ADVERTISEMENT

ಮಾರುಕಟ್ಟೆ ಎತ್ತಂಗಡಿ: ವ್ಯಾಪಾರಸ್ಥರು ಅತಂತ್ರ

ಪ್ರಬಲ ಹೋರಾಟ ರೂಪಿಸಲು ವ್ಯಾಪಾರಸ್ಥರ ಸಂಘದ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 21 ಮೇ 2020, 16:25 IST
Last Updated 21 ಮೇ 2020, 16:25 IST

ಮಂಗಳೂರು: ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ಹಾಳಾಗಿದ್ದು, ಮತ್ತೊಂದೆಡೆ ಅದನ್ನೇ ನೆಪ ಮಾಡಿಕೊಂಡು ಅಂತರವನ್ನು ಕಾಯ್ದುಕೊಳ್ಳುವ ಹೆಸರಿನಲ್ಲಿ ನಗರದ ಹೃದಯಭಾಗದಲ್ಲಿದ್ದ ಕೇಂದ್ರ ಮಾರುಕಟ್ಟೆಯನ್ನು ಏಕಾಏಕಿಯಾಗಿ ಬೈಕಂಪಾಡಿಯ ಎಪಿಎಂಸಿಗೆ ತಾತ್ಕಾಲಿಕ ನೆಲೆಯಲ್ಲಿ ಎತ್ತಂಗಡಿ ಮಾಡಿರುವುದು ತೀರಾ ಅವೈಜ್ಞಾನಿಕ ಕ್ರಮ ಎಂದು ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಕಾರ್ಯಾಧ್ಯಕ್ಷ ಸುನೀಲ್‌ಕುಮಾರ್ ಬಜಾಲ್‌ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಡಿವೈಎಫ್‌ಐ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿತ್ಯ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಕೇಂದ್ರ ಮಾರುಕಟ್ಟೆಯ ಪರಿಸರದಲ್ಲಿ ವಿಪರೀತ ಜನಸಂದಣಿ ಸೇರುವುದನ್ನೇ ನೆಪ ಮಾಡಿ ಜಿಲ್ಲಾಡಳಿತವು ವ್ಯಾಪಾರಸ್ಥರೊಂದಿಗೆ ಚರ್ಚಿಸದೆ, ಸ್ಥಳಾಂತರಿಸಿದೆ ಎಂದು ದೂರಿದರು.

ಸಂಸದರು, ಶಾಸಕರ ಸಮಕ್ಷಮದಲ್ಲಿ ಎಪಿಎಂಸಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಮಾರುಕಟ್ಟೆಯನ್ನು ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಬಾರದು, ನೂತನ ಕಟ್ಟಡದ ಪ್ರಕ್ರಿಯೆ ಪ್ರಾರಂಭವಾಗುವವರೆಗೆ ಈ ಹಿಂದಿನ ಕಟ್ಟಡದಲ್ಲೇ ವ್ಯಾಪಾರಕ್ಕೆ ಅವಕಾಶ ನೀಡಬೇಕೆಂದು ವ್ಯಾಪಾರಸ್ಥರು ಒತ್ತಾಯಿಸಿದ್ದರು. ಆದರೆ, ಸಂಸದರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೇಂದ್ರ ಮಾರುಕಟ್ಟೆಯ ನೂತನ ಕಟ್ಟಡದ ಪ್ರಸ್ತಾಪವನ್ನು ಮುಂದಿಟ್ಟರು. 4-5 ದಿನಗಳಲ್ಲಿ ಕೇಂದ್ರ ಮಾರುಕಟ್ಟೆಯ ವ್ಯಾಪಾರಸ್ಥರ ಸಭೆ ಕರೆಯುವುದಾಗಿ ಭರವಸೆ ನೀಡಿದ ಸಂಸದರು, 21 ದಿನಗಳು ಕಳೆದರೂ ಈ ಬಗ್ಗೆ ಮೌನ ವಹಿಸಿರುವುದು ಹಲವಾರು ಸಂಶಯಗಳಿಗೆ ಎಡೆಮಾಡಿದೆ ಎಂದು ಹೇಳಿದರು.

ADVERTISEMENT

ಈ ಬಗ್ಗೆ ಜಿಲ್ಲಾಡಳಿತವು ತುರ್ತು ಗಮನ ಹರಿಸಿ, ಕೇಂದ್ರ ಮಾರುಕಟ್ಟೆಯ ಕಟ್ಟಡದಲ್ಲೇ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಬೇಕು. ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿದ ಬಳಿಕವಷ್ಟೇ ನೂತನ ಕಟ್ಟಡದ ಕಾರ್ಯಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ವರ್ತಕರಿಗೆ ₹ 50 ಲಕ್ಷ ನಷ್ಟವಾಗಿದ್ದು, ಸಂತ್ರಸ್ತರಿಗೆ ಕೂಡಲೇ ಪರಿಹಾರ ಘೋಷಿಸಬೇಕು. ಇಲ್ಲದಿದ್ದಲ್ಲಿ ಮಾರುಕಟ್ಟೆಯ ಉಳಿವಿಗಾಗಿ ಈ ತಿಂಗಳ ಅಂತ್ಯದವರೆಗೆ ಪ್ರಬಲ ಹೋರಾಟ ಸಂಘಟಿಸಲಾಗುವುದು ಎಂದು ಎಚ್ಚರಿಸಿದರು.

ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುಸ್ತಫ ಕುಂಞ, ಪ್ರಧಾನ ಕಾರ್ಯದರ್ಶಿ ಜನಾರ್ದನ ಸಾಲಿಯಾನ್, ಪದಾಧಿಕಾರಿಗಳಾದ ಅನಿಲ್‌ಕುಮಾರ್, ಎ.ಜೆ. ಶೇಖರ್, ಗ್ರೇಸಿ ಫರ್ನಾಂಡಿಸ್, ನ್ಯೂ ಸೆಂಟ್ರಲ್ ಮಾರ್ಕೆಟ್ ಶಾಪ್ ಓನರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗಣೇಶ್, ಮುಸ್ತಾಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.