ADVERTISEMENT

ಬಂದರು ಯೋಜನೆ: ಮೀನುಗಾರರಿಗೆ ಧಕ್ಕೆಯಾಗದಂತೆ ಕ್ರಮ -ಶ್ರೀನಿವಾಸ ಪೂಜಾರಿ ಭರವಸೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 7:21 IST
Last Updated 26 ಜನವರಿ 2022, 7:21 IST
ಸಚಿವ ಕೋಟ ಶ್ರೀನಿವಾಸ ಪೂಜಾರಿ
ಸಚಿವ ಕೋಟ ಶ್ರೀನಿವಾಸ ಪೂಜಾರಿ   

ಕಾರವಾರ: ‘15 ವರ್ಷಗಳ ನಂತರ ಜಿಲ್ಲೆಯ ಅಭಿವೃದ್ಧಿ ಹೇಗಿರಬೇಕು ಎಂದು ಯೋಚಿಸಿ ವಿವಿಧ ಯೋಜನೆಗಳನ್ನು ಜಾರಿ ಮಾಡಲಾಗುತ್ತದೆ. ಕೆಲವರು ಪರಿಸರ, ಮೀನುಗಾರಿಕೆ ಹೆಸರಲ್ಲಿ ವಿರೋಧ ಮಾಡುತ್ತಾರೆ. ನ್ಯಾಯಾಲಯದ ಆದೇಶದ ಪಾಲನೆಯೊಂದಿಗೆ, ಶಾಂತಿಗೆ ಭಂಗವಾಗದಂತೆ, ಸ್ಥಳೀಯರಿಗೆ ನೋವಾಗದಂತೆ ಕಾಮಗಾರಿಗಳನ್ನು ಮುಂದುವರಿಸಲಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದಲ್ಲಿ ಬುಧವಾರ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾವರದಲ್ಲಿ ಖಾಸಗಿ ಬಂದರು ಮತ್ತು ಕಾರವಾರದ ಸಾಗರಮಾಲಾ ಯೋಜನೆಗೆ ವ್ಯಕ್ತವಾಗುತ್ತಿರುವ ವಿರೋಧಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

'ಹೊನ್ನಾವರ ಬಂದರು ಕಾಮಗಾರಿಗೆ ವಿರೋಧ ಮತ್ತು ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದುಕೊಳ್ಳುವೆ. ದೂರಗಾಮಿ ಯೋಜನೆಗಳನ್ನು ಜಾರಿ ಮಾಡುವಾಗ ಜನರಿಗೆ ತೊಂದರೆ ಆಗದಂತೆ, ಮೀನುಗಾರರ ಹಿತಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳಲಾಗುವುದು' ಎಂದು ಭರವಸೆ ನೀಡಿದರು.

ADVERTISEMENT

'ಮೀನುಗಾರಿಕೆಗೇ ಪ್ರಥಮ ಪ್ರಾಶಸ್ತ್ಯ ನೀಡಲಾಗುತ್ತದೆ. ವಾಣಿಜ್ಯ ಬಂದರಿನ ಜೊತೆಗೇ ಮೀನುಗಾರರ ಆದಾಯ ವೃದ‌್ಧಿಗೂ ಅವಕಾಶ ಇರುತ್ತದೆ. ಅಭಿವೃದ್ಧಿ ಹೆಸರಲ್ಲಿ ಸಂಪ್ರದಾಯ, ಪರಿಸರಕ್ಕೆ ಮಾರಕವಾದ ಕೆಲಸ ಆಗಬಾರದು. ಇವೆರಡನ್ನೂ ನಿಭಾಯಿಸಿಕೊಂಡು ಯೋಜನೆ ರೂಪಿಸಲಾಗುತ್ತದೆ' ಎಂದರು.

'ನಾಡದೋಣಿಗಳಿಗೆ ಸೀಮೆಎಣ್ಣೆ ಬದಲು ಅನಿಲ ಬಳಕೆಗೆ ಚಿಂತನೆ ನಡೆಸಲಾಗಿದೆ. ಈ ಬಗ್ಗೆ ತಜ್ಞರಿಂದ ಸಲಹೆ ಕೇಳಲಾಗಿದೆ. ಇದು ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.