ADVERTISEMENT

ಆಹಾರವೇ ಔಷಧಿ ಆಗಲಿ: ವೀರೇಂದ್ರ ಹೆಗ್ಗಡೆ

ಡಾ. ಗಿರಿಧರ ಕಜೆ ಅವರ ‘ಪ್ರಕೃತಿ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 21:07 IST
Last Updated 28 ಆಗಸ್ಟ್ 2022, 21:07 IST
ಧರ್ಮಸ್ಥಳದಲ್ಲಿ ಭಾನುವಾರ ನಡೆದ ಆಯುರ್ವೇದ ವೈದ್ಯ ಡಾ. ಗಿರಿಧರ ಕಜೆ ಅವರ ‘ಪ್ರಕೃತಿ’ ಕೃತಿ ಬಿಡುಗಡೆ ಸಮಾರಂಭವನ್ನು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು. ಲೇಖಕ ಗಿರಿಧರ ಕಜೆ, ರಂಗನಾಥ್ ಭಾರಧ್ವಾಜ್, ಸಚಿವ ಎಸ್‌. ಅಂಗಾರ ಮೋಹನ ಭಾಸ್ಕರ ಹೆಗಡೆ ಇದ್ದರು
ಧರ್ಮಸ್ಥಳದಲ್ಲಿ ಭಾನುವಾರ ನಡೆದ ಆಯುರ್ವೇದ ವೈದ್ಯ ಡಾ. ಗಿರಿಧರ ಕಜೆ ಅವರ ‘ಪ್ರಕೃತಿ’ ಕೃತಿ ಬಿಡುಗಡೆ ಸಮಾರಂಭವನ್ನು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು. ಲೇಖಕ ಗಿರಿಧರ ಕಜೆ, ರಂಗನಾಥ್ ಭಾರಧ್ವಾಜ್, ಸಚಿವ ಎಸ್‌. ಅಂಗಾರ ಮೋಹನ ಭಾಸ್ಕರ ಹೆಗಡೆ ಇದ್ದರು   

ಉಜಿರೆ: ‘ಪಂಚೇಂದ್ರಿಯಗಳ ನಿಯಂತ್ರಣ ಮತ್ತು ಹಿತ-ಮಿತವಾದ ಆಹಾರ ಸೇವನೆಯಿಂದ ಆರೋಗ್ಯ ರಕ್ಷಣೆ ಮತ್ತು ಆಯುಷ್ಯ ವೃದ್ಧಿಯೊಂದಿಗೆ ನಾವು ಆರೋಗ್ಯ ಭಾಗ್ಯವನ್ನೂ ಹೊಂದಬಹುದು’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಆಯುರ್ವೇದ ವೈದ್ಯ ಡಾ. ಗಿರಿಧರ ಕಜೆ ಅವರ ‘ಪ್ರಕೃತಿ’ ಕೃತಿಯನ್ನುಧರ್ಮಸ್ಥಳದಲ್ಲಿ ಭಾನುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಆಯುರ್ವೇದ ಪದ್ಧತಿ ಮೇಲಿನ ವಿಶ್ವಾಸ ಹೆಚ್ಚಾಗಬೇಕು. ನಮ್ಮನ್ನು ನಾವು ತಿಳಿದುಕೊಂಡು, ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಆಹಾರ ಔಷಧಿಯಾಗಬೇಕೇ ವಿನಾ ಔಷಧಿಯೇ ಆಹಾರವಾಗಬಾರದು. ಆಧುನಿಕ ಜೀವನಶೈಲಿ, ಆಹಾರ- ವಿಹಾರ, ಒತ್ತಡದ ಕೆಲಸಗಳೇ ಆರೋಗ್ಯ ಹದಗೆಡಲು ಕಾರಣ. ಶತಮಾನಗಳಿಂದ ಬಳಸುತ್ತಿದ್ದ ಪ್ರಕೃತಿ ಚಿಕಿತ್ಸಾ ಪದ್ಧತಿ, ಯೋಗಾಭ್ಯಾಸ, ಆಯುರ್ವೇದ ಪದ್ಧತಿಯಿಂದ ಆರೋಗ್ಯದ ರಕ್ಷಣೆ ಸಾಧ್ಯ. ಉಡುಪಿಯಲ್ಲಿರುವ ಎಸ್.ಡಿ.ಎಂ. ಆಯುರ್ವೇದ ಆಸ್ಪತ್ರೆಯಲ್ಲಿ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಲಾಗಿದೆ’ ಎಂದು ಹೆಗ್ಗಡೆ ಅವರು ಹೇಳಿದರು.

ADVERTISEMENT

ಸಚಿವ ಎಸ್. ಅಂಗಾರ ಮಾತನಾಡಿ, ಧರ್ಮದ ನೆಲೆಯಲ್ಲಿ ಕರ್ಮ ಮಾಡಿ ಗೌರವಯುತ ಜೀವನ ನಡೆಸಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯಿಂದ ನಾವು ವಿಮುಖರಾಗಿರುವುದೇ ಹೆಚ್ಚಿನ ರೋಗಗಳಿಗೆ ಕಾರಣವಾಗಿದೆ. ಡಾ. ಗಿರಿಧರ ಕಜೆ ಅವರ ಆಯುರ್ವೇದ ಚಿಕಿತ್ಸಾ ಪದ್ಧತಿಯ ಶುಶ್ರೂಷೆಯಿಂದ ನಾನು ಕೋವಿಡ್‌ನಿಂದ ಮುಕ್ತಿ ಪಡೆದೆ ಎಂದರು.

ಪತ್ರಕರ್ತ ರಂಗನಾಥ್ ಭಾರಧ್ವಾಜ್ ಮಾತನಾಡಿ, ‘ಸ್ವಚ್ಛ ಭಾರತ ನಿರ್ಮಾಣದ ಆಶಯದಂತೆ ಸ್ವಸ್ಥ ಭಾರತವೂ ನಮ್ಮ ಗುರಿಯಾಗಬೇಕು. ನಮ್ಮ ಮನಸ್ಸು ಕಲ್ಮಶ ರಹಿತವಾಗಿದ್ದು, ಮಾನವೀಯ ಸಂಬಂಧಗಳೊಂದಿಗೆ ಜೀವನ ಮೌಲ್ಯಗಳನ್ನು ಉಳಿಸಿ, ಬೆಳೆಸಿದಾಗ ಆರೋಗ್ಯವಂತರಾಗಲು ಸಾಧ್ಯ’ ಎಂದು ಅವರು ಹೇಳಿದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಮಾತನಾಡಿ, ‘ಆಯುರ್ವೇದ ನಮ್ಮ ಜೀವನ ಪದ್ಧತಿಯಾಗ
ಬೇಕು. ಆಗ ನಮ್ಮ ಆರೋಗ್ಯ, ಆಯುಷ್ಯ ಮತ್ತು ಆನಂದ ವೃದ್ಧಿಯಾಗಿ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

‘ಪ್ರಕೃತಿ’ ಕೃತಿಯ ಬಗ್ಗೆ ಲೇಖಕ ಡಾ. ಗಿರಿಧರ ಕಜೆ ಮಾಹಿತಿ ನೀಡಿದರು. ಸೆಲ್ಕೊ ಸಂಸ್ಥೆಯ ಸಿಇಒ ಮೋಹನ
ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಗೋವಿಂದ ಪ್ರಸಾದ್ ಕಜೆ ಸ್ವಾಗತಿಸಿದರು. ಶ್ರೀನಿವಾಸರಾವ್ ಧರ್ಮಸ್ಥಳ ವಂದಿಸಿದರು.

*

ಆಯುರ್ವೇದ ಪದ್ಧತಿ ಬಗ್ಗೆ ಉನ್ನತ ಅಧ್ಯಯನ ಹಾಗೂ ಸಂಶೋಧನೆಗಳು ನಡೆಯಬೇಕು. ಸಂಶೋಧನಾ ಫಲಿತಾಂಶವನ್ನು ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಬಳಸಬೇಕು.
-ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.