ಮಂಗಳೂರು: ಉಡುಪಿಯ ವೈಕುಂಠ ಬಾಳಿಗ ಕಾನೂನು ಕಾಲೇಜು ತಂಡ ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಭಾನುವಾರ ಮುಕ್ತಾಯಗೊಂಡ ‘ಲೆಕ್ಸ್ ಅಲ್ಟಿಮಾ’ ರಾಷ್ಟ್ರಮಟ್ಟದ ಕಾನೂನು ಹಬ್ಬದ ಸ್ಪರ್ಧೆಗಳಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು, ಸ್ನಾತಕೋತ್ತರ ಕಾನೂನು ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ಮೂಟ್ ಕೋರ್ಟ್ ಸೊಸೈಟಿ ಆಯೋಜಿಸಿದ್ದ ಹಬ್ಬದಲ್ಲಿ ಬೆಂಗಳೂರು ಕಾನೂನು ಅಧ್ಯಯನ ಸಂಸ್ಥೆ ಮತ್ತು ಬೆಂಗಳೂರಿನ ಬಿಎಂಎಸ್ ಕಾನೂನು ಕಾಲೇಜು ತಂಡಗಳು ರನ್ನರ್ ಅಪ್ ಸ್ಥಾನಗಳನ್ನು ಹಂಚಿಕೊಂಡವು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಬೆಂಗಳೂರಿನ ಯುನಿವರ್ಸಲ್ ಸ್ಕೂಲ್ ಆಫ್ ಲಾ ಪ್ರಥಮ ಹಾಗೂ ಸೌಂದರ್ಯ ಕಾನೂನು ಕಾಲೇಜು ದ್ವಿತೀಯ ಸ್ಥಾನ ಗಳಿಸಿತು. ತೀರ್ಪು ಬರಹ ಸ್ಪರ್ಧೆಯಲ್ಲಿ ಹಾಸನದ ಎಂ.ಕೃಷ್ಣ ಕಾನೂನು ಕಾಲೇಜು ಪ್ರಥಮ, ವೈಕುಂಠ ಬಾಳಿಗ ಕಾನೂನು ಕಾಲೇಜು (ವಿಬಿಸಿಎಲ್) ದ್ವಿತೀಯ ಸ್ಥಾನ ಗಳಿಸಿತು. ಕಾನೂನು ಚರ್ಚೆಯಲ್ಲಿ ಮೈಸೂರಿನ ಜೆಎಸ್‌ಎಸ್ ಪ್ರಥಮ, ಬೆಂಗಳೂರಿನ ಬಿಎಂಎಸ್ ದ್ವಿತೀಯ, ಕಾನೂನು ಅಭಿಪ್ರಾಯ ಮಂಡನೆಯಲ್ಲಿ ಬೆಂಗಳೂರಿನ ಆರ್.ವಿ ಕಾನೂನು ಅಧ್ಯಯನ ಸಂಸ್ಥೆ ಪ್ರಥಮ, ಮೈಸೂರಿನ ವಿದ್ಯಾವರ್ಧಕ ದ್ವಿತೀಯ, ಕಾನೂನು ಕರಡು ಸಿದ್ಧಪಡಿಸುವ ಸ್ಪರ್ಧೆಯಲ್ಲಿ ಉಡುಪಿಯ ವಿಬಿಸಿಎಲ್ ಪ್ರಥಮ, ಪುಣೆಯ ಬಿಇಎನ್‌ಎಂ ದ್ವಿತೀಯ ಸ್ಥಾನ ಪಡೆಯಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂಗಳಗುಪ್ಪೆ ಸೀತಾರಾಮಯ್ಯ ಇಂದಿರೇಶ್, ‘ಉತ್ತಮ ಶುಲ್ಕ ಮತ್ತು ಅವಕಾಶಗಳಿಂದಾಗಿ ವಕೀಲ ವೃತ್ತಿಯಲ್ಲಿ ಈಗ ಬದುಕನ್ನು ಸುಂದರವಾಗಿ ನಿರ್ವಹಿಸಬಹುದಾಗಿದೆ. ಮೊದಲ ನಾಲ್ಕೈದು ವರ್ಷ ಕಠಿಣ ಪರಿಶ್ರಮ ಹಾಕಿ ಸ್ವತಂತ್ರವಾಗಿ ವಕೀಲರ ಸಂಘದಲ್ಲಿ ನೊಂದಾಯಿಸಿಕೊಂಡರೆ ಭವಿಷ್ಯ ಉತ್ತಮಗೊಳ್ಳುತ್ತದೆ’ ಎಂದರು.
‘ಮೂಟ್ ಕೋರ್ಟ್‌ನಂಥ ಸ್ಪರ್ಧೆಗಳಲ್ಲಿ ಸೋಲು–ಗೆಲುವು ಮುಖ್ಯವಲ್ಲ, ಭಾಗವಹಿಸಿ ಅನುಭವ ಗಳಿಸಲು ಪ್ರಯತ್ನಿಸಬೇಕು. ಸ್ಪರ್ಧೆಗಳಲ್ಲಿ ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳ ಜೊತೆ ಬೆರೆತು ಅವರ ಸಂಸ್ಕೃತಿ ತಿಳಿದುಕೊಳ್ಳಬಹುದು, ಸಮಸ್ಯೆಗಳಿಗೆ ಸ್ಪಂದಿಸುವ ವಿಧಾನವನ್ನು ಅರಿತುಕೊಳ್ಳಬಹುದು ಎಂದು ಅವರು ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.