ADVERTISEMENT

ಸಚಿವರ ಮನೆ ಎದುರು ಧರಣಿ ಎಚ್ಚರಿಕೆ

ಮಲೆನಾಡು ಜನಹಿತ ರಕ್ಷಣಾ ವೇದಿಕೆಯಿಂದ ಕಡಬದಲ್ಲಿ ಹಕ್ಕೊತ್ತಾಯ ಸಭೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 3:38 IST
Last Updated 26 ಅಕ್ಟೋಬರ್ 2021, 3:38 IST
ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸದಸ್ಯರು ತಹಶೀಲ್ದಾರ್ ಅನಂತ ಶಂಕರ್ ಅವರಿಗೆ ಮನವಿ ಸಲ್ಲಿಸಿದರು. ಕಿಶೋರ್ ಶಿರಾಡಿ, ಸೈಯದ್ ಮೀರಾ ಸಾಹೇಬ್, ಪಿ.ಪಿ ವರ್ಗೀಸ್ ಇದ್ದರು.
ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸದಸ್ಯರು ತಹಶೀಲ್ದಾರ್ ಅನಂತ ಶಂಕರ್ ಅವರಿಗೆ ಮನವಿ ಸಲ್ಲಿಸಿದರು. ಕಿಶೋರ್ ಶಿರಾಡಿ, ಸೈಯದ್ ಮೀರಾ ಸಾಹೇಬ್, ಪಿ.ಪಿ ವರ್ಗೀಸ್ ಇದ್ದರು.   

ಕಡಬ(ಉಪ್ಪಿನಂಗಡಿ): ಕಡಬ ತಾಲ್ಲೂಕು ಕಚೇರಿ ಹಾಗೂ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ನಡೆಯುತ್ತಿರುವ ಪರ್ಸೆಂಟೇಜ್ ವ್ಯವಹಾರ ನಿಲ್ಲಿಸದಿದ್ದರೆ ಕಂದಾಯ ಸಚಿವರ ಮನೆ ಮುಂದೆ ಧರಣಿ ನಡೆಸುವುದು ಖಚಿತ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಎಚ್ಚರಿಸಿದರು.

ಕಡಬ ತಾಲ್ಲೂಕಿನ ಹಕ್ಕುಪತ್ರ ವಂಚಿತ, ನಿವೇಶನ ರಹಿತ ರೈತರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ, ಕಡಬ ತಾಲ್ಲೂಕು ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಸೋಮವಾರ ಕಡಬ ತಹಶೀಲ್ದಾರ್ ಕಚೇರಿಯ ಎದುರು ನಡೆದ ಹಕ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು.

‘ಕಡಬ ಕಂದಾಯ ಇಲಾಖೆ ಮತ್ತು ಕಂದಾಯ ನಿರೀಕ್ಷಕರು ಅಕ್ರಮ ಸಕ್ರಮ, 94/ಸಿ ಹಕ್ಕು ಪತ್ರ ಮಂಜೂರುಗೊಳಿಸಲು ಜಾಗದ ಬೆಲೆಯ ಶೇ 10ರಷ್ಟು ಲಂಚ ಪಡೆಯುತ್ತಾರೆ ಎಂಬ ಆರೋಪ ಇದೆ. ಈ ಬಗ್ಗೆ ಯಾರಾದರೂ ಸವಾಲು ಹಾಕಿದರೆ, ಜಿಲ್ಲಾಧಿಕಾರಿ ಸಾಕ್ಷಿ ಕೇಳಿದರೆ, ಲಂಚ ನೀಡಿದವರ ಹೆಸರು ಸಹಿತ ಹೇಳಬಲ್ಲೆ’ ಎಂದರು.

ADVERTISEMENT

‘ದಾಖಲೆಪತ್ರ ಸರಿ ಇದ್ದರೂ ಮಂಜೂರು ಸಿಗುವುದಿಲ್ಲ. ನೇರವಾಗಿ ಬಂದರೆ ಕಚೇರಿಗೆ ಅಲೆದು ಸಾಕಾಗುತ್ತದೆ. ಕೊನೆಗೆ ಮಧ್ಯವರ್ತಿ ಮೂಲಕ ಕೆಲಸ ಮಾಡಿಸಿಕೊಳ್ಳುವ ಅನಿವಾರ್ಯತೆ ಬರುತ್ತದೆ. ಇವೆಲ್ಲ ಸಂಗತಿ
ತಿಳಿದರೂ ಸಚಿವರು ಮೌನವಾಗಿದ್ದಾರೆ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಪಿ. ವರ್ಗೀಸ್ ಮಾತನಾಡಿ, ‘ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಅಕ್ರಮ-ಸಕ್ರಮದ ಅಡಿಯಲ್ಲಿ ಎಷ್ಟೋ ಬಡವರಿಗೆ ಹಕ್ಕುಪತ್ರ ನೀಡಲಾಗಿತ್ತು. ಆದರೆ ಈಗ, ರೈತರನ್ನು ಭಾಗಶಃ ಅರಣ್ಯದ ಹೆಸರಿನಲ್ಲಿ ಶೋಷಿಸಲಾಗುತ್ತಿದೆ. ಎಲ್ಲ ಹಂತಗಳಲ್ಲೂ ಬಿಜೆಪಿ ಜನಪ್ರತಿನಿಧಿಗಳು ಇದ್ದು, ಸಚಿವರು ಮನಸ್ಸು ಮಾಡಿದರೆ, ಕಂದಾಯ ಮತ್ತು ಅರಣ್ಯ ಇಲಾಖೆಗಳ ಜಂಟಿ ಸರ್ವೆಗೆ ಆದೇಶಿಸಬಹುದು’ ಎಂದರು.

ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಬಾಲಕೃಷ್ಣ ಬಳ್ಳೇರಿ, ಮರ್ದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್ ಕೊಡಂದೂರು, ಸುಬ್ರಹ್ಮಣ್ಯ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು, ನಿರ್ದೇಶಕ ರವೀಂದ್ರ ರುದ್ರಪಾದ, ಕಡಬ ಸಹಕಾರಿ ಬ್ಯಾಂಕ್ ನಿರ್ದೇಶಕ ಸತೀಶ್ ನಾಯ್ಕ್, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್, ಕಡಬ ಪಟ್ಟಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಜನಹಿತ ರಕ್ಷಣಾ ವೇದಿಕೆಯ ಪ್ರಮುಖರಾದ ರಾಮಕೃಷ್ಣ ಕಡಮ್ಮಾಜೆ, ವಾಸುದೇವ ನೇಲಡ್ಕ, ದುಗ್ಗಪ್ಪ ಮಾಸ್ಟರ್ ಅಂತಿಬೆಟ್ಟು, ಸತೀಶ್ಚಂದ್ರ ಶೆಟ್ಟಿ ಬೀರುಕ್ಕು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.