ADVERTISEMENT

ಅಕ್ರಮ ಮರಳುಗಾರಿಕೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 8:00 IST
Last Updated 19 ಮಾರ್ಚ್ 2012, 8:00 IST

ಹರಿಹರ: `ಒಂದು ಕ್ವಿಂಟಲ್ ಮರಳಿಗೆ ರೂ. 2,000!, 50 ಕೆ.ಜಿ.ಗೆ ರೂ.   1,000, 25 ಕೆ.ಜಿಗೆ ರೂ. 500 ಹಾಗೂ 1ಕೆ.ಜಿಗೆ ರೂ. 20!~

-ಇದೇನು ಮರಳಿನ ದರ ಇಷ್ಟೊಂದು ಹೆಚ್ಚಾಯಿತೇ! ಎಂದು ಆಶ್ಚರ್ಯಪಡಬೇಡಿ. `ತಾಲ್ಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರೋಧಿಸಿ~ ನಗರದ ಗೆಳೆಯರ ಬಳಗ ಸದಸ್ಯರು, ಶುಕ್ರವಾರ ರಾಣಿ ಚೆನ್ನಮ್ಮ ವೃತ್ತದಲ್ಲಿ ಮರಳು ಮಾರಾಟದ ಅಣಕು ಪ್ರದರ್ಶನ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ನಗರಸಭೆ ಸದಸ್ಯ ರಮೇಶ ಮೆಹರ‌್ವಾಡೆ ಮಾತನಾಡಿ, ತಾಲ್ಲೂಕಿನಲ್ಲಿ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ತಾಲ್ಲೂಕಿನಿಂದ ಬೆಂಗಳೂರು ಹಾಗೂ ಇತರೆ ಮಹಾ ನಗರಗಳಿಗೆ ಮರಳು ಮಾರಾಟವಾಗುತ್ತಿದೆ. ಇದರಿಂದಾಗಿ ಸ್ಥಳೀಯರಿಗೆ ಮರಳಿನ ಬೆಲೆ ಎರಡರಿಂದ ಮೂರು ಪಟ್ಟು ಹೆಚ್ಚಾಗಿದೆ. ಮಧ್ಯಮ ವರ್ಗದವರ ಸ್ವಂತ ಮನೆ ನಿರ್ಮಾಣದ ಆಸೆ ಮರಳು ಮಾಫಿಯಾದ ಕೈಯಲ್ಲಿ ಜೀವ ಕಳೆದುಕೊಂಡಿದೆ. ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ, ತಾಲ್ಲೂಕು ಆಡಳಿತ ಮತ್ತು ಲೋಕೋಪಯೋಗಿ ಇಲಾಖೆ ಕಣ್ಮುಚ್ಚಿಕೊಂಡಿರುವುದು ಅವರೂ ಅಕ್ರಮ ಮರಳುಗಾರಿಕೆಯಲ್ಲಿ ಶಾಮೀಲಾಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ADVERTISEMENT

ಸರ್ಕಾರ ನಿಯಮ ಮೀರಿ ತಾಲ್ಲೂಕಿನಲ್ಲಿ ಸುಮಾರು 42 ಯಾಂತ್ರಿಕೃತ ಬೋಟ್‌ಗಳಿಂದ ಮರಳು ತೆಗೆಯಲಾಗುತ್ತಿದೆ. ಇದೇ ರೀತಿ ಅಕ್ರಮ ಮರಳುಗಾರಿಕೆ ಮುಂದುವರಿದರೆ, ತಾಲ್ಲೂಕಿನಲ್ಲಿ ಮರಳಿನ ಬೆಲೆ ಚಿನ್ನದ ಬೆಲೆಗಿಂತ ಹೆಚ್ಚಿಗೆ ಆಗುವುದರಲ್ಲಿ ಸಂಶಯವಿಲ್ಲ. ತಾಲ್ಲೂಕಿನ ಜನರಿಗೆ ಕಡಿಮೆ ಬೆಲೆಯಲ್ಲಿ ಮರಳು ಸಿಗುವ ವ್ಯವಸ್ಥೆ ಆಗಬೇಕು. ತಾಲ್ಲೂಕಿನ ಯಾವ ಯಾವ ಪ್ರದೇಶಗಳಲ್ಲಿ ಯಾರಿಗೆ ಮರಳುಗಾರಿಕೆ ನಡೆಸಲು ಪರವಾನಗಿ ನೀಡಲಾಗಿದೆ ಎಂಬುದನ್ನು ಪತ್ರಿಕೆಗಳ ಮೂಲಕ ಪ್ರಕಟಪಡಿಸಬೇಕು. ಅಕ್ರಮ ಮರಳುಗಾರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸುರೇಶ  ತೆರದಾಳ್ ಪಾಪಣ್ಣಿ, ಪಿ. ಮಾರುತಿ, ಕೆ. ರಾಜು, ತುಳಜಪ್ಪ, ವೈ. ಆನಂದ, ಶ್ರೀನಿವಾಸ, ಶಾಂತಮೂರ್ತಿ, ಪ್ರವೀಣ, ರಮೇಶ್ ಹಾಗೂ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.