ಪ್ರಾತಿನಿಧಿಕ ಚಿತ್ರ
ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಬೆಳಾಲು ಗ್ರಾಮದ ಕುಕ್ಕೊಟ್ಟು ಎಂಬಲ್ಲಿ ಕೆರೆಯಲ್ಲಿ ಮಹಿಳೆಯೊಬ್ಬರ ಶವ ಶುಕ್ರವಾರ ಪತ್ತೆಯಾಗಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಬೆಳಾಲು ಗ್ರಾಮದ ಕುಕ್ಕೊಟ್ಟು ನಿವಾಸಿ ನಾಗೇಶ್ ಮತ್ತು ಭಾರತಿ ದಂಪತಿಯ ಎರಡನೆ ಮಗಳು ವೀಣಾ (19) ಅವರ ಶವ ಮನೆಯ ಬಳಿ ಇರುವ ಕೆರೆಯಲ್ಲಿ ಪತ್ತೆಯಾಗಿದೆ.
ವೀಣಾಳಿಗೆ ಮೂರು ತಿಂಗಳು ಮಗುವಿದ್ದು, ಆ ಮಗುವನ್ನು ಸುಬ್ರಹ್ಮಣ್ಯದಲ್ಲಿ ಗಂಡನ ಮನೆಯಲ್ಲಿ ಬಿಡಲಾಗಿತ್ತು. ಮಾನಸಿಕ ರೋಗದಿಂದ ಬಳಲುತ್ತಿದ್ದ ವೀಣಾ ಅವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಎಂದಿನಂತೆ ಮನೆಯಲ್ಲಿದ್ದ ವೀಣಾ ಶುಕ್ರವಾರ ಮಧ್ಯಾಹ್ನ ನಾಪತ್ತೆಯಾಗಿದ್ದು, ಹುಡುಕಾಟ ನಡೆಸಿದಾಗ ಕೆರೆಯ ನೀರಿನ ಆಳವಾದ ಭಾಗದಲ್ಲಿ ಆಕೆಯ ಶವ ಪತ್ತೆಯಾಗಿದೆ. ಬಳಿಕ ರಾತ್ರಿ ಅಗ್ನಿಶಾಮಕ ದಳ ಮತ್ತು ಶೌರ್ಯ ವಿಪತ್ತು ನಿರ್ವಹಣಾ ತಂಡದವರು ಶವವನ್ನು ಹೊರತೆಗೆದರು.
ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿಸಾನಿಕಂ, ಎಫ್‌ಎಸ್‌ಎಲ್ ವಿಭಾಗದ ಸಿಬ್ಬಂದಿ ಅರ್ಪಿತಾ, ಬೆಳ್ತಂಗಡಿ ಇನ್‌ಸ್ಪೆಕ್ಟರ್ ನಾಗೇಶ್ ಕದ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರು ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.