ದಾವಣಗೆರೆ: ‘2017ರ ಮಾರ್ಚ್ ಅಂತ್ಯದೊಳಗೆ ಅಂಚೆ ಇಲಾಖೆಯ ಪ್ರಧಾನ ಕಚೇರಿಗಳಲ್ಲಿ ಪಾವತಿ ಬ್ಯಾಂಕಿಂಗ್ (ಪೇಮೆಂಟ್ ಬ್ಯಾಂಕ್) ವ್ಯವಸ್ಥೆ ಜಾರಿಗೊಳ್ಳಲಿದ್ದು, ಗ್ರಾಹಕ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಲಿದೆ’ ಎಂದು ಚಿತ್ರದುರ್ಗ ವಿಭಾಗ ಅಂಚೆ ಅಧೀಕ್ಷಕ ಓ.ಗೋವಿಂದಪ್ಪ ತಿಳಿಸಿದರು.
ನಗರದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಛತ್ರದಲ್ಲಿ ಅಖಿಲ ಭಾರತ ಅಂಚೆ ನೌಕರರ ಸಂಘ, ದಾವಣಗೆರೆ ವಿಭಾಗ ಭಾನುವಾರ ಆಯೋಜಿದ್ದ ‘20ನೇ ದ್ವೈವಾರ್ಷಿಕ ಜಂಟಿ ಸಮ್ಮೇಳನ’ ಉದ್ಘಾಟಿಸಿ ಅವರು ಮಾತನಾಡಿದರು.
‘ಪಾವತಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹಾಲಿ ಗ್ರಾಹಕರ ಜೊತೆಗೆ ಖಾತೆ ಮಾಡಿಸುವುದರಿಂದ ವಂಚಿತ ರಾದವನ್ನು ಸೇರ್ಪಡೆ ಗೊಳಿಸಲಾಗುವುದು. ಹಣಕಾಸು ವಹಿವಾಟಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವರ್ಗಾವಣೆ, ಸಂದಾಯ, ಪಾವತಿ ಸೇರಿದಂತೆ ಅಗತ್ಯ ಸೇವೆಗಳನ್ನು ಈ ವ್ಯವಸ್ಥೆಯಡಿಯಲ್ಲಿ ಗ್ರಾಹಕರು ಪಡೆದುಕೊಳ್ಳಬಹುದು’ ಎಂದು ಅವರು ಹೇಳಿದರು.
‘73 ಉಪ ಅಂಚೆ ಕಚೇರಿಗಳು ಸಿಬಿಎಸ್ (ಸೆಂಟ್ರಲ್ ಕೋರ್ ಬ್ಯಾಂಕಿಂಗ್ ಸಿಸ್ಟಮ್) ನೆಲೆಗಟ್ಟಿನ ಅಡಿ ಕಾರ್ಯನಿರ್ವಹಿಸುತ್ತಿವೆ. ಈ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ
ನೀಡಲು ಸಾಧ್ಯವಾಗಿದೆ. 2015–16ನೇ ಸಾಲಿನಲ್ಲಿ ಪೋಸ್ಟಲ್ ಸೆಲ್ಫ್ ಇನ್‌ಷೂರೆನ್ಸ್‌ನಲ್ಲಿ ಉತ್ತಮ ಸಾಧನೆ ಮಾಡಲಾಗಿದೆ. 2016–17ರಲ್ಲಿ ದಾವಣಗೆರೆ–ಚಿತ್ರದುರ್ಗ ವಿಭಾಗದಲ್ಲಿ ಉಳಿತಾಯ ಖಾತೆ, ಗ್ರಾಮೀಣ ಅಂಚೆ ಚೀಟಿ ಹಾಗೂ ವಿಮಾ ಕಂತಿನ ಪ್ರಮಾಣ ಹೆಚ್ಚಿಸುವ ಗುರಿ ಹೊಂದಲಾಗಿದೆ’ ಎಂದು ಗೋವಿಂದಪ್ಪ
ತಿಳಿಸಿದರು.
ಅಂಚೆ ನೌಕರರ ಸಂಘದ ದಾವಣಗೆರೆ ವಿಭಾಗದ ಗೌರವಾಧ್ಯಕ್ಷ ಬಿ.ಟಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಹಾವೇರಿ ವಿಭಾಗೀಯ ಕಾರ್ಯದರ್ಶಿ ಬೆಟಗೇರಿ, ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ಕೆ.ಬಿ.ರೇವಣ್ಣ, ಪಾಲಿಕೆ ಸದಸ್ಯ ಪಿ.ಎನ್.ಚಂದ್ರಶೇಖರ್, ಟಿಎಂ. ಬಸವರಾಜ್, ಎಂ.ಎ.ಕೆಂಪಲಕ್ಕಮ್ಮ, ಸವಿತಾ, ಹೊನ್ನೇಶ್ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಕಾರ್ಯಾಧ್ಯಕ್ಷ ಟಿ.ಮುಕುಂದರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಂ.ಸತೀಶ್ ಸ್ವಾಗತಿಸಿದರು. ಸವಿತಾ ಪ್ರಾರ್ಥನೆ ಮಾಡಿದರು. ಜಿ.ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಅಂಚೆ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.