ADVERTISEMENT

ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್‌ ಸಮೀರ್‌ಗೆ ನಿರೀಕ್ಷಣಾ ಜಾಮೀನು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 14:30 IST
Last Updated 21 ಆಗಸ್ಟ್ 2025, 14:30 IST
<div class="paragraphs"><p>ಸಮೀರ್‌ ಎಂ.ಡಿ&nbsp;</p></div>

ಸಮೀರ್‌ ಎಂ.ಡಿ 

   

ಮಂಗಳೂರು: ಧರ್ಮಸ್ಥಳ ಠಾಣೆಯ ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಯೂಟ್ಯೂಬರ್‌ ಸಮೀರ್ ಎಂ.ಡಿ.ಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಗುರುವಾರ ಜಾಮೀನು ನೀಡಿದೆ.

ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣ ಸಂಬಂಧ ಕೃತಕ ಬುದ್ಧಿಮತ್ತೆ ನೆರವಿನಿಂದ ತಯಾರಿಸಿದ ವಿಡಿಯೊವನ್ನು ‘ದೂತ’ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಿದ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ADVERTISEMENT

‘ಈ ಪ್ರಕರಣದ ಸಂಬಂಧ ₹ 75 ಸಾವಿರ ಭದ್ರತಾ ಠೇವಣಿ ಪಡೆದುಕೊಂಡು, ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. ಆರೋಪಿಯು ಇಂತಹ ಅಪರಾಧ ಕೃತ್ಯವನ್ನು ಮುಂದುವರಿಸಬಾರದು. ತಲೆಮರೆಸಿಕೊಳ್ಳಬಾರದು. ಪ್ರಕರಣದ ಸಾಕ್ಷಿದಾರರಿಗೆ ಪ್ರಚೋದನೆ, ಪ್ರಲೋಭನೆ ಒಡ್ಡಬಾರದು, ಸಾಕ್ಷ್ಯನಾಶಪಡಿಸಬಾರದು. ಅಗತ್ಯ ಬಿದ್ದಾಗ ತನಿಖಾಧಿಕಾರಿ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಬೇಕು. ಪ್ರಕರಣದ ವಿಚಾರಣೆ ನಡೆಯುವಾಗ ಆರೋಪಿಯ ಉಪಸ್ಥಿತಿಯ ಅಗತ್ಯವಿಲ್ಲದ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗಬೇಕು’ ಎಂದು ನ್ಯಾಯಾಲಯವು ಆರೋಪಿಗೆ ಷರತ್ತು ವಿಧಿಸಿದೆ.

ಪ್ರಕರಣದ ವಿವರ: ‘ಸಾಕ್ಷಿ ದೂರುದಾರ ನೀಡಿರುವ ದೂರಿನ ಆಧಾರದಲ್ಲಿ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಈ ಪ್ರಕರಣ (ಸಂಖ್ಯೆ 39/2025) ಕುರಿತ 23 ನಿಮಿಷ 52 ಸೆಕೆಂಡ್‌ಗಳ ವಿಡಿಯೊವನ್ನು ಆರೋಪಿ ಸಮೀರ್‌ ಧೂತ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಿದ್ದ. ಜುಲೈ 12ರಂದು ಆ ವಿಡಿಯೊ ನೋಡಿದ್ದೆ. ಈ ಸೂಕ್ಷ್ಮ ಪ್ರಕರಣದಲ್ಲಿ ಸಾಕ್ಷಿದಾರ ನೀಡಿದ್ದ ಮಾಹಿತಿಯನ್ನು ಗೋಪ್ಯವಾಗಿಟ್ಟು ತನಿಖೆ ನಡೆಸಲಾಗುತ್ತಿದೆ. ವಿಡಿಯೊವನ್ನು ಪರಿಶೀಲಿಸಿದಾಗ ಪ್ರಕರಣದ ದೂರುದಾರ ನ್ಯಾಯಾಲಯದಲ್ಲಿ ನೀಡಿರುವ ಮಾಹಿತಿಯನ್ನು ಹೊರತುಪಡಿಸಿ ಇನ್ನಷ್ಟು ಮಾಹಿತಿಯನ್ನು ಕಾಲ್ಪನಿಕವಾಗಿ ಸೃಷ್ಟಿಸಿಕೊಂಡಿದ್ದು ಕಂಡುಬಂದಿದೆ. ದೂರುದಾರನಿಗೆ 2018ರ ಸಾಕ್ಷಿ ಸಂರಕ್ಷಣೆ ಯೋಜನೆಯಡಿ ಭದ್ರತೆ ಒದಗಿಸಲಾಗಿದ್ದು, ಆತನ ಬಗ್ಗೆ ಹಂಚಿಕೊಳ್ಳುವ ಮಾಹಿತಿಯಿಂದ ಗುರುತು ಬಹಿರಂಗವಾಗುತ್ತದೆ’ ಎಂದು ಧರ್ಮಸ್ಥಳ ಠಾಣೆಯ ಪಿಎಸ್‌ಐ ಸಮರ್ಥ್ ಆರ್‌. ಗಾಣಿಗೇರ ದೂರಿನಲ್ಲಿ ತಿಳಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಸುಳ್ಳು ಸುದ್ದಿಯನ್ನು ಸಮೀರ್‌ ಹಂಚಿಕೊಂಡಿದ್ದಾನೆ. ಆ ವಿಡಿಯೊದಲ್ಲಿ ‘ಸಾವಿರಾರು ಜನರನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಿ ಮುಚ್ಚಿ ಹಾಕಿದ್ದಾರೆ. ಇದನ್ನು ಕೇಳಿದರೆ ರಕ್ತ ಕುದಿಯುತ್ತಿಲ್ಲವೇ. ಕರ್ನಾಟಕದ ಮೂಲೆ ಮೂಲೆಯಲ್ಲಿರುವವರು ಬೀದಿಗಿಳಿದು ಪ್ರತಿಭಟನೆ ನಡೆಸಬೇಕು. ಈ ಅನ್ಯಾಯದ ವಿರುದ್ಧ ಪ್ರತಿಯೊಬ್ಬರೂ ಧ್ವನಿ ಎತ್ತಬೇಕು’ ಎಂಬ ಸಂದೇಶ ನೀಡಿದ್ದ. ದೊಂಬಿಯನ್ನುಂಟು ಮಾಡುವ ಉದ್ದೇಶದಿಂದ ಸಾರ್ವಜನಿಕರನ್ನು ಉದ್ರೇಕಿಸಿದ್ದ. ಸಾರ್ವಜನಿಕ ಶಾಂತಿ ಭಂಗವಾಗುವಂತೆ ಅಪರಾಧವೆಸಗುವ ಉದ್ದೇಶವಿರುವ ಹೇಳಿಕೆಯನ್ನು ವಿಡಿಯೊದಲ್ಲಿ ನೀಡಿದ್ದ’ ಎಂದು ಅವರು ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.