ADVERTISEMENT

ಸಂತ್ರಸ್ತ ಹೆಣ್ಣು ಮಗಳ ಕುಟುಂಬ ಹಿಂದೂ ಅಲ್ಲವೇ?: ವೆಲ್ಫೇರ್ ಪಾರ್ಟಿ ಪ್ರಶ್ನೆ

ಹಿಂದುತ್ವವಾದಿ ಸಂಘಟನೆಗಳಿಗೆ ವೆಲ್ಫೇರ್ ಪಾರ್ಟಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 5:30 IST
Last Updated 4 ಜುಲೈ 2025, 5:30 IST
ಸುದ್ದಿಗೋಷ್ಠಿಯಲ್ಲಿ ಎಂ.ದಿವಾಕರ ರಾವ್ ಮಾತನಾಡಿದರು. ಗೋಪಾಲ್‌, ಪ್ರೇಮಾ ಹಾಗೂ ನಿರ್ಮಲಾ ಭಾಗವಹಿಸಿದ್ದರು
ಸುದ್ದಿಗೋಷ್ಠಿಯಲ್ಲಿ ಎಂ.ದಿವಾಕರ ರಾವ್ ಮಾತನಾಡಿದರು. ಗೋಪಾಲ್‌, ಪ್ರೇಮಾ ಹಾಗೂ ನಿರ್ಮಲಾ ಭಾಗವಹಿಸಿದ್ದರು   

ಮಂಗಳೂರು: ‘ಹಿಂದೂಗಳ ಸಂಖ್ಯೆ ಹೆಚ್ಚಿಸಲು ಹೆಚ್ಚು ಮಕ್ಕಳನ್ನು ಹೆರಬೇಕು ಎಂದು ತಾಯಂದಿರಿಗೆ  ಕರೆ ನೀಡುವ ಹಿಂದುತ್ವವಾದಿ ಸಂಘಟನೆಗಳ ಪ್ರಮುಖರು ಮದುವೆಯಾಗುವುದಾಗಿ ನಂಬಿಸಿ ಯುವತಿ ಗರ್ಭವತಿಯಾಗುವಂತೆ ಮಾಡಿದ ಪುತ್ತೂರಿನ ಪ್ರಕರಣದಲ್ಲಿ ಭ್ರೂಣ ತಗೆಸಲು ಸಲಹೆ ನೀಡಿದ್ದಾರೆ. ಅವರ ದ್ವಂದ್ವ ನೀತಿಗೆ ಇದು ಉದಾಹರಣೆ’ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಎಂ.ದಿವಾಕರ್ ರಾವ್ ಆರೋಪಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಸಂತ್ರಸ್ತೆಯ ಕುಟುಂಬ ಹಿಂದೂ ಧರ್ಮಕ್ಕೆ ಸೇರಿಲ್ಲವೇ. ಹಿಂದುತ್ವವಾದಿಗಳ ಹೋರಾಟ ಹೆಣ್ಣು ಮಕ್ಕಳಿಗೆ ಬೇರೆ ಧರ್ಮದವರಿಂದ ಅನ್ಯಾಯ ಆದರೆ ಮಾತ್ರ ಸೀಮಿತವೇ’ ಎಂದು ಪ್ರಶ್ನಿಸಿದರು.‌

‘ವಿಶ್ವ ಹಿಂದೂ ಪರಿಷತ್‌ನ ಮಂಗಳೂರಿನ ಮುಖಂಡ ಹಾಗೂ ಕಲ್ಲಡ್ಕದ ಮುಖಂಡರನ್ನು ಸಂಪರ್ಕಿಸಿದರೂ ನ್ಯಾಯ ಕೊಡಿಸಲಿಲ್ಲ ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ಪರಸ್ಪರ ಪ್ರೀತಿಸಿದ್ದ ಹುಡುಗ–ಹುಡುಗಿಗೆ ಮದುವೆ ಮಾಡಿಸುವುದರ ಬದಲು ಭ್ರೂಣವನ್ನೇ ತೆಗೆಸಲು ಮುಂದಾಗಿದ್ದು ಸರಿಯೇ? ಭ್ರೂಣ ತೆಗೆಸಿದರೆ ಹಣ ನೀಡುವುದಾಗಿ ಹೇಳಿದ್ದು ನಾಚಿಕೆ ಕೇಡಲ್ಲವೇ’ ಎಂದರು.  

ADVERTISEMENT

‘ಯುವತಿಗೆ ಅನ್ಯಾಯ ಮಾಡಿದ ಯುವಕನ ತಂದೆ ಬಿಜೆಪಿ ಮುಖಂಡ. ಆದರೆ ಆ ಪಕ್ಷದ ಮುಖಂಡರು ಯಾರೂ ಸಂತ್ರಸ್ತ ಕುಟುಂಬದ ನೆರವಿಗೆ ಬರಲಿಲ್ಲ. ಸಂತ್ರಸ್ತೆ ಪರ ನಿಲ್ಲದವರು ಮನೆ ಬಾಗಿಲಿಗೆ ಬರಬೇಡಿ ಎಂದು ಬಿಜೆಪಿ ಮುಖಂಡರಿಗೆ ಜಿಲ್ಲೆಯ ಜನರು ಹೇಳಬೇಕು’ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಗೋಪಾಲ್‌, ಸಾಮಾಜಿಕ ಹೋರಾಟಗಾರರಾದ ಪ್ರೇಮಾ ಹಾಗೂ ನಿರ್ಮಲಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.