ADVERTISEMENT

‘ವೀರಚಂದ್ರಹಾಸ’ ಸಿನಿಮಾಕ್ಕೆ ಉತ್ತಮ ಸ್ಪಂದನೆ: ರವಿ ಬಸ್ರೂರು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2025, 16:24 IST
Last Updated 26 ಏಪ್ರಿಲ್ 2025, 16:24 IST
ಸುದ್ದಿಗೋಷ್ಠಿಯಲ್ಲಿ ರವಿ ಬಸ್ರೂರು ಮಾತನಾಡಿದರು. ಭಾಗವತರಾದ ಪಟ್ಲ ಸತೀಶ ಶೆಟ್ಟಿ ಹಾಗೂ ಜನ್ಸಾಲೆ ರಾಘವೇಂದ್ರ ಆಚಾರ್ಯ ಭಾಗವಹಿಸಿದ್ದರು
ಸುದ್ದಿಗೋಷ್ಠಿಯಲ್ಲಿ ರವಿ ಬಸ್ರೂರು ಮಾತನಾಡಿದರು. ಭಾಗವತರಾದ ಪಟ್ಲ ಸತೀಶ ಶೆಟ್ಟಿ ಹಾಗೂ ಜನ್ಸಾಲೆ ರಾಘವೇಂದ್ರ ಆಚಾರ್ಯ ಭಾಗವಹಿಸಿದ್ದರು   

ಮಂಗಳೂರು: ‘ವೀರ ಚಂದ್ರಹಾಸ’ ಸಿನಿಮಾದ ಮೂಲಕ ಕರಾವಳಿಯ ಸಾಂಸ್ಕೃತಿಕ  ಹಗ್ಗುರುತಾಗಿರುವ ಯಕ್ಷಗಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಹಾಗೂ ಭವಿಷ್ಯದ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಮಾಡಿದ್ದೇನೆ. ಕಳೆದ ವಾರ ಬಿಡುಗಡೆಯಾದ ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಸಿಕ್ಕಿರುವುದು ಧನ್ಯತಾ ಭಾವವನ್ನು ಮೂಡಿಸಿದೆ’ ಎಂದು ಸಿನಿಮಾದ ನಿರ್ದೇಶಕ ರವಿ ಬಸ್ರೂರು ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಸಿನಿಮಾ ರಂಗದಲ್ಲಿ ಸಂಗೀತ ನಿರ್ದೇಶಕನಾಗಿ, ಕಲಾವಿದನಾಗಿ ನಾನೇನಾದರೂ ಸಾಧಿಸಿದ್ದರೆ ಅದಕ್ಕೆ ಯಕ್ಷಗಾನವೂ ಕಾರಣ. ನನ್ನ ಅಜ್ಜ ಹಾಗೂ ತಂದೆ ಯಕ್ಷಗಾನ ನಂಟು ಹೊಂದಿದ್ದರು. ನಾನು ಬಾಲಗೋಪಾಲ ವೇಷ ಹಾಕಿದ್ದು ಬಿಟ್ಟರೆ ಯಕ್ಷಗಾನ ಕಲಾವಿದನಾಗಲು ಆಗಿರಲಿಲ್ಲ. ‘ವೀರಚಂದ್ರಹಾಸ’ ಸಿನಿಮಾವನ್ನು ನಿರ್ದೇಶಿಸುವ ಮೂಲಕ ಆ ಕೊರತೆ ನೀಗಿದೆ’ ಎಂದರು. 

‘ವೀರಚಂದ್ರಹಾಸದ ಟ್ರೈಲರ್ ಬಿಡುಗಡೆ ಮಾಡಿರಲಿಲ್ಲ. ಜನ ಇದನ್ನು ಸಿನಿಮಾದ ಬದಲು ಯಕ್ಷಗಾನದಂತೆಯೇ ಆಸ್ವಾದಿಸಬೇಕೆಂಬ ಬಯಕೆ ನನ್ನದಾಗಿತ್ತು. ಇದರಲ್ಲಿ ಯಶಸ್ಸಿಯಾಗಿದ್ದೇನೆ ಎನಿಸುತ್ತಿದೆ. ಈ ಸಿನಿಮಾಕ್ಕೆ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಮೊದಲ ದಿನದಿಂದಲೇ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ. ಮೈಸೂರಿನಲ್ಲೂ ಸಿನಿಮ ಉತ್ತಮ ಪ್ರದರ್ಶನ ಕಾಣುತ್ತಿದೆ’ ಎಂದರು.

ADVERTISEMENT

‘ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಚಿತ್ರದ ಪ್ರಭಾವ  ಇದರ ಮೇಲೆ ಇರುವುದು ನಿಜ. ಆದರೆ ನಾನು ಈ ಯೋಜನೆಯನ್ನು ಅದಕ್ಕೂ ಮುನ್ನವೇ ಕೈಗೆತ್ತಿಕೊಂಡಿದ್ದೆ. 900ಕ್ಕೂ ಅಧಿಕ ಪಾತ್ರಗಳು ಇದರಲ್ಲಿದ್ದು, ಬಹುತೇಕ ಪಾತ್ರಗಳಿಗೆ ಯಕ್ಷಗಾನ ಕಲಾವಿದರನ್ನೇ ಬಳಸಿದ್ದೇವೆ. ಭವಿಷ್ಯದಲ್ಲಿ  ಈ ಮಾಧ್ಯಮವೂ ಯಕ್ಷಗಾನ ಕಲಾವಿದರಿಗೆ ನೆರವಾಗಬೇಕೆಂಬ ಉದ್ದೇಶ ನನ್ನದು’ ಎಂದರು.
 
‘ನಟ ಶಿವರಾಜ ಕುಮಾರ್ ಅವರು ಗೌರವ ಕಲಾವಿದರಾಗಿ ಯಕ್ಷಗಾದ ವೇಷದಲ್ಲೇ ಶಿವಪುಟ್ಟಸ್ವಾಮಿಯ ಪಾತ್ರದಲ್ಲಿ ನಟಿಸಿದ್ದಾರೆ. ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ, ಪಟ್ಲ ಸತೀಶ್ ಶೆಟ್ಟಿ ಚಿತ್ರಕ್ಕಾಗಿ ಹಾಡಿದ್ದಾರೆ’ ಎಂದು ಹೇಳಿದರು.

 ಬಡಗುತಿಟ್ಟಿನ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ, ‘ಆರೇಳು ಗಂಟೆಯ ಯಕ್ಷಗಾನ ಪ್ರಸಂಗವನ್ನು ಎರಡೂವರೆ ಟೆಗೆ ಇಳಿಸಿದರೂ ಎಲ್ಲೂ ಯಕ್ಷಗಾನಕ್ಕೆ ಚ್ಯುತಿ ಆಗದಂತೆ ಸಿನಿಮಾ ರೂಪಿಸಿದ್ದಾರೆ.  ಯಕ್ಷಗಾನದ ವ್ಯಾಪ್ತಿಯನ್ನು ವಿಸ್ತರಿಸುವ ಈ ಪ್ರಯತ್ನಕ್ಕೆ ಎಲ್ಲರ ಪ್ರೋತ್ಸಾಹ ಬೇಕಿದೆ’ ಎಂದರು. 

ಭಾಗವತ ಪಟ್ಲ ಸತೀಶ್ ಶೆಟ್ಟಿ, ‘ ನನಗೆ ಇದೊಂದು ದೊಡ್ಡ ಅವಕಾಶ. ಯಕ್ಷಗಾನ ಏನೂ ಗೊತ್ತಿಲ್ಲದವರು ಕೂಡ ಚಿತ್ರ ವೀಕ್ಷಣೆಯಿಂದ ಈ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬಹುದು. ಸಿನಿಮಾ ಅಷ್ಟು ಚೆನ್ನಾಗಿ ಮೂಡಿಬಂದಿದೆ’ ಎಂದರು.

ಎನ್‌.ಎಸ್‌. ರಾಜಕುಮಾರ್ ನಿರ್ಮಿಸಿರುವ ಈ ಸಿನಿಮಾದಲ್ಲಿ ಗೀತಾ ರವಿ ಬಸ್ರೂರು, ಅನೂಪ್ ಗೌಡ, ಅನುಲ್ ಕುಮಾರ್ ಪೂವ್ವಾಡಿ ಸಹ‌ ನಿರ್ಮಾಪಕರಾಗಿದ್ದಾರೆ. ರವಿ ಬಸ್ರೂರು ಸಂಗೀತ, ಕಿರಣ್ ಕುಮಾರ್ ಆರ್. ಅವರ ಛಾಯಾಗ್ರಹಣವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.