ADVERTISEMENT

ವಾರಾಂತ್ಯದಲ್ಲಿ ಕಟ್ಟಗಳ ನಿರ್ವಹಣೆ

ತೋಕೂರು ಸ್ಪೋರ್ಟ್ಸ್‌ ಕ್ಲಬ್‌ನ ಸದಸ್ಯರ ಮಾದರಿ ಕಾರ್ಯ

ಪ್ರಜಾವಾಣಿ ವಿಶೇಷ
Published 17 ಜನವರಿ 2022, 5:13 IST
Last Updated 17 ಜನವರಿ 2022, 5:13 IST
ತೋಕೂರು ಸ್ಪೋರ್ಟ್ಸ್‌ ಕ್ಲಬ್‌ನ ಸದಸ್ಯರು ಅಣೆಕಟ್ಟಿನ ನಿರ್ವಹಣೆಯಲ್ಲಿ ತೊಡಗಿರುವುದು
ತೋಕೂರು ಸ್ಪೋರ್ಟ್ಸ್‌ ಕ್ಲಬ್‌ನ ಸದಸ್ಯರು ಅಣೆಕಟ್ಟಿನ ನಿರ್ವಹಣೆಯಲ್ಲಿ ತೊಡಗಿರುವುದು   

ಮೂಲ್ಕಿ: ಅಣೆಕಟ್ಟುಗಳ ಸಮರ್ಪಕ ನಿರ್ವಹಣೆ ಮೂಲಕ ಹಳ್ಳ–ಕೊಳ್ಳಗಳ ನೀರನ್ನು ತಡೆಹಿಡಿದು ಜಲಮೂಲವನ್ನು ಹೆಚ್ಚಿಸುವ ಮಹಾತ್ಕಾರ್ಯಕ್ಕೆ ಮೂಲ್ಕಿ ಬಳಿಯ ತೋಕೂರು ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್‌ ಕ್ಲಬ್‌ನ ಸದಸ್ಯರು ಮುಂದಾಗಿದ್ದಾರೆ.

ಪ್ರಥಮ ಹಂತವಾಗಿ ತೋಕೂರು ಗ್ರಾಮದ 2ನೇ ವಾರ್ಡ್‌ನ ದೇನೊಟ್ಟು ರಾಘವ ಹೆಬ್ಬಾರರ ಮನೆಯ ಬಳಿ ಇರುವ ಪರಂಬೋಕು ತೋಡಿನ ಕಿಂಡಿ ಅಣೆಕಟ್ಟಕ್ಕೆ ಹಲಗೆ ಅಳವಡಿಸುವ ಕಾರ್ಯವನ್ನು ವಾರಾಂತ್ಯದ ದಿನವಾದ ಭಾನುವಾರ ಶ್ರಮದಾನದ ಮೂಲಕ ನಡೆಸಿದ್ದಾರೆ.

ಮುಂದಿನ ಹಂತದಲ್ಲಿ ಉದ್ಯೋಗ ಖಾತ್ರಿಯ ಯೋಜನೆಯ ಮೂಲಕ ಈಗಾಗಲೇ ನಿರ್ಮಾಣವಾಗಿರುವ ಗ್ರಾಮದಲ್ಲಿನ ಚಿಕ್ಕಟ್ರಾಯಪಾಡಿ, ಕಲ್ಲಾಪು, ಮದ್ದಾರಿಗುತ್ತುವಿನ ರಾಜ ಕಾಲುವೆಯ ಕಿಂಡಿ ಅಣೆಕಟ್ಟುವಿನ ಸುರಕ್ಷತೆಗೆ ಸಜ್ಜಾಗಿದ್ದಾರೆ. ಈ ಕಿಂಡಿ ಅಣೆಕಟ್ಟುಗಳನ್ನು ಬೇಸಿಗೆಯಲ್ಲಿ ಶುಚಿಗೊಳಿಸಿ, ನೀರಿನೊಂದಿಗೆ ಬಂದಿರುವ ತ್ಯಾಜ್ಯ ಸಹಿತ ಮರಗಳು, ಕಸ ಕಡ್ಡಿಗಳನ್ನು ತೆರವುಗೊಳಿಸಿ, ಹಲಗೆಗಳನ್ನು ತೆಗೆದು ಅದಕ್ಕೆ ಎಣ್ಣೆ ಬಳಿದು ಸುರಕ್ಷಿತವಾಗಿಡುವುದು ನಡೆಸಿಕೊಂಡು ಬಂದಿರುವ ಪರಿಪಾಠ. ಮಳೆ ಕಡಿಮೆಯಾದಾಗ ಹಲಗೆಗಳನ್ನು ಅಳವಡಿಸಿ ನದಿಗೆ ಸೇರುವ ಮಳೆ ನೀರನ್ನು ಮಣ್ಣಿನ ಮೂಲಕ ಭದ್ರತೆಯಿಂದ ತಡೆಹಿಡಿದು, ಪರಿಸರದಲ್ಲಿ ಅಂತರ್ಜಲ ಹೆಚ್ಚಿಸುವ ಕಾರ್ಯದಲ್ಲಿ ಕ್ಲಬ್‌ನ ಸದಸ್ಯರು ತೊಡಗಿಕೊಂಡಿದ್ದಾರೆ.

ADVERTISEMENT

ನಿವೃತ್ತ ಸರ್ಕಾರಿ ಅಧಿಕಾರಿ, ಗ್ರಾಮಸ್ಥ ರಾಘವ ಹೆಬ್ಬಾರ್ ಪ್ರತಿಕ್ರಿಯಿಸಿ, ‘ಇಂತಹ ಚಟುವಟಿಕೆಯಿಂದ ಗ್ರಾಮಸ್ಥರ ವಿಶ್ವಾಸ ಗಳಿಸಿರುವ ಸ್ಪೋರ್ಟ್ಸ್‌ ಕ್ಲಬ್‌ನ ಕಾರ್ಯ ನಿಜಕ್ಕೂ ಶ್ಲಾಘನೀಯ. ಇಂತಹ ಕಿಂಡಿ ಅಣೆಕಟ್ಟುಗಳು ನಿರ್ವಹಣೆಯಿಲ್ಲದೇ ಅನೇಕ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದೆ. ಆದರೆ ತೋಕೂರು ಗ್ರಾಮದ ಅಣೆಕಟ್ಟುಗಳು ಗ್ರಾಮಕ್ಕೆ ಆಸರೆಯಾಗಿದೆ’ ಎಂದು ಹೇಳಿದರು.

ಪಡುಪಣಂಬೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮೋಹನ್‌ದಾಸ್ ಪ್ರತಿಕ್ರಿಯಿಸಿ, ‘ಕಿಂಡಿ ಅಣೆಕಟ್ಟುಗಳನ್ನು ಸೇವಾ ಸಂಸ್ಥೆಗಳೇ ನಿರ್ವಹಣೆ ನಡೆಸಿದ್ದರಿಂದ ಪಂಚಾಯಿತಿಗೆ ಆರ್ಥಿಕ ಹೊರೆಯೂ ಕಡಿಮೆಯಾಗಿದೆ. ಇಂತಹ ಸಂಸ್ಥೆಗಳು ಪಂಚಾಯಿತಿಗೆ ಮುಕ್ತ ನೆರವು ನೀಡುತ್ತಿರುವುದರಿಂದ ನಮಗೂ ಹೆಮ್ಮೆಯಾಗಿದೆ’ ಎಂದು ಹೇಳಿದರು.

ಶ್ರಮದಾನದ ತಂಡದಲ್ಲಿ ಪಂಚಾಯಿತಿ ಸದಸ್ಯರಾದ ಮೋಹನ್ ದಾಸ್, ಸಂತೋಪ್‌ ಕುಮಾರ್, ಜ್ಯೋತಿ ಕುಲಾಲ್, ಕ್ಲಬ್‌ ಅಧ್ಯಕ್ಷ ಸಂತೋಷ್ ದೇವಾಡಿಗ, ದೀಪಕ್ ಸುವರ್ಣ, ಸುರೇಶ್ ಶೆಟ್ಟಿ, ಸಂಪತ್ ದೇವಾಡಿಗ, ಗೌತಮ್ ಬೆಲ್ಚಡ, ಜಗದೀಶ್ ಕೋಟ್ಯಾನ್, ಧರ್ಮನಂದ ಶೆಟ್ಟಿಗಾರ್, ರಾಜೇಶ್ ಕುಲಾಲ್, ಹರಿಪ್ರಸಾದ್ ಸುವರ್ಣ, ಚಂದ್ರ ಸುವರ್ಣ, ರಮೇಶ್ ಕರ್ಕೇರ, ಅರ್ಫಾಜ್, ಸಂತೋಷ್ ದೇವಾಡಿಗ, ಮಾಲತೇಶ್, ರಾಘವ ಹೆಬ್ಬಾರ್, ಪುಷ್ಪಲತಾ ಹೆಬ್ಬಾರ್, ಈಶನ್ ಹೆಬ್ಬಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.