ಮಂಗಳೂರು: ಯೆನೆಪೋಯ ಪುರುಷರ ತಂಡದವರು ಶುಕ್ರವಾರ ಮುಕ್ತಾಯಗೊಂಡ ಇಂಡಿಪೆಂಡೆನ್ಸ್ ಕಪ್ ಫುಟ್‌ಬಾಲ್ ಟೂರ್ನಿಯ ಪದವಿ ಮತ್ತು ಪಿಯು ವಿಭಾಗದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಮಹಿಳೆಯರ ವಿಭಾಗದ ಪ್ರಶಸ್ತಿ ಸೇಂಟ್ ಅಲೋಶಿಯಸ್ ಕಾಲೇಜು ಪಾಲಾಯಿತು. ಯೆನೆಪೋಯ ಪದವಿ ಕಾಲೇಜು ತಂಡ ಈ ಮೂಲಕ ಸತತ ನಾಲ್ಕನೇ ಬಾರಿ ಮತ್ತು ಪಿಯು ಕಾಲೇಜು ಸತತ ಎರಡನೇ ಪ್ರಶಸ್ತಿ ಗೆದ್ದುಕೊಂಡಿತು.
ದಕ್ಷಿಣ ಕನ್ನಡ ಫುಟ್‌ಬಾಲ್ ಸಂಸ್ಥೆ ಆಯೋಜಿಸಿದ್ದ ಟೂರ್ನಿಯ ಪದವಿ ವಿಭಾಗದ ಪುರುಷರ ಫೈನಲ್ ಪಂದ್ಯದಲ್ಲಿ ಯೆನೆಪೋಯ ತಂಡ 3–0 ಗೋಲುಗಳಿಂದ ಟಿಪ್ಪು ಕಾಲೇಜು ವಿರುದ್ಧ ಜಯ ಗಳಿಸಿತು. ರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ ನಾಲ್ವರು ಆಟಗಾರರನ್ನು ಒಳಗೊಂಡಿದ್ದ ಯೆನೆಪೋಯ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಮೊದಲಾರ್ಧದಲ್ಲಿ ತಂಡ ಎರಡು ಗೋಲುಗಳ ಮುನ್ನಡೆ ಸಾಧಿಸಿತು. 14ನೇ ನಿಮಿಷದಲ್ಲಿ ಮೊಹಮ್ಮದ್ ಸಿನಾನ್ ಮತ್ತು 29ನೇ ನಿಮಿಷದಲ್ಲಿ ಸಚಿನ್ ಸುನಿಲ್ ಚೆಂಡನ್ನು ಗುರಿ ಮುಟ್ಟಿಸಿದರು.
ದ್ವಿತೀಯಾರ್ಧದಲ್ಲಿ ಟಿಪ್ಪು ತಂಡ ಪ್ರತಿರೋಧ ತೋರಿತು. ಆದರೂ ಒಂದು ಗೋಲು ಗಳಿಸುವಲ್ಲಿ ಯೆನೆಪೋಯ ಯಶಸ್ವಿಯಾಯಿತು. ರಕ್ಷಣಾ ಗೋಡೆ ಭೇದಿಸಿ ಮುನ್ನಡೆದ ಸುಹೈಬ್ 38ನೇ ನಿಮಿಷದಲ್ಲಿ ತಂಡದ ಮೂರನೇ ಗೋಲು ಗಳಿಸಿದರು.
ಪಿಯು ವಿಭಾಗದ ಫೈನಲ್ ಪಂದ್ಯ ಅತ್ಯಂತ ರೋಚಕವಾಗಿತ್ತು. ನಿಗದಿತ ಅವಧಿಯಲ್ಲಿ 3–3ರಲ್ಲಿ ಸಮಬಲಗೊಂಡ ಪಂದ್ಯದ ಶೂಟೌಟ್‌ನಲ್ಲಿ ಯೆನೆಪೋಯ 5–4ರಲ್ಲಿ ಸೇಂಟ್ ಅಲೋಶಿಯಸ್ ತಂಡವನ್ನು ಮಣಿಸಿತು. ಪಂದ್ಯದ ಮೊದಲ ಗೋಲು ಹೊಡೆದದ್ದು ಅಲೋಶಿಯಸ್. ತಕ್ಷಣ ಅದ್ನಾನ್ ಮೂಲಕ ಪ್ರತ್ಯುತ್ತರ ನೀಡಿದ ಯೆನೆಪೋಯ ನಂತರ ಬಿನ್ಶದ್ ಮತ್ತು ಮುನಾವಿರ್ ಗೋಲುಗಳನ್ನು ತಂದುಕೊಟ್ಟರು.
ಮಹಿಳೆಯರ ವಿಭಾಗದಲ್ಲಿ ಸೇಂಟ್ ಅಲೋಶಿಯಸ್ ಪಿಯು ಕಾಲೇಜು ತಂಡ ಅದೇ ಸಂಸ್ಥೆಯ ಪದವಿ ಕಾಲೇಜು ತಂಡವನ್ನು ಸೋಲಿಸಿ ಪ್ರಶಸ್ತಿ ಗಳಿಸಿತು. ಬಾಲಕರ ವಿಭಾಗದ ಫೈನಲ್‌ನಲ್ಲಿ ನಾಟೆಕಲ್‌ನ ಕುನಿಲ್ ಇಲ್ಮ್ ಅಕಾಡೆಮಿ ತಂಡ ಮಣಿಪಾಲ್ ಸ್ಕೂಲ್ ವಿರುದ್ಧ 2-1ರಿಂದ ಗೆದ್ದಿತು. ಹಿರಿಯ ಪ್ರಾಥಮಿಕ ಶಾಲಾ ಬಾಲಕರ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಕಲ್ಲಾಪು ಪೀಸ್ ಪಬ್ಲಿಕ್ ಶಾಲೆ ತಂಡ ಮೂಡುಬಿದಿರೆಯ ಅಲ್ ಫುರ್ಖಾನ್ ಶಾಲೆ ವಿರುದ್ಧ ಗೆದ್ದಿತು. ಬಾಲಕಿಯರ ವಿಭಾಗದಲ್ಲಿ ಕೊಲ್ಯದ ಸೇಂಟ್ ಜೋಸೆಫ್ ಜೋಯ್‌ಲ್ಯಾಂಡ್ ತಂಡ ಮೌಂಟ್ ಕಾರ್ಮೆಲ್ ಶಾಲೆಯನ್ನು ಮಣಿಸಿತು.
ಪ್ರಶಸ್ತಿ ವಿತರಣೆ
ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಉದ್ಯಮಿಗಳಾದ ಝಕಾರಿಯ ಮುಝೈನ್, ಮೋಹನ್ ಬೆಂಗ್ರೆ, ಮನ್ಸೂರ್ ಅಹ್ಮದ್, ಅಬ್ದುಲ್ಲ ಮೋನು, ಎ.ಕೆ ಸಾಜಿದ್, ಸಮೀರ್ ಹಾಗೂ ಷರೀಫ್, ಕ್ರೀಡಾಪಟು ಪದ್ಮನಾಭ ಕುಮಾರ್, ಮುಖಂಡರಾದ ವಿಜಯ ಸುವರ್ಣ, ಅನಿಲ್ ಪಿ.ವಿ, ಕೋಚ್ ಬಿಬಿ ಥಾಮಸ್ ಪಾಲ್ಗೊಂಡಿದ್ದರು. ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ ಅಸ್ಲಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಹುಸೇನ್ ಬೋಳಾರ್ ವಂದಿಸಿದರು. ಶಿಯಾಝ್ ಕಾರ್ಯಕ್ರಮ ನಿರೂಪಿಸಿದರು.
ಪದವಿ ವಿಭಾಗದಲ್ಲಿ ಟಿಪ್ಪು ಕಾಲೇಜು ತಂಡವನ್ನು ಮಣಿಸಿದ ಯೆನೆಪೋಯ ರೋಚಕ ಅಂತ್ಯ ಕಂಡ ಪಿಯು ವಿಭಾಗದ ಫೈನಲ್ ಪಂದ್ಯ ಮಹಿಳೆಯರ ವಿಭಾಗದಲ್ಲಿ ರನ್ನರ್ ಅಪ್ ಸ್ಥಾನವೂ ಸೇಂಟ್ ಅಲೋಶಿಯಸ್‌ಗೆ
ಫೈನಲ್ ಪಂದ್ಯಗಳ ಸ್ಥಳಾಂತರಕ್ಕೆ ಬೇಸರ ಪ್ರತಿ ವರ್ಷ ಇಂಡಿಪೆಂಡೆನ್ಸ್ ಕಪ್ ಟೂರ್ನಿ ನೆಹರು ಮೈದಾನದಲ್ಲಿ ನಡೆಯುತ್ತದೆ. ಅಲ್ಲಿ ಈಗ ಟರ್ಫ್ ಅಳವಡಿಸುತ್ತಿರುವುದರಿಂದ ಶಾಲಾ ವಿದ್ಯಾರ್ಥಿಗಳ ಪಂದ್ಯಗಳನ್ನು ಕರಾವಳಿ ಉತ್ಸವ ಮೈದಾನ ಮತ್ತು ಕಾಲೇಜು ವಿಭಾಗದ ಪಂದ್ಯಗಳನ್ನು ಯೆನೆಪೋಯ ವಿಶ್ವವಿದ್ಯಾಲಯದ ಆಯುಷ್ ಕ್ಯಾಂಪಸ್‌ನ ಟರ್ಫ್ ಅಳವಡಿಸಿದ ಸುಂದರ ಮೈದಾನದಲ್ಲಿ ನಡೆದಿದ್ದವು. ಆದರೆ ಫೈನಲ್ ಪಂದ್ಯಗಳನ್ನು ದಿಢೀರ್ ಆಗಿ ಕರಾವಳಿ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು. ಇದಕ್ಕೆ ಅನೇಕ ಆಟಗಾರರು ಬೇಸರ ವ್ಯಕ್ತಪಡಿಸಿದರು. ಪಿಯು ಮತ್ತು ಪದವಿ ವಿಭಾಗದ ಎರಡೂ ತಂಡಗಳ ಪೈಕಿ ಅನೇಕ ಆಟಗಾರರು ಕಲ್ಲು ಮಣ್ಣು ತುಂಬಿದ ಮೈದಾನದಲ್ಲಿ ಆಡಲು ಕಷ್ಟವಾಯಿತು. ಎಂದರು. ಕೆಲವು ಪಂದ್ಯಗಳ ವೇಳೆ ಮಳೆಯೂ ಬಂದಿದ್ದರಿಂದ ಬಿದ್ದು ಗಾಯಗಳಾಗುವ ಸಾಧ್ಯತೆಯೂ ಇತ್ತು. ಬೀಳದಂತೆ ಪ್ರಯತ್ನಿಸಿ ನೈಜ ಆಟ ಪ್ರದರ್ಶಿಸಲು ಸಾಧ್ಯವಾಗಲಿಲ್ಲ ಎಂದೂ ಕೆಲವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.