ADVERTISEMENT

ಮಂಗಳೂರು: ನ.14ರಂದು ರಾಷ್ಟ್ರಮಟ್ಟದ ಸ್ಪರ್ಧೆ

ಯುವ ಕಾಂಗ್ರೆಸ್ ವಕ್ತಾರರ ಆಯ್ಕೆಗೆ ಭಾಷಣ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 2:42 IST
Last Updated 24 ಸೆಪ್ಟೆಂಬರ್ 2021, 2:42 IST

ಮಂಗಳೂರು: ಯುವ ಕಾಂಗ್ರೆಸ್ ವಕ್ತಾರರ ಆಯ್ಕೆಗಾಗಿ ‘ಯಂಗ್ ಇಂಡಿಯಾ ಕೆ ಬೋಲ್’ (ಯುವ ಭಾರತದ ಧ್ವನಿ) ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಯುವ ಕಾಂಗ್ರೆಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮನ್ನಾರ್ ಮನ್ನಾನ್ ಹೇಳಿದರು.

ಗುರುವಾರ ನಗರದ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದಿಂದ ಜನರು ಬೇಸತ್ತಿದ್ದಾರೆ. ನಿರುದ್ಯೋಗ ತಾಂಡವಾಡುತ್ತಿದೆ. ಹಿಂದುತ್ವದ ಹೆಸರಿನಲ್ಲಿ ಯುವ ಜನರನ್ನು ದಿಕ್ಜು ತಪ್ಪಿಸುತ್ತಿದೆ ಎಂದು ದೂರಿದರು.

ಈ ನಿಟ್ಟಿನಲ್ಲಿ ಯುವ ಜನರ ಧ್ವನಿಯನ್ನು ರಾಷ್ಟ್ರಮಟ್ಟದಲ್ಲಿ ಬಿಂಬಿಸಲು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ನೇತೃತ್ವದಲ್ಲಿ ಯುವ ಕಾಂಗ್ರೆಸ್ ವಕ್ತಾರರ ಆಯ್ಕೆಗಾಗಿ ಐದು ವಿಷಯಗಳಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಹೀಗೆ ಮೂರು ಭಾಷೆಗಳಲ್ಲಿ ಎರಡು ನಿಮಿಷದ ಭಾಷಣ ಸ್ಪರ್ಧೆ ನಡೆಸಲಾಗುವುದು. ಮೊದಲು ಹಂತದಲ್ಲಿ ಜಿಲ್ಲಾ ಮಟ್ಟದ, ದ್ವಿತೀಯ ಹಂತದಲ್ಲಿ ರಾಜ್ಯ ಮಟ್ಟದ, ಮೂರನೇ ಹಂತದಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ADVERTISEMENT

18ರಿಂದ 35 ವರ್ಷದೊಳಗೆ ಆಸಕ್ತರು ಆನ್‌ಲೈನ್ ಮೂಲಕ ನೋಂದಣಿ ಮಾಡಿ, ಗೂಗಲ್ ಫಾರ್ಮ್ (ಗೂಗಲ್ ಲಿಂಕ್‌ಗಾಗಿ ಮೊ.ಸಂ: 9945145149/ 8088451135 ಸಂಪರ್ಕಿಸಬಹುದು) ತುಂಬಿಸಿ ಕಳುಹಿಸಬೇಕು. ಜಿಲ್ಲಾ ಮಟ್ಟದಿಂದ 5 ಮಂದಿ ವಿಜೇತರನ್ನು, ರಾಜ್ಯ ಮಟ್ಟದಿಂದ 10 ಮಂದಿ ವಿಜೇತರನ್ನು ಆಯ್ಕೆ ಮಾಡಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಕಳಿಸಲಾಗುವುದು ಎಂದು ತಿಳಿಸಿದರು.

ನೋಂದಣಿಗೆ ಅಕ್ಟೋಬರ್ 15 ಕೊನೆಯ ದಿನವಾಗಿದ್ದು, ಅಕ್ಟೋಬರ್ 18ರಂದು ಸ್ಪರ್ಧೆ ನಡೆಸಲಾಗುವುದು. ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರೂ ಅವರ ಜನ್ಮ ದಿನವಾದ ನವೆಂಬರ್ 14ರಂದು ರಾಷ್ಟ್ರಮಟ್ಟದ ಸ್ಪರ್ಧೆಯನ್ನು ನವದೆಹಲಿಯಲ್ಲಿ ಆಯೋಜಿಸಲಾಗುವುದು. ಈ ಸ್ಪರ್ಧೆಯ ಮೂಲಕ ಐವರನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರರನ್ನಾಗಿ ನೇಮಕ ಮಾಡಲಾಗುವುದು ಎಂದು ಮನ್ನಾರ್ ಮನ್ನಾನ್ ಹೇಳಿದರು.

ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಯುವ ಕಾಂಗ್ರೆಸ್ ರಾಜ್ಯ ಘಟಕದ ಕಾರ್ಯದರ್ಶಿ ದೀಪಿಕಾ ರೆಡ್ಡಿ, ಮೇರಿಲ್ ರೇಗೋ, ಗಿರೀಶ್ ಅಳ್ವ, ಅಭಿಷೇಕ್ ಬೆಳ್ಳಿಪ್ಪಾಡಿ, ನವೀದ್ ಅಖ್ತರ್ ಇದ್ದರು.

ಪದಾಧಿಕಾರಿಗಳ ಪಟ್ಟಿ ಪ್ರಕಟ

ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಗುರುವಾರ ಪ್ರಕಟಿಸಿದರು.

ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ಗಿರೀಶ್ ಆಳ್ವ, ಅಭಿಷೇಕ್ ಬೆಳ್ಳಿಪ್ಪಾಡಿ, ಸೌಮ್ಯಲತಾ, ಪ್ರಧಾನ ಕಾರ್ಯದರ್ಶಿಯಾಗಿ ರಮಾನಂದ ಪೂಜಾರಿ, ನವಾಲ್ ಬಿ.ಕೆ., ರಂಜಿತ್ ಬಂಗೇರ, ನವೀದ್ ಅಖ್ತರ್, ಅನುಪ್ ಬಂಗೇರ, ಹಸನ್, ಅಶ್ವತ್‌ರಾಜ್, ಮೋಹಿತ್ ಅರ್ಲಡ್ಕ, ರೋಶನ್ ರೈ, ಮುಹಮ್ಮದ್ ಹಸೈನಾರ್, ವೈಭವ್ ಶೆಟ್ಟಿ, ಮುಹಮ್ಮದ್ ಇರ್ಶಾದ್, ಜಗದೀಶ್ ಕಜೆ, ಪ್ರಸಾದ್ ಗಾಣಿಗ), ಫೈಝಲ್, ತ್ರಿಪತಿ ಕೋಟ್ಯಾನ್, ಶೈಲಜಾ ಅಮರ್‌ನಾಥ್, ಉಮೈ ಬಾನು, ಜಿನ್ನಾ ಲೆನಿಟಾ ಲೋಬೊ, ಕವಿತಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.