ADVERTISEMENT

ಮಂಗಳೂರು | ಸಮುದ್ರದ ನೆಂಟಸ್ತನ: ನೀರಿಗೆ ಬಡತನ

ತಳ ತಲುಪಿದ ಬಾವಿ ನೀರು, ಬತ್ತುತ್ತಿರುವ ನದಿಗಳು, ಟ್ಯಾಂಕರ್ ನೀರಿಗೆ ಮೊರೆ

ಸಂಧ್ಯಾ ಹೆಗಡೆ
Published 15 ಏಪ್ರಿಲ್ 2024, 5:07 IST
Last Updated 15 ಏಪ್ರಿಲ್ 2024, 5:07 IST
   

ಮಂಗಳೂರು: ಬಿಸಿಲಿನ ತಾಪಕ್ಕೆ ಜಿಲ್ಲೆಯಲ್ಲಿ ನದಿಗಳು, ಕೆರೆಗಳು, ತೆರೆದ ಬಾವಿಗಳು ಬರಿದಾಗುತ್ತಿವೆ. ಒಡ್ಡು ಕಟ್ಟಿ ನಿಲ್ಲಿಸಿದ ಅಣೆಕಟ್ಟೆನಲ್ಲೂ ಜಲಮಟ್ಟ ಕುಸಿಯುತ್ತಿದೆ. ನೀರಿಗಾಗಿ ಕಡಲ ತಡಿಯ ಜನರು ನೆಮ್ಮದಿ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಮಾರ್ಚ್ ತಿಂಗಳ ಕೊನೆಯಲ್ಲಿ ಜಿಲ್ಲೆಯಲ್ಲಿ ಒಂದೆರಡು ಬಾರಿ ಮಳೆಬಂದು ಕಾದ ಭೂಮಿಗೆ ತಂಪೆರೆಯುವುದು ಸಾಮಾನ್ಯ ವಾಡಿಕೆ. ತಾಪಮಾನ 38 ಡಿಗ್ರಿ ಸೆಲ್ಸಿಯಸ್ ದಾಟಿ, ಸೆಕೆಯ ಧಗೆ ಹೆಚ್ಚಿದಾಗಲೂ ಕರಾವಳಿ ಒಡಲಿಗೆ ಜಲವನ್ನು ಹರಿಸಿ ತಂಪಾಗಿಸುತ್ತಿದ್ದ ವರುಣ. ಈ ಬಾರಿ ಏಪ್ರಿಲ್ ಮಧ್ಯ ಭಾಗದವರೆಗೂ ಮಳೆಯ ಸುಳಿವಿಲ್ಲ. ಎಲ್ಲೆಲ್ಲೂ ಈಗ ನೀರಿನದೇ ಮಾತುಕತೆ ಶುರುವಾಗಿದೆ. ಚುನಾವಣೆ ಕಾವಿನಷ್ಟೇ ನೀರಿನ ಚರ್ಚೆಯ ಬಿಸಿಯೇರಿದೆ. ಏಪ್ರಿಲ್‌ ತಿಂಗಳ ಕೊನೆಯೊಳಗೆ ಮಳೆಯಾಗದಿದ್ದರೆ, ಜಲಕ್ಷಾಮ ಎದುರಾಗಬಹುದೆಂಬ ಆತಂಕ ಜನರದ್ದಾಗಿದೆ.

ಹಲವಾರು ಅಪಾರ್ಟ್‌ಮೆಂಟ್‌ಗಳು, ಹೋಟೆಲ್‌ಗಳು, ಹಾಸ್ಟೆಲ್‌ಗಳು, ಶಿಕ್ಷಣ ಸಂಸ್ಥೆಗಳು, ಉದ್ದಿಮೆಗಳು, ಟ್ಯಾಂಕರ್ ನೀರನ್ನು ಅವಲಂಬಿಸಿವೆ. ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಿದ ಪರಿಣಾಮ, ದರವೂ ಏರಿಕೆಯಾಗುತ್ತಿದೆ. ಬಾವಿಗಳು ತಳ ಕಂಡಿರುವುದರಿಂದ

ADVERTISEMENT

ಸುರತ್ಕಲ್‌ನಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ಸುಮಾರು 150 ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ಯಾವುದೇ ಜಲಮೂಲ ಇಲ್ಲದ ಕಾರಣ, ಮಹಾನಗರ ಪಾಲಿಕೆ ನೀರನ್ನೇ ಅವಲಂಬಿಸಬೇಕಾಗಿದೆ. ಪಾಲಿಕೆಯ ನೀರು ಸಮರ್ಪಕವಾಗಿ ಬರದ ಕಾರಣ ವಿದ್ಯಾರ್ಥಿಗಳಿಗೆ ಹೆಚ್ಚಿನ ದಿನಗಳಲ್ಲಿ ಟ್ಯಾಂಕರ್‌ ನೀರೇ ಗತಿಯಾಗಿದೆ. ವಿದ್ಯಾರ್ಥಿಗಳು ಬಕೆಟ್‌ನಲ್ಲಿ ನೀರು ತುಂಬಿಕೊಂಡು, ಮೆಟ್ಟಲು ಹತ್ತಿ, ಶೌಚಾಲಯಕ್ಕೆ ಕೊಂಡೊಯ್ಯಬೇಕಾದ ಪರಿಸ್ಥಿತಿ. ಇಲ್ಲಿಯೇ ಬಾವಿ ಅಥವಾ ಕೊಳವೆಬಾವಿ ನಿರ್ಮಿಸುವ ಮೂಲಕ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ. 

ಬಿ.ಸಿ.ರೋಡ್‌ನಲ್ಲಿ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಅಷ್ಟಾಗಿ ಇಲ್ಲ. ಆದರೆ, ಚರಂಡಿ ಸಮರ್ಪಕವಾಗಿ ಇಲ್ಲದ ಕಾರಣ, ನೀರು ನಿಂತು ಸೊಳ್ಳೆಕಾಟ ವಿಪರೀತವಾಗಿದೆ. ಬೇಸಿಗೆ ಧಗೆ, ಜೊತೆಗೆ ಸೊಳ್ಳೆಕಾಟ, ಹಾಸ್ಟೆಲ್ ಬದುಕು ಕಷ್ಟವಾಗಿದೆ ಎನ್ನುತ್ತಾರೆ ವಿದ್ಯಾರ್ಥಿ ನಾಗರಾಜ್.

5 ಕಡೆ ನೀರಿನ ಸಮಸ್ಯೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 75 ವಸತಿ ನಿಲಯಗಳು ಇವೆ. ಅವುಗಳಲ್ಲಿ 23 ಮೆಟ್ರಿಕ್ ಪೂರ್ವ, 52 ಮೆಟ್ರಿಕ್ ನಂತರದ ವಸತಿ ನಿಲಯಗಳಾಗಿವೆ. ಪಿಯುವರೆಗಿನ ಮಕ್ಕಳ ಪರೀಕ್ಷೆ ಮುಗಿದು ಮನೆಗೆ ಹೋಗಿರುವುದರಿಂದ ಮೆಟ್ರಿಕ್ ಪೂರ್ವದ ವಸತಿ ನಿಲಯಗಳಲ್ಲಿ ಸಮಸ್ಯೆ ಇಲ್ಲ. ಮೆಟ್ರಿಕ್ ನಂತರದ ವಸತಿ ನಿಲಯಗಳು ಮಂಗಳೂರು ತಾಲ್ಲೂಕಿನಲ್ಲಿ 30 ಇದ್ದು, ಅವುಗಳಲ್ಲಿ ಸುರತ್ಕಲ್, ಕೂಳೂರು ಕದ್ರಿ ಬಾಲಕರ ವಸತಿ ನಿಲಯ, ಕೊಣಾಜೆ, ಜಪ್ಪಿನಮೊಗರು, ಬಿಜೈ ಬಾಲಕಿಯರ ವಸತಿ ನಿಲಯದಲ್ಲಿ ಸ್ವಲ್ಪ ನೀರಿನ ಸಮಸ್ಯೆ ಇದೆ. ಇಲ್ಲಿ ಮಹಾನಗರ ಪಾಲಿಕೆಯಿಂದ ನೀರು ಸರಬರಾಜಾಗುತ್ತದೆ. ನೀರಿನ ಕೊರತೆಯಾದಾಗ ಟ್ಯಾಂಕರ್ ಮೂಲಕ ನೀರು ತರಿಸುತ್ತೇವೆ. ವಾರಕ್ಕೆ 1–2 ಟ್ಯಾಂಕರ್ ನೀರು ಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗದಂತೆ ಎಚ್ಚವಹಿಸಿದ್ದೇವೆ. ಕುಡಿಯುವ ನೀರಿನ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದೇವೆ ಎನ್ನುತ್ತಾರೆ ಇಲಾಖೆಯ ಪ್ರಭಾರಿ ಉಪನಿರ್ದೇಶಕಿ ಕವಿತಾ ಪಿ.ಪಿ.

ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಮೆಟ್ರಿಕ್ ನಂತರದ 11 ವಸತಿ ನಿಲಯಗಳು ಇದ್ದು, ಅವುಗಳಲ್ಲಿ ಉರ್ವ ಮಾರಿಗುಡಿ ಮತ್ತು ಮಂಜನಾಡಿ ಹಾಸ್ಟೆಲ್‌ಗಳಲ್ಲಿ ನೀರಿನ ಕೊರತೆ ಇದೆ. ‘ನಮ್ಮ ಬಳಕೆಗೆ ನೀರಿನ ಕೊರತೆ ಇಲ್ಲ. ಮಿತವಾಗಿ ಬಳಸುವಂತೆ ಸೂಚನೆ ನೀಡಿದ್ದಾರೆ. ಸ್ಥಳೀಯವಾಗಿ ಯಾವುದೇ ನೀರಿನ ಮೂಲ ಇಲ್ಲ’ ಎನ್ನುತ್ತಾರೆ ವಿದ್ಯಾರ್ಥಿಗಳು.

‘ಪಾಲಿಕೆ ನೀರು ಬರದೇ ಇರುವ ಸಂದರ್ಭದಲ್ಲಿ ಮಕ್ಕಳಿಗೆ ತೊಂದರೆ ಆಗಬಾರದೆಂದು ಟ್ಯಾಂಕರ್ ನೀರು ತರಿಸಿ ಕೊಡುತ್ತೇವೆ. ಮಕ್ಕಳಿಗೆ ಯಾವುದೇ ತೊಂದರೆ ಆಗಿಲ್ಲ’ ಎನ್ನುತ್ತಾರೆ ಇಲಾಖೆಯ ಉಪನಿರ್ದೇಶಕಿ ಮಾಲತಿ.

ಎನ್‌ಐಟಿಕೆಯಲ್ಲಿ ಮುಂಜಾಗ್ರತೆ: ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಕಳೆದ ಬೇಸಿಗೆಯಲ್ಲಿ ನೀರಿನ ತುಟಾಗ್ರತೆ ಉಂಟಾಗಿತ್ತು. ಈ ಕಾರಣಕ್ಕೆ ಶೈಕ್ಷಣಿಕ ವರ್ಷದ ಕ್ಯಾಲೆಂಡರ್‌ ಅನ್ನು ತುಸು ಬದಲಾಯಿಸಿ, ಬೇಗ ಸೆಮ್‌ಗಳನ್ನು ಪೂರ್ಣಗೊಳಿಸಿ, ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ. ಪ್ರಸ್ತುತ ಇಲ್ಲಿ ಪ್ರಸ್ತುತ ಎಂ.ಟೆಕ್ ಮತ್ತು ಸಂಶೋಧನಾ ವಿದ್ಯಾರ್ಥಿಗಳು, ಕಾಲೇಜಿನ ಸಿಬ್ಬಂದಿ ಮಾತ್ರ ಇರುವುದರಿಂದ ನೀರಿಗಾಗಿ ತಲೆಕೆಡಿಸಿಕೊಳ್ಳುವ ಪ್ರಮೇಯ ತಪ್ಪಿದೆ.

ಹೋಟೆಲ್‌ಗಳಿಗೂ ನೀರಿನ ಬಿಸಿ ತಟ್ಟಿದೆ. ಕೊಳವೆಬಾವಿ ಅಥವಾ ತೆರೆದ ಬಾವಿ ಹೊಂದಿರುವ ಹೋಟೆಲ್‌ಗಳಿಗೆ ಇನ್ನೂ ನೀರಿನ ತುಟಾಗ್ರತೆ ಎದುರಾಗಿಲ್ಲ. ಆದರೆ, ಜಲಮೂಲ ಇಲ್ಲದ ಹೋಟೆಲ್‌ಗಳು ಟ್ಯಾಂಕರ್‌ಗಳನ್ನೇ ಅವಲಂಬಿಸಬೇಕಾಗಿದೆ.

‘ನೀರಿನ ಬರದ ಕಾರಣಕ್ಕೆ ಗ್ರಾಹಕರಿಗೆ ತೊಂದರೆ ಮಾಡಲು ಆಗದು. ಹೀಗಾಗಿ, ಟ್ಯಾಂಕರ್‌ ನೀರು ತರಿಸುತ್ತೇವೆ. ಟ್ಯಾಂಕರ್‌ಗಳ ಬೇಡಿಕೆ ಹೆಚ್ಚಾಗಿದ್ದರಿಂದ ದರದಲ್ಲೂ ನಿರ್ದಿಷ್ಟತೆ ಇಲ್ಲದಂತಾಗಿದೆ. ಈ ಬಾರಿ ಬೇಸಿಗೆ ಕಳೆಯುವುದು ಕಷ್ಟ ಇದೆ’ ಎನ್ನುತ್ತಾರೆ ಹೋಟೆಲ್ ಮಾಲೀಕ ಗುರುಪ್ರಸಾದ್.

ಸಂಕಷ್ಟದಲ್ಲಿ ಮಂಜುಗಡ್ಡೆ ಘಟಕ

ತೆರೆದ ಬಾವಿಗಳು ಬತ್ತಿರುವುದರಿಂದ ಮಂಜುಗಡ್ಡೆ ಘಟಕಗಳು (ಐಸ್‌ ಪ್ಲಾಂಟ್) ನೀರಿಗಾಗಿ ಹಣ ಸುರಿಯುವ ಪರಿಸ್ಥಿತಿ ಎದುರಾಗಿದೆ. ಟ್ಯಾಂಕರ್ ನೀರನ್ನೇ ಅವಲಂಬಿಸಿರುವ ಘಟಕಗಳ ಮಾಲೀಕರು, ನಷ್ಟದ ಭೀತಿಯಿಂದ ತಾತ್ಕಾಲಿಕವಾಗಿ ಬಾಗಿಲು ಹಾಕಲು ಯೋಚಿಸುತ್ತಿದ್ದಾರೆ. 

‘ಅಕ್ಟೋಬರ್‌ನಲ್ಲಿ ಮೀನಿನ ಬರ ಎದುರಾಗಿತ್ತು. ಶೇ 70ರಷ್ಟು ಬೋಟ್‌ಗಳು ಕಡಲಿಗಿಳಿಯದೆ, ಲಂಗರು ಹಾಕಿದ್ದವು. ಆಗ ಮಂಜುಗಡ್ಡೆ ಘಟಕಗಳಿಗೆ ಕೆಲಸ ಇರಲಿಲ್ಲ. ಈಗ ಬೋಟ್‌ಗಳು ಮೀನುಗಾರಿಕೆಗೆ ತೆರಳುತ್ತಿವೆ, ಆಳ ಸಮುದ್ರ ಮೀನುಗಾರಿಕೆಗೆ ಹೋಗುವಾಗ ಬೋಟ್‌ಗಳು 10–15 ಟನ್‌ನಷ್ಟು ಮಂಜುಗಡ್ಡೆ ಕೊಂಡೊಯ್ಯುತ್ತವೆ. ವಿದ್ಯುತ್‌ ದರ ಏರಿಕೆ, ಕಾರ್ಮಿಕರ ಸಮಸ್ಯೆ ನಡುವೆ ಈಗ ನೀರು ನಮ್ಮನ್ನು ಕಾಡುತ್ತಿದೆ. ಒಂದು ಘಟಕಕ್ಕೆ ದಿನಕ್ಕೆ 5ರಿಂದ 8 ಟ್ಯಾಂಕರ್ ನೀರು ಬೇಕಾಗುತ್ತದೆ. ಟ್ಯಾಂಕರ್ ನೀರಿನ ದರ ₹1,200ರಿಂದ ₹1,300ರವರೆಗೆ ಇದೆ. ದಿನಕ್ಕೆ ₹6ರಿಂದ 8,000ದವರೆಗೆ ನೀರಿಗಾಗಿ ಖರ್ಚು ಮಾಡಬೇಕಾಗಿದೆ’ ಎನ್ನುತ್ತಾರೆ ಕರ್ನಾಟಕ ಕರಾವಳಿ ಮಂಜುಗಡ್ಡೆ ಮತ್ತು ಶೈತ್ಯಾಗಾರ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಉದಯ್‌ಕುಮಾರ್.

‘ನಗರದಲ್ಲಿ 60–65 ಮಂಜುಗಡ್ಡೆ ಘಟಕಗಳು ಇದ್ದು, ನೀರಿನ ಕೊರತೆಯಿಂದ ಕೆಲವರು ತಾತ್ಕಾಲಿಕವಾಗಿ ಬಂದ್ ಮಾಡುವುದಾಗಿ ಹೇಳುತ್ತಿದ್ದಾರೆ. ಮೀನುಗಾರಿಕೆ ಇಲ್ಲದೆ ಮೀನುಗಾರರು ನಷ್ಟ ಅನುಭವಿಸಿದ್ದು, ಈಗ ಮಂಜುಗಡ್ಡೆ ಘಟಕಗಳು ಬಂದಾದರೆ ಇನ್ನಷ್ಟು ನಷ್ಟವಾಗುತ್ತದೆ ಎಂಬ ಕಾರಣಕ್ಕೆ ಯಾರೂ ಘಟಕ ಬಂದ್ ಮಾಡದಂತೆ ತಿಳಿಸಿದ್ದೇವೆ. ಹಲವಾರು ಘಟಕಗಳು ನೀರಿಗಾಗಿ ಸ್ವಂತ ಬಾವಿಯನ್ನು ಅವಲಂಬಿಸಿದ್ದವು. ಫೆಬ್ರುವರಿಯ ತನಕ ಬಾವಿ ನೀರು ಸಿಕ್ಕಿದೆ. ಪಾಲಿಕೆಯ ನೀರು ನಿರಂತರವಾಗಿ ಲಭ್ಯವಾಗುವುದಿಲ್ಲ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.