ADVERTISEMENT

ಮಂಗಳೂರು: ವಿಶ್ವ ಕೊಂಕಣಿ ಸಮಾರಂಭ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 5:40 IST
Last Updated 9 ಫೆಬ್ರುವರಿ 2024, 5:40 IST
ಸುದ್ದಿಗೋಷ್ಠಿಯಲ್ಲಿ ನಂದಗೋಪಾಲ್ ಶೆಣೈ ಮಾತನಾಡಿದರು. ರಮೇಶ್‌ ನಾಯಕ್‌, ಕಸ್ತೂರಿ ಮೋಹನ್‌ ಪೈ, ಬಿ.ಆರ್.ಭಟ್‌ ಹಾಗೂ ದೇವದಾಸ ಪೈ ಭಾಗವಹಿಸಿದ್ದರು
ಸುದ್ದಿಗೋಷ್ಠಿಯಲ್ಲಿ ನಂದಗೋಪಾಲ್ ಶೆಣೈ ಮಾತನಾಡಿದರು. ರಮೇಶ್‌ ನಾಯಕ್‌, ಕಸ್ತೂರಿ ಮೋಹನ್‌ ಪೈ, ಬಿ.ಆರ್.ಭಟ್‌ ಹಾಗೂ ದೇವದಾಸ ಪೈ ಭಾಗವಹಿಸಿದ್ದರು   

ಮಂಗಳೂರು: ವಿಶ್ವ ಕೊಂಕಣಿ ಸಮಾರಂಭವನ್ನು ಇಲ್ಲಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಇದೇ 10 ಮತ್ತು 11 ರಂದು ಏರ್ಪಡಿಸಲಾಗಿದೆ ಎಂದು ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಶ್ವ ಕೊಂಕಣಿ ಸಮಾರಂಭವನ್ನು ಇದೇ 10ರಂದು ಬೆಳಿಗ್ಗೆ 9.30ಕ್ಕೆ ಎಂ.ಆರ್.ಪಿ.ಎಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ (ಹಣಕಾಸು)  ಯು.ಎಸ್.ಸುರೇಂದ್ರ ನಾಯಕ್ ಉದ್ಘಾಟಿಸುವರು. ಜಾನ್ ಎಂ. ಪೆರ್ಮನ್ನೂರು ಅವರು ‘ಕೊಂಕಣಿ ರಂಗಭೂಮಿ ಇಂದು– ಮುಂದು’ ಗೋಷ್ಠಿಯನ್ನು ಬೆಳಿಗ್ಗೆ 10ಕ್ಕೆ , ಗೌರೀಶ ಪ್ರಭು ಅವರು ‘ಕೊಂಕಣಿ ಭಾಷಾಭಿವೃದ್ಧಿಗೆ ಕೃತಕ ಬುದ್ಧಿಮತ್ತೆ ಅಳವಡಿಕೆ' ಗೋಷ್ಠಿಯಲ್ಲಿ 11.30 ಕ್ಕೆ , ಕಸ್ತೂರಿ ಮೋಹನ ಪೈ ಅವರು ‘ಗೋವಾದ ಹೊರಗೆ ಕೊಂಕಣಿಯ ಸ್ಥಿತಿ ಗತಿ' ಗೋಷ್ಠೀಯನ್ನು ಮಧ್ಯಾಹ್ನ 2 ಗಂಟೆಗೆ  ಹಾಗೂ ಕಿರಣ್ ಬುಡ್ಕುಳೆ ಅವರು ‘ಕೊಂಕಣಿ ಭಾಷೆ ಮತ್ತು ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ’ ಗೋಷ್ಠಿಯನ್ನು ಮಧ್ಯಾಹ್ನ 3ಕ್ಕೆ ನಡೆಸಿಕೊಡುವರು’ ಎಂದರು.

'ಅನಿವಾಸಿ ಭಾರತೀಯರ ಕೊಂಕಣಿ ಕಾಳಜಿ’ ಆನ್‌ ಲೈನ್ ಗೋಷ್ಠಿಯನ್ನು ಕಿಶೂ ಬಾರ್ಕೂರ್ ಭಾನುವಾರ ಬೆಳಿಗ್ಗೆ 9ರಿಂದ ನಡೆಸಿಕೊಡುವರು. ಬೆಳಿಗ್ಗೆ 10.45ರಿಂದ ವಿಶ್ವ ಕೊಂಕಣಿ  ಪುರಸ್ಕಾರ ಪ್ರದಾನ ನಡೆಯಲಿದೆ. ‘ಶಾಲೆಗಳಲ್ಲಿ ಕೊಂಕಣಿ ಶಿಕ್ಷಣ’ ಗೋಷ್ಠಿ ಮಧ್ಯಾಹ್ನ 1.45 ಗಂಟೆಗೆ ನಡೆಯಲಿದೆ. ಗೋಕುಲದಾಸ್ ಪ್ರಭು ಅವರು ‘21 ನೆಯ ಶತಮಾನದ ಕೊಂಕಣಿ ಕವಿತೆಗಳು’ ಗೋಷ್ಠಿಯನ್ನು ಮಧ್ಯಾಹ್ನ 2.45ಕ್ಕೆ ನಡೆಸಿಕೊಡಲಿದ್ದಾರೆ‘ ಎಂದರು.

ADVERTISEMENT

‘ಅಂತರರಾಜ್ಯ ವಿಶ್ವ ಕೊಂಕಣಿ ನಾಟಕೋತ್ಸವದ ಅಂಗವಾಗಿ ನಗರದ ರಮಣ ಪೈ ಸಭಾಂಗಣದಲ್ಲಿ ಶನಿವಾರ ಸಂಜೆ 5ರಿಂದ  ಗೋಶ್ರೀಪುರದ ಕೊಚ್ಚಿ ಕಲಾಕ್ಷೇತ್ರ ತಂಡದವರು 'ಜಗಲೇಲೊ ಹನುಮಂತು’ ಮತ್ತು ಗೋವಾದ ಫೋರ್ಥ್ ವಾಲ್ ಥಿಯೇಟರ್‌ನವರು ‘ಅಸ್ಥಿ ಪಂಜರ ಮಹಿಳೆ' ನಾಟಕ ಪ್ರದರ್ಶಿಸಲಿದ್ದಾರೆ. ಭಾನುವಾರ ಸಂಜೆ  5ರಿಂದ ಮುಂಬೈನ ಕೊಂಕಣಿ ತ್ರಿವೇಣಿ ಕಲಾ ಸಂಗಮ ತಂಡದವರು 'ಆವಸು ಆನಂದಾಚೊ ಪಾವಸು‘ ಮತ್ತು ಕಾಸರಗೋಡಿನ ರಂಗಚಿನ್ನಾರಿ ಕಲಾತಂಡದವರು ‘ಎಕಲೋ ಆನೆಕಲೊ’ ಕೊಂಕಣಿ ನಾಟಕಗಳನ್ನು ಪ್ರದರ್ಶಿಸಲಿದ್ದಾರೆ’ ಎಂದರು.  

ಸುದ್ದಿಗೋಷ್ಠಿಯಲ್ಲಿ ವಿಶ್ವ ಕೊಂಕಣಿ ಕೇಂದ್ರದ ಖಜಾಂಚಿ ಬಿ.ಆರ್‌.ಭಟ್‌, ಕಸ್ತೂರಿ ಮೋಹನ ಪೈ, ರಮೇಶ್‌ ನಾಯಕ್‌, ದೇವದಾಸ ಪೈ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.