ADVERTISEMENT

ಸರಳ ವ್ಯಕ್ತಿತ್ವದ ವ್ಯಕ್ತಿ ಪುನೀತ್: ವೀರೇಂದ್ರ ಹೆಗ್ಗಡೆ

ಧರ್ಮಸ್ಥಳದಲ್ಲಿ ಹಾಡು ಹೇಳಿದ್ದ ನಟನ ಮಾಸದ ನೆನಪು: ಹಲವರಿಂದ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2021, 1:16 IST
Last Updated 30 ಅಕ್ಟೋಬರ್ 2021, 1:16 IST
2018ರಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಪುನೀತ್ ರಾಜಕುಮಾರ್, ವೀರೇಂದ್ರ ಹೆಗ್ಗಡೆ ಅವರೊಂದಿಗಿದ್ದ ಚಿತ್ರ (ಸಂಗ್ರಹ ಚಿತ್ರ)
2018ರಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಪುನೀತ್ ರಾಜಕುಮಾರ್, ವೀರೇಂದ್ರ ಹೆಗ್ಗಡೆ ಅವರೊಂದಿಗಿದ್ದ ಚಿತ್ರ (ಸಂಗ್ರಹ ಚಿತ್ರ)   

ಉಜಿರೆ: ಚಲನಚಿತ್ರನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸಂತಾಪ ವ್ಯಕ್ತಪಡಿಸಿದ್ದಾರೆ.

‘ಅವರ ನೇರ ನಡೆ-ನುಡಿ, ಸರಳ ವ್ಯಕ್ತಿತ್ವ ಮೆಚ್ಚುವಂತಹುದು. ಧರ್ಮಸ್ಥಳದಲ್ಲಿ ಆಯೋಜಿಸಿದ್ದ ಕೆಲವು ಸಮಾರಂಭಗಳಲ್ಲಿ ಅವರು ಭಾಗವಹಿಸಿದ್ದರು. ಅವರ ಅಭಿಮಾನಿಗಳೆಲ್ಲರೂ ಈ ಸಂದರ್ಭವನ್ನು ತಾಳ್ಮೆಯಿಂದ ಸ್ವೀಕರಿಸಿ ಅವರ ಆತ್ಮಕ್ಕೆ ಚಿರಶಾಂತಿ ಕೋರಬೇಕು’ ಎಂದು ಹೆಗ್ಗಡೆ ತಿಳಿಸಿದ್ದಾರೆ.

‘ತಂದೆಗೆ ತಕ್ಕ ಮಗ’

ADVERTISEMENT

ತಂದೆಯಂತೆ ನಟನಾ ಸಾಮರ್ಥ್ಯ, ಜೀವನ, ಭಕ್ತಿಪಥದಲ್ಲಿ ಸಾಗಿ ಮುಕ್ಕೋಟಿ ಕನ್ನಡಿಗರ ಮನಗೆದ್ದ ಮೇರುನಟ ಪುನೀತ್ ರಾಜ್‍ಕುಮಾರ್. ಭಗವಂತ ಅವರ ಆತ್ಮಕ್ಕೆ ಮೋಕ್ಷವನ್ನು ಕರುಣಿಸಲಿ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ 2018ರಲ್ಲಿ ಜರುಗಿದ ಭಜನಾ ಕಮ್ಮಟದ ಸಮಾರೋಪ ಸಮಾರಂಭದ ಸಂದರ್ಭ ಪುನೀತ್ ಅವರು ‘ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ’ ಹಾಡನ್ನು ಹಾಡುವ ಮೂಲಕ ಜನಸ್ತೋಮವನ್ನು ರಂಜಿಸಿದ್ದರು ಎಂದು ಸ್ಮರಿಸಿದ್ದಾರೆ.

‘ಸಜ್ಜನಿಕೆಯ ಸಾಕಾರಮೂರ್ತಿ’

‘1975ರಲ್ಲಿ ನಾನು ಹೊಸಪೇಟೆಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದಾಗ 3 ತಿಂಗಳ ಮಗು ಪುನೀತ್ ಅವರನ್ನು ಬಲ್ಲೆ. ಹೊಸಪೇಟೆಯಲ್ಲಿ ರಾಜ್‌ಕುಮಾರ್ ಅಭಿನಯಿಸಿದ ‘ಮಯೂರ’ ಸಿನಿಮಾದ ನೂರು ದಿನಗಳ ಸಂದರ್ಭದಲ್ಲಿ ರಾಜ್ ಕುಟುಂಬಸ್ಥರು ಬಂದಿದ್ದರು. ಅವರು ಉಳಿಯುವ ಅತಿಥಿ ಗೃಹದ ಉಸ್ತುವಾರಿ ಪೊಲೀಸ್ ಅಧಿಕಾರಿಯಾಗಿದ್ದ ನನಗೆ ಸಿಕ್ಕಿದ್ದು ವಿಶೇಷ’ ಎಂದು ನಿವೃತ್ತ ಎಸ್ಪಿ ಪೀತಾಂಬರ ಹೇರಾಜೆ ಹೇಳಿದ್ದಾರೆ.

‘ಮೇರು ನಟ ರಾಜ್‌ಕುಮಾರ್ ಮತ್ತು ಪಾರ್ವತಮ್ಮ ಮತ್ತು ಮಕ್ಕಳೊಂದಿಗೆ ಪ್ರೀತಿಯಿಂದ ಬೆರೆಯುವ ಸಂದರ್ಭ ಒದಗಿತ್ತು. ಮುಂದೆಯೂ ನನ್ನನ್ನು ಕಂಡಾಗ ಅತ್ಯಂತ ಆತ್ಮೀಯ ಭಾವನೆ ಪುನೀತ್‌ಗಿತ್ತು. ತಂದೆಯಂತೆಯೇ ಸರಳ ಸಜ್ಜನಿಕೆಯ ಸಾಕಾರಮೂರ್ತಿ ಪುನೀತ್. ಅವರ ಸಾವು ಸಮಸ್ತ ಕನ್ನಡಿಗರಿಗೆ ಬರಸಿಡಿಲು ಬಡಿದ ಹಾಗೆ ಆಗಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ’ ಎಂದು ಪ್ರಾರ್ಥಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.