ADVERTISEMENT

ಕರಾವಳಿ: ‘ಯೆಲ್ಲೊ ಅಲರ್ಟ್‌’ ಘೋಷಣೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 16:37 IST
Last Updated 15 ಸೆಪ್ಟೆಂಬರ್ 2019, 16:37 IST
ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಸೋಮವಾರ ಮಳೆಗೆ ರಸ್ತೆ ಮೇಲೆ ನೀರು ಬಂದಿದ್ದು, ಬ್ಯಾರಿಕೇಡ್‌ ಸರಿಪಡಿಸಲು ಯತ್ನಿಸುತ್ತಿರುವ ಪೊಲೀಸರು–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಸೋಮವಾರ ಮಳೆಗೆ ರಸ್ತೆ ಮೇಲೆ ನೀರು ಬಂದಿದ್ದು, ಬ್ಯಾರಿಕೇಡ್‌ ಸರಿಪಡಿಸಲು ಯತ್ನಿಸುತ್ತಿರುವ ಪೊಲೀಸರು–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಬೆಂಗಳೂರು: ‘ರಾಜ್ಯದ ಕರಾವಳಿ ಭಾಗದಲ್ಲಿ ನಾಲ್ಕು ದಿನ ವ್ಯಾಪಕ ಮಳೆಯಾಗಲಿದ್ದು, ಈ ಭಾಗದ ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್‌.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉತ್ತರ ಒಳನಾಡಿನ ಹಲವೆಡೆ ಇದೇ 28ರವರೆಗೆ ಸಾಧಾರಣ ಮಳೆಯಾಗಲಿದೆ. ಬಳಿಕ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಉಳಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಮುಂದಿನ 48 ಗಂಟೆಗಳಲ್ಲಿ ಸಾಧಾರಣ ಮಳೆಯಾಗಲಿದೆ’ ಎಂದು ಮಾಹಿತಿ ನೀಡಿದರು.

ಸೋಮವಾರ ಕುಂದಾಪುರದಲ್ಲಿ 5 ಸೆಂ.ಮೀ.ಮಳೆಯಾಗಿದೆ. ಆಂಕೋಲಾ 4, ಸಿದ್ದಾಪುರ, ಮಂಕಿ 3, ಮಂಗಳೂರು ಹಾಗೂ ಮಳವಳ್ಳಿಯಲ್ಲಿ 2 ಸೆಂ.ಮೀ.ಮಳೆಯಾಗಿದೆ.

ADVERTISEMENT

ಮಂಗಳೂರಿನಲ್ಲಿ ಮಳೆ: ನಗರದಲ್ಲಿ ಸೋಮವಾರ ಧಾರಾಕಾರ ಮಳೆ ಸುರಿದಿದ್ದು, ಕೊಟ್ಟಾರ ಚೌಕಿ, ಭಗವತಿ ದೇವಸ್ಥಾನದ ಪ್ರದೇಶ, ಕೊಡಿಯಾಲ್‌ ಬೈಲ್ ಆಸುಪಾಸಿನಲ್ಲಿ ರಸ್ತೆಯಲ್ಲೇ ನೀರು ನಿಂತು ವಾಹನಗಳ ಸಂಚಾರ ಕೆಲ ಕಾಲ ಅಸ್ತವ್ಯಸ್ತಗೊಂಡಿತು.

ತಗ್ಗು ಪ್ರದೇಶಗಳ ಮನೆ, ಹೋಟೆಲ್, ಅಂಗಡಿಗಳಿಗೆ ನೀರು ನುಗ್ಗಿತ್ತು. ಪಡೀಲ್ ರೈಲ್ವೆ ಕೆಳ ಸೇತುವೆಯಲ್ಲಿ ನೀರು ನಿಂತು ಮಂಗಳೂರು–ಬೆಂಗಳೂರು ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಕೊಟ್ಟಾರ ಚೌಕಿ ರಸ್ತೆಯಲ್ಲಿಯೂ ಒಂದೂವರೆ ತಾಸು ಸಂಚಾರ ಅಸ್ತವ್ಯಸ್ತಗೊಂಡಿತ್ತು. ರಾಜಕಾಲುವೆಗಳು ಕಿರಿದಾಗಿದ್ದು, ಹೂಳು ತುಂಬಿರುವ ಕಾರಣ ರಸ್ತೆಯ ಇಕ್ಕೆಲೆಗಳ ಕೆಲವು ಅಂಗಡಿಗಳಿಗೆ ನೀರು ನುಗ್ಗಿವೆ ಎಂದು ಸ್ಥಳೀಯರು ತಿಳಿಸಿದರು.

ಸುಲ್ತಾನ್ ಬತ್ತೇರಿಯಲ್ಲೂ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಮಠದ ಕಣಿಯಲ್ಲಿ 4 ಮನೆಗಳು ಅಪಾಯದಲ್ಲಿವೆ. . ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಬಂಟ್ವಾಳದಲ್ಲಿ ಆಗಾಗ್ಗೆ ತುಂತುರು ಮಳೆ ಸುರಿದಿದೆ. ಕೊಡಗು ಜಿಲ್ಲೆಯ ಮಡಿಕೇರಿ, ನಾಪೋಕ್ಲು, ಭಾಗಮಂಡಲ ಹಾಗೂ ತಲಕಾವೇರಿ ವ್ಯಾಪ್ತಿಯಲ್ಲಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.