
ಮಂಗಳೂರು: ಮಾತು ಆಡಿ ಮುಗಿಸುವುದಷ್ಟರಲ್ಲಿ ಊರಿಡೀ ಹಬ್ಬುವ ಇಂದಿನ ಸಂದರ್ಭದಲ್ಲಿ ಅಭಿವ್ಯಕ್ತಿಗೆ ಸಾಹಿತ್ಯ ಮತ್ತು ಕಲಾಕೃತಿಗಳೇ ಬೇಕು ಎಂದು ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ್ ಅಭಿಪ್ರಾಯಪಟ್ಟರು.
ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ, ಆಯನ ನಾಟಕದ ಮನೆ ಮತ್ತು ಯಾಜಿ ಪ್ರಕಾಶನ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಂಗನಿರ್ದೇಶಕ ಮೋಹಚಂದ್ರ ಅವರ ಅಶ್ವತ್ಥಾಮ ನಾಟ್ಔಟ್ ರಂಗಪಠ್ಯವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮಾತನಾಡಲು ಹೆದರುವ ಕಾಲವಿದು. ಆದ್ದರಿಂದ ಮಾತನಾಡಬೇಕಾದವರು ಪಂಚಾಗ್ನಿ ಮಧ್ಯೆ ತಪಸ್ಸು ಮಾಡುವಂತಾಗಿದೆ. ಅವರಿಗೆಲ್ಲ ಕಲಾತ್ಮಕ ರೂಪ ಪಡೆದ ಸಾಹಿತ್ಯ ಕೃತಿಗಳು ಧ್ವನಿಯಾಗುತ್ತಿವೆ ಎಂದ ಅವರು ಪ್ರಜಾಪ್ರಭುತ್ವದ ಅಂಗಗಳು ಶಿಥಿಲಗೊಳ್ಳುತ್ತಿರುವ ಇಂದಿನ ಸಂದರ್ಭವನ್ನು ಅಶ್ವತ್ಥಾಮ ನಾಟೌಟ್ ನಾಟಕ ಸಮರ್ಥವಾಗಿ ಬಿಂಬಿಸಿದೆ ಎಂದರು.
ಪುರಾಣಗಳ ಪೈಕಿ ರಾಮಾಯಣ ಆದರ್ಶವನ್ನು ಮತ್ತು ಮಹಾಭಾರತ ವಾಸ್ತವವನ್ನು ಮುಂದಿಡುವ ಕಥೆಗಳನ್ನು ಹೊಂದಿವೆ. ಚಿರಂಜೀವಿ ಎನ್ನಲಾಗುವ ಅಶ್ವತ್ಥಾಮನಂಥ ಅನೇಕ ಪಾತ್ರಗಳನ್ನು ಮಹಾಭಾರತ ಹೊಂದಿದೆ. ಜಾನಪದೀಯವಾಗಿ ಅಶ್ವತ್ಥಾಮನು ಈಗಲೂ ಇದ್ದಾನೆ, ದೊಡ್ಡದೊಡ್ಡ ಸಮಾರಂಭಗಳು ಇದ್ದಲ್ಲಿಗೆ ಆತ ಬರುತ್ತಾನೆ ಎಂಬ ನಂಬಿಕೆ ಇದೆ. ಆತನ ಇರವನ್ನು ವಿಭಿನ್ನ ದೃಷ್ಟಿಯಲ್ಲಿ ಅಶ್ವತ್ಥಾಮ ನಾಟೌಟ್ ನಾಟಕ ತೋರಿಸುತ್ತದೆ. ತೆರೆ ಬಿದ್ದರೂ ರಂಗವನ್ನು ಬಿಡದ ಕಥೆ ಇದರಲ್ಲಿದೆ ಎಂದು ಐತಾಳ್ ಹೇಳಿದರು.
ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಐವನ್ ಫ್ರಾನ್ಸಿಸ್ ಲೋಬೊ ಕೃತಿ ಅವಲೋಕನ ಮಾಡಿದರು. ಸೇಂಟ್ ಅಲೋಶಿಯಸ್ ವಿವಿಯ ಸಹಕುಲಪತಿ ಫಾ ಮೆಲ್ವಿನ್ ಡಿಕುನ್ನ, ಕುಲಸಚಿವ ರೊನಾಲ್ಡ್ ನಜರೆತ್, ಆಯನ ನಾಟಕದ ಮನೆಯ ಸಂಸ್ಥಾಪಕ ಸದಸ್ಯ ಚಂದ್ರಹಾಸ ಉಳ್ಳಾಲ, ಮೋಹನಚಂದ್ರ ಹಾಗೂ ನಟ ದಿನೇಶ್ ನಾಯಕ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.