ADVERTISEMENT

ಅನಧಿಕೃತವಾಗಿ‌ ಮತದಾರರ ಗುರುತಿನ ಚೀಟಿ ಮುದ್ರಣ: ಜನಸೇವಾ ಕೇಂದ್ರದ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 16:31 IST
Last Updated 5 ಡಿಸೆಂಬರ್ 2022, 16:31 IST
ಪುತ್ತೂರಿನ ಜನಸೇವಾ ಕೇಂದ್ರಕ್ಕೆ ಉಪವಿಭಾಗಾಧಿಕಾರಿ ನೇತೃತ್ವದ ತಂಡವು ಸೋಮವಾರ ಬೀಗಮುದ್ರೆ ಹಾಕಿತು
ಪುತ್ತೂರಿನ ಜನಸೇವಾ ಕೇಂದ್ರಕ್ಕೆ ಉಪವಿಭಾಗಾಧಿಕಾರಿ ನೇತೃತ್ವದ ತಂಡವು ಸೋಮವಾರ ಬೀಗಮುದ್ರೆ ಹಾಕಿತು   

ಪುತ್ತೂರು: ಮತದಾರರ ಗುರುತಿನ ಚೀಟಿಯನ್ನು ಅನಧಿಕೃತವಾಗಿ‌ ಮುದ್ರಿಸಿ ನೀಡಿದ ಆರೋಪದ ಮೇಲೆಉಪವಿಭಾಗಾಧಿಕಾರಿ ಗಿರೀಶ್ ನಂದನ್ ನೇತೃತ್ವದ ಅಧಿಕಾರಿಗಳ ತಂಡ ಇಲ್ಲಿನ ಹಳೆ ತಾಲ್ಲೂಕು ಕಚೇರಿ ರಸ್ತೆ ಬಳಿಯ ಜನಸೇವಾ ಕೇಂದ್ರಕ್ಕೆ ಸೋಮವಾರ ಸಂಜೆ ದಾಳಿ ನಡೆಸಿ ಬೀಗ ಹಾಕಿಸಿದರು.

ನಗರದ ವ್ಯಕ್ತಿಯೊಬ್ಬರ ಮತದಾರರ ಗುರುತಿನ ಚೀಟಿ ಕಳೆದುಹೋಗಿದ್ದು, ಅವರು ಜನ ಸೇವಾ ಕೇಂದ್ರಕ್ಕೆ ಬಂದು ವಿಷಯ ತಿಳಿಸಿದ್ದರು. ‘ಮತದಾರರ ಗುರುತಿನ ಚೀಟಿಗಾಗಿ ಆನ್ ಲೈನ್ ಅರ್ಜಿ ತುಂಬುವ ಪ್ರಕ್ರಿಯೆ ನಡೆಸಿದ್ದ ಕೇಂದ್ರದ ಸಿಬ್ಬಂದಿ ಅಲ್ಲೇ ಗುರುತಿನ ಚೀಟಿಯನ್ನೂ ಮುದ್ರಿಸಿ ಕೊಟ್ಟಿದ್ದರು’ ಎಂದು ಅವರು ಆಪಾದಿಸಿದ್ದರು.

ಈ ಗುರುತಿನ ಚೀಟಿಯ ನೈಜತೆ ಕುರಿತು ಅನುಮಾನ ಬಂದ ಕಾರಣ ಅವರು ತಾಲ್ಲೂಕು ಕಚೇರಿಯ ಚುನಾವಣಾ ಶಾಖೆಗೆ ತೆರಳಿ ತೋರಿಸಿದರು ಎನ್ನಲಾಗಿದೆ. ಅಧಿಕಾರಿಗಳು ತಪಾಸಣೆ ನಡೆಸಿದಾಗ ಹೊರಗಿನ‌ ಕೇಂದ್ರದಲ್ಲಿ ಮತದಾರರ ಗುರುತು ಚೀಟಿ ತಯಾರಿಸಿ ಕೊಟ್ಟಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಉಪವಿಭಾಗಾಧಿಕಾರಿ, ತಹಶೀಲ್ದಾರ್ ನಿಸರ್ಗ ಪ್ರಿಯ ಮತ್ತು ತಾಲ್ಲೂಕು ಕಚೇರಿಯ ಚುನಾವಣಾ ಶಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪೊಲೀಸ್ ಬಂದೋಬಸ್ತ್ ನಲ್ಲಿ ಜನಸೇವಾ ಕೇಂದ್ರದ ತಪಾಸಣೆ ನಡೆಸಿದರು.

ADVERTISEMENT

‘ಮತದಾರರ ಗುರುತಿನ ಚೀಟಿ ವಿತರಣೆ ಮಾಡುವ ಅಧಿಕಾರವನ್ನು ನಾವು ಯಾರಿಗೂ ಕೊಟ್ಟಿಲ್ಲ. ಆದರೂ ಈ ಜನಸೇವಾ ಕೇಂದ್ರದಲ್ಲಿ ಗುರುತಿನಚೀಟಿಯನ್ನು ಕೊಟ್ಟಿರುವುದು ಬೆಳಕಿಗೆ ಬಂದಿದೆ. ಮತದಾರರ ಗುರುತಿನ ಚೀಟಿಯನ್ನು ವಶಪಡಿಸಿಕೊಂಡು ಕೇಂದ್ರಕ್ಕೆ ಬೀಗ ಹಾಕಿದ್ದೇವೆ. ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಅಪರಾಧ ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಗಿರೀಶ್ ನಂದನ್ ತಿಳಿಸಿದರು.

‘ನಾವು ತಪ್ಪು ಮಾಡಿಲ್ಲ. ನಮ್ಮ ಜನಸೇವಾ ಕೇಂದ್ರದಲ್ಲಿ ನಿರ್ದಿಷ್ಟ ವೆಬ್ ಸೈಟ್ ತೆರೆದುಕೊಂಡ ಕಾರಣ ಸಿಬ್ಬಂದಿ ಲಾಗಿನ್ ಆಗಿ ಅರ್ಜಿ ಭರ್ತಿ ಮಾಡುವ ಪ್ರಕ್ರಿಯೆ ನಡೆಸಿ, ಮತದಾರರ ಗುರುತಿನ ಚೀಟಿ ಮುದ್ರಿಸಿ ಕೊಟ್ಟಿದ್ದಾರೆ. ಇದರ ಪೂರ್ಣ ಮಾಹಿತಿಯನ್ನು ಅಧಿಕಾರಿಗಳಿಗೆ ಪ್ರಾಯೋಗಿಕವಾಗಿ ಮಾಡಿ ತೋರಿಸಿದ್ದೇವೆ. ಸರ್ಕಾರಿ ಅಧಿಕಾರಿಗಳ ಅಥವಾ ಚುನಾವಣಾ ಆಯೋಗದ ಅಧಿಕಾರಿಗಳ‌ ಸಹಿ ಫೋರ್ಜರಿ ಮಾಡಲು ನಮಗೆ ಸಾಧ್ಯವೇ’ ಎಂದು ಜನಸೇವಾ ಕೇಂದ್ರದ ಮಾಲಕಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.