿ ಇತ್ತು. ಆರು ತಿಂಗಳ ಹಿಂದೆ ₹97 ಇದ್ದ ರಾಜಧನ ₹282ಕ್ಕೆ ಹೆಚ್ಚಳವಾಗಿದೆ. ರಾಜಧನ ಹೆಚ್ಚಿಸಿದ ಮೇಲೆ ಅನಧಿಕೃತ ಉದ್ಯಮ ಹೆಚ್ಚಾಗಿರುವ ಸಾಧ್ಯತೆ ಇದೆ. ನಿಯಮ ಸರಳೀಕರಣಗೊಳಿಸಿದರೆ ಪರವಾನಗಿ ಇಲ್ಲದೆ ಕೆಲಸ ಮಾಡುತ್ತಿರುವವರಿಗೆ ಪರವಾನಗಿ ಪಡೆದು ಕೆಲಸ ಮಾಡಲು ಆಗುತ್ತದೆ. ರಾಜ್ಯ ಸರ್ಕಾರದ ಆದಾಯವೂ ಹೆಚ್ಚುತ್ತದೆ ಎಂದು ಸತೀಶ್ ಆಚಾರ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.