ವಂದೇ ಭಾರತ್ ರೈಲು
ಮಂಗಳೂರು: ಪ್ರಮುಖ ನಗರಗಳನ್ನು ಜೋಡಿಸುವ ಸೆಮಿ ಹೈಸ್ಪೀಡ್ ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಮಡಗಾಂವ್‌ಗೆ (ಗೋವಾ) ಶನಿವಾರ ಪ್ರಥಮ ಪ್ರಯಾಣ ಬೆಳೆಸಿತು. ಮಂಗಳೂರು- ಮಡಗಾಂವ್ ಸೇರಿದಂತೆ ಆರು ‘ವಂದೇ ಭಾರತ್’ ಹಾಗೂ ಎರಡು ‘ಅಮೃತ್ ಭಾರತ್’ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮಾಧ್ಯಮದಲ್ಲಿ ಶುಕ್ರವಾರ ಚಾಲನೆ ನೀಡಿದರು.
ನಿಗದಿಯಂತೆ ಬೆಳಿಗ್ಗೆ 11 ಗಂಟೆಗೆ ಹೊರಡಬೇಕಾಗಿದ್ದ ರೈಲು 12.12ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಟಿತು. ಮಂಗಳೂರಿನಿಂದ ಉಡುಪಿವರೆಗೆ ಪ್ರಯಾಣಿಸಿದ ಕೇಂದ್ರೀಯ ವಿದ್ಯಾಲಯದ ಮಕ್ಕಳು, ಗಾಜಿನ ಕಿಟಕಿಯಲ್ಲಿ ಪರಿಸರ ಸೌಂದರ್ಯ ವೀಕ್ಷಿಸುವ ಅವಕಾಶ, ರೈಲಿನಲ್ಲಿರುವ ಹೈಟೆಕ್ ಸೌಲಭ್ಯಗಳನ್ನು ಕಂಡು ಪುಳಕಗೊಂಡರು. ರೈಲ್ವೆ ಹೋರಾಟಗಾರರು, ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ಏಳು ಹವಾನಿಯಂತ್ರಿತ ಕೋಚ್‌ಗಳಿರುವ ಈ ರೈಲಿನಲ್ಲಿ ಪ್ರಯಾಣಿಸಿದರು.
‘ವಂದೇ ಭಾರತ್ ರೈಲು ಮಡಗಾಂವ್ ತಲುಪದಲು ತೆಗೆದುಕೊಳ್ಳುವ ಸಮಯ ನಾಲ್ಕೂವರೆ ತಾಸು. ಪ್ರವಾಸೋದ್ಯಮ ಮತ್ತು ಕರಾವಳಿ ನಗರಗಳ ಆರ್ಥಿಕತೆ ಚೇತರಿಕೆಗೆ ಈ ರೈಲಿನಿಂದ ಅನುಕೂಲವಾಗಲಿದೆ. ಗುರುವಾರ ಹೊರತುಪಡಿಸಿ, ವಾರದ ಎಲ್ಲ ದಿನಗಳಲ್ಲಿ ಈ ರೈಲು ಸಂಚರಿಸಲಿದೆ. ಮಂಗಳೂರು– ಬೆಂಗಳೂರು ನಡುವೆ ಏಪ್ರಿಲ್‌ನಿಂದ ವಂದೇ ಭಾರತ್ ಸಂಚಾರ ನಡೆಸಲಿದೆ’ ಎಂದು ಇದೇ ರೈಲಿನಲ್ಲಿ ಮಡಗಾಂವ್ ವರೆಗೆ ಪ್ರಯಾಣಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು. ಪಾಲ್‌ಘಾಟ್ ರೈಲ್ವೆ ವಿಭಾಗದ ಡಿಆರ್‌ಎಂ ಅರುಣ್ ಕುಮಾರ್ ಚತುರ್ವೇದಿ, ಎಡಿಆರ್‌ಎಂ ಜಯಕೃಷ್ಣನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.