ADVERTISEMENT

ಅಕ್ರಮ ಟೆಂಡರ್: ಸಾರ್ವಜನಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 9:47 IST
Last Updated 5 ಆಗಸ್ಟ್ 2013, 9:47 IST

ಹರಪನಹಳ್ಳಿ: ತಾಲ್ಲೂಕಿನ ಕೂಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮೀನು ಸಾಕಾಣಿಕೆ ಗುತ್ತಿಗೆದಾರಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು, ಅದರಲ್ಲಿ ಭಾಗಿಯಾದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಯನ್ನು ಅಮಾನತು ಪಡಿಸಬೇಕು ಹಾಗೂ ಸದಸ್ಯರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಪಂಚಾಯ್ತಿ ಕಚೇರಿ ಮುಂದೆ ಶುಕ್ರವಾರ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಪಂಚಾಯ್ತಿ ವ್ಯಾಪ್ತಿಯ ಮೂರು ಕೆರೆಗಳಲ್ಲಿಯೂ ಪ್ರತಿ ವರ್ಷ ಮೀನು ಸಾಕಾಣಿಕೆಗಾಗಿ ಟೆಂಡರ್ ಅಧಿಸೂಚನೆ ಹೊರಡಿಸುವ ಮೂಲಕ ಬಹಿರಂಗ ಹರಾಜು ಪ್ರಕ್ರಿಯೆ ಮೂಲಕ ಮೀನು ಸಾಕಾಣಿಕೆಗಾಗಿ ಗುತ್ತಿಗೆದಾರಿಕೆ ವಹಿಸಬೇಕು. ಆದರೆ, ಪಂಚಾಯ್ತಿಯಲ್ಲಿ ಟೆಂಡರ್ ಕರೆಯದೇ ಏಕಾಏಕಿ  ಜು. 20ರಂದು ನಡೆದ  ಸಾಮಾನ್ಯ ಸಭೆಯಲ್ಲಿ  ಪಂಚಾಯ್ತಿ ಸದಸ್ಯರೊಬ್ಬರ ಸಂಬಂಧಿಕರಿಗೆ ಮೀನು ಸಾಕಾಣಿಕೆಯ ನೇರ ಗುತ್ತಿಗೆ ವಹಿಸಲಾಗಿದೆ ಎಂದು ಆರೋಪಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯ್ತಿ ಸಿಬ್ಬಂದಿ ಪ್ರತಿಭಟನಾಕಾರರ ಆಹವಾಲು ಸ್ವೀಕರಿಸಿ, ಒಂದು ವಾರದೊಳಗೆ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.

ಪಂಚಾಯ್ತಿ ವ್ಯಾಪ್ತಿಯ ಬಂಡ್ರಿ ಗ್ರಾಮದ ವಕೀಲ ಬಿ.ಗೋಣಿಬಸಪ್ಪ, ಬಂಡ್ರಿ ತಾಂಡಾ ಗ್ರಾಮದ ಪಿ. ಶಿವಕುಮಾರನಾಯ್ಕ, ಎರಡೆತ್ತಿನಹಳ್ಳಿ ಗ್ರಾಮ ಬಣಕಾರ್ ಮಂಜುನಾಥ, ಕೂಲಹಳ್ಳಿ ಗ್ರಾಮದ ಬಿ. ವೆಂಟಕೇಶ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.