ADVERTISEMENT

ಮಂಗಳೂರು | ಅಶಕ್ತರ ಮನೆ ಬಾಗಿಲಿಗೆ ಲಸಿಕೆ: ಜಿಲ್ಲಾಡಳಿತದಿಂದ ಅಭಿಯಾನ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 6:16 IST
Last Updated 19 ಜೂನ್ 2021, 6:16 IST
ಮನೆಗಳಿಗೆ ತೆರಳಿ ಲಸಿಕೆ ನೀಡಲಿರುವ ವಾಹನ.
ಮನೆಗಳಿಗೆ ತೆರಳಿ ಲಸಿಕೆ ನೀಡಲಿರುವ ವಾಹನ.   

ಮಂಗಳೂರು: ಜಿಲ್ಲೆಯಲ್ಲಿ ಉಚಿತ ಲಸಿಕಾ ಶಿಬಿರ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಅಶಕ್ತರಿಗೂ ಉಚಿತ ಲಸಿಕೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವವರು ಮತ್ತು ಅಶಕ್ತ ಹಿರಿಯ ನಾಗರಿಕರು ಸೇರಿದಂತೆ ಮನೆಯಿಂದ ಹೊರ ಬಂದು ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗದೇ ಇರುವವರ ಮನೆಗಳಿಗೆ ತೆರಳು ಲಸಿಕೆ ನೀಡಲು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ.

ಜಿಲ್ಲಾಡಳಿತ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ ಕ್ಲಬ್‌ ಮಂಗಳೂರು ಹಾಗೂ ಬ್ಯಾಂಕ್ ಆಫ್ ಬರೋಡ ಸಹಯೋಗದೊಂದಿಗೆ ಆರೋಗ್ಯ ಕಾರ್ಯಕರ್ತರು ಮನೆಗಳಿಗೆ ಬಂದು ಲಸಿಕೆ ಹಾಕಲಿದ್ದಾರೆ. ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್ dk.nic.in ನಲ್ಲಿ ನೋಂದಾಯಿಸಬೇಕು. ನೊಂದಣಿ ಮಾಡಿದ ಬಳಿಕ ದಿನ ನಿಗದಿಪಡಿಸಿ ಮನೆಗೆ ಬಂದು ಲಸಿಕೆ ನೀಡಲಾಗುವುದು.

ಮನೆ ಮನೆ ಲಸಿಕಾ ವಾಹನಕ್ಕೆ ದಿನಾಂಕ ಶನಿವಾರ (ಜೂನ್‌ 19) ಬೆಳಿಗ್ಗೆ 9.30 ಕ್ಕೆ ನಗರದ ಹಂಪನಕಟ್ಟೆಯಲ್ಲಿರುವ ಯುನಿವರ್ಸಿಟಿ ಕಾಲೇಜಿನ ಆವರಣದಲ್ಲಿ ಚಾಲನೆ ನೀಡಲಾಗುವುದು.

ADVERTISEMENT

ಚಾಲಕರಿಗೆ ಇಂದು ಲಸಿಕೆ: ಜಿಲ್ಲಾಡಳಿತ, ಮಂಗಳೂರು ವಿಶ್ವವಿದ್ಯಾಲಯದ ಯುವ ರೆಡ್‌ ಕ್ರಾಸ್‌ ಘಟಕ ಮತ್ತು ವಿಶ್ವವಿದ್ಯಾಲಯ ಕಾಲೇಜುಗಳು ಜಂಟಿಯಾಗಿ ನಗರದ ಬಸ್‌ ಸಿಬ್ಬಂದಿ ಮತ್ತು ಆಟೋ ಚಾಲಕರಿಗೆ ಕೋವಿಡ್‌- 19 ಲಸಿಕಾ ಅಭಿಯಾನವನ್ನು ವಿಶ್ವವಿದ್ಯಾಲಯ ಕಾಲೇಜಿನ ಆವರಣದಲ್ಲಿ ಶನಿವಾರ (ಜೂನ್‌ 19) ಬೆಳಿಗ್ಗೆ 10 ಗಂಟೆಗೆ ಆಯೋಜಿಸಿವೆ.

ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಅಭಿಯಾನ ಉದ್ಘಾಟಿಸಲಿದ್ದು, ಬ್ಯಾಂಕ್‌ ಆಫ್‌ ಬರೋಡದ ಪ್ರಧಾನ ವ್ಯವಸ್ಥಾಪಕಿ ಮತ್ತು ವಲಯ ಮುಖ್ಯಸ್ಥೆ ಗಾಯತ್ರಿ ಆರ್‌. ಮತ್ತು ಭಾರತೀಯ ರೆಡ್‌ ಕ್ರಾಸ್‌ ಸೊಸೈಟಿಯ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಅತಿಥಿಗಳಾಗಿ ಭಾಗವಹಿಸುವರು. ಕಾಲೇಜಿನ ಪ್ರಾಂಶುಪಾಲೆ ಡಾ.ಅನುಸೂಯಾ ರೈ ಅಧ್ಯಕ್ಷತೆ ವಹಿಸುವರು.

ಫಾದರ್ ಮುಲ್ಲರ್‌ ಆಸ್ಪತ್ರೆಯಲ್ಲೂ ಲಸಿಕೆ ಲಭ್ಯ
ಮಂಗಳೂರು:
ನಗರದ ಫಾದರ್ ಮುಲ್ಲರ್‌ ವೈದ್ಯಕೀಯ ಕಾಲೇಜಿನಲ್ಲಿ ಜೂನ್‌ 21 ರಿಂದ ಕೋವಿಶೀಲ್ಡ್‌ ಲಸಿಕೆ ಹಾಕುವ ಕಾರ್ಯಕ್ರಮ ಆರಂಭವಾಗಲಿದೆ. ಅಗತ್ಯ ಲಸಿಕೆಗಳು ಫಾದರ್ ಮುಲ್ಲರ್‌ ವೈದ್ಯಕೀಯ ಕಾಲೇಜು ತಲುಪಿದ್ದು, ನಗರದ ಪಂಪ್‌ವೆಲ್‌ನ ಫಾದರ್‌ ಮುಲ್ಲರ್ ಕನ್ವೆನ್ಷನ್‌ ಹಾಲ್‌ನಲ್ಲಿ ಲಸಿಕೆ ಕಾರ್ಯಕ್ರಮ ಆರಂಭವಾಗಲಿದೆ. ಸ್ಥಳದಲ್ಲಿ 10 ನೋಂದಣಿ ಕೌಂಟರ್‌ಗಳನ್ನು ತೆರೆಯಲಾಗಿದ್ದು, ಲಸಿಕೆ ಪಡೆಯುವವರ ಅನುಕೂಲಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ.

ಕೋವಿನ್‌ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡು ನೇರ ಬರಬಹುದು. ಇಲ್ಲವೇ ಸ್ಥಳದಲ್ಲಿಯೇ ನೋಂದಣಿ ಮಾಡಿಸಿಕೊಳ್ಳಬಹುದು. 18 ವರ್ಷ ಮೇಲಿನವರಿಗೆ ಲಸಿಕೆ ನೀಡಲಾಗುವುದು. ಪ್ರತಿ ಡೋಸ್‌ಗೆ ₹750 ದರ ನಿಗದಿಪಡಿಸಲಾಗಿದೆ ಎಂದು ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ.ಕಿಶನ್‌ ಶೆಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.