ಬಂಟ್ವಾಳ: ಎರಡೂವರೆ ದಶಕಗಳಿಂದ ವೈದ್ಯಕೀಯ ವೃತ್ತಿಯ ಜೊತೆಗೆ ಯಕ್ಷಗಾನ ಕಲೆ ಮತ್ತು ಕಲಾವಿದರ ಬಗ್ಗೆ ಗಮನಿಸುತ್ತಿದ್ದು, ಯಕ್ಷಗಾನ ಕಲಾವಿದರು ನಿಗದಿತ ಸಮಯದಲ್ಲಿ ಆರೋಗ್ಯ ತಪಾಸಣೆ ನಡೆಸುವ ಮೂಲಕ ಆರೋಗ್ಯದ ಕಡೆಗೆ ಒತ್ತು ನೀಡಬೇಕು ಎಂದು ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಹೇಳಿದರು.
ಇಲ್ಲಿನ ಪೊಳಲಿ ಕ್ಷೇತ್ರದಲ್ಲಿ ಯಕ್ಷಕಲಾ ಸಂಘಟನೆ ವತಿಯಿಂದ 30ನೇ ವಾರ್ಷಿಕೋತ್ಸವ ಪ್ರಯುಕ್ತ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ತೆಂಕು ಮತ್ತು ಬಡಗು ತಿಟ್ಟಿನ ಯಕ್ಷಗಾನ ಪ್ರದರ್ಶನ ಮತ್ತು ಅಗಲಿದ ಕಲಾವಿದರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಯಕ್ಷೊತ್ಸವ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪೊಳಲಿ ರಾಮಕೃಷ್ಣ ತಪೋವನ ವಿವೇಕ ಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಉಜಿರೆ ಅಶೋಕ ಭಟ್ ಅಗಲಿದ ಕಲಾವಿದರ ಸಂಸ್ಮರಣೆ ನೆರವೇರಿಸಿದರು. ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್, ಕಲಾವಿದರು ಮತ್ತು ಸಂಘಟಕರಾದ ಭಾಸ್ಕರ ರೈ ಕುಕ್ಕುವಳ್ಳಿ, ಅಡೂರು ಲಕ್ಷ್ಮೀನಾರಾಯಣ ರಾವ್, ಕೊಳ್ತಿಗೆ ನಾರಾಯಣ ಗೌಡ, ಉಬರಡ್ಕ ಉಮೇಶ ಶೆಟ್ಟಿ, ಭುಜಬಲಿ ಧರ್ಮಸ್ಥಳ, ಜಬ್ಬಾರ ಸಮೊ, ಕರ್ನಿರೆ ಪ್ರಭಾಕರ ಸುವರ್ಣ, ನಾ.ಕಾರಂತ ಪೆರಾಜೆ, ವಸಂತ ಕುಮಾರ್ ಪೆರ್ಲ, ರಾಜೇಂದ್ರ ಕಕ್ಯಪದವು, ಸತೀಶ ಪೂಜಾರಿ ಬೆಳಪು, ಗಿರೀಶ ಹೆಗ್ಡೆ ಪುತ್ತೂರು, ಶಿವರಾಮ ಪರಂಬೋಡಿ, ನಗ್ರಿ ಮಹಾಬಲ ರೈ, ಚಂದ್ರಹಾಸ ಕಣಂತೂರು ಕೈರಂಗಳ, ಸಂಜಯ ಕುಮಾರ್ ರಾವ್ ವಾಗೇಶ್ವರಿ ಸಹಿತ ಸುಮಾರು 150ಕ್ಕೂ ಮಂದಿ ಕಲಾವಿದರನ್ನು ಸನ್ಮಾನಿಸಲಾಯಿತು.
ಕದ್ರಿ ನವನೀತ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಭಾಗವತ ಪಟ್ಲ ಸತೀಶ ಶೆಟ್ಟಿ, ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಮಂಜಯ ಶೆಟ್ಟಿ ಅಮ್ಮುಂಜೆಗುತ್ತು, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ ಪಚ್ಚಿನಡ್ಕ, ಅರ್ಚಕರಾದ ಮಾಧವ ಭಟ್ ಪೊಳಲಿ, ನಾರಾಯಣ ಭಟ್ ಭಾಗವಹಿಸಿದ್ದರು.
ಟ್ರಸ್ಟಿನ ಅಧ್ಯಕ್ಷ ವೆಂಕಟೇಶ ನಾವಡ ಸ್ವಾಗತಿಸಿ, ಜನಾರ್ದನ ಅಮ್ಮುಂಜೆ ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಆರಂಭಗೊಂಡ 'ತ್ರಿಂಶತ್ ಸಂಭ್ರಮ' ಕಾರ್ಯಕ್ರಮಕ್ಕೆ ವಿದ್ವಾಂಸ ಎಂ.ಪ್ರಭಾಕರ ಜೋಶಿ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.