ADVERTISEMENT

ಅಡಿಕೆ ನಿಷೇಧಕ್ಕೆ ತುಮ್ಕೋಸ್‌ ವಿರೋಧ

ಸಿಗರೇಟ್‌ ಕಂಪೆನಿಗಳ ಲಾಬಿ ಆರೋಪ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 5:35 IST
Last Updated 24 ಡಿಸೆಂಬರ್ 2013, 5:35 IST

ಚನ್ನಗಿರಿ: ದೇಶದಲ್ಲಿ ಅಡಿಕೆ ಬೆಳೆಯನ್ನು ನಿಷೇಧ ಮಾಡುವಂತೆ ಒಂದು ವರ್ಗದ ವ್ಯವಸ್ಥಿತ ಸಂಚಿನ ಫಲವಾಗಿ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಷೇಧ ಮಾಡಲು ಹೊರಟಿರುವುದನ್ನು ವಿರೋಧಿಸಿ ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘ ಹಾಗೂ ರೈತ ಸಂಘದವರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಅಡಿಕೆಯನ್ನು ವೈಜ್ಞಾನಿಕವಾಗಿ ಯಾವುದೇ ಪರೀಕ್ಷೆ ಮಾಡದೇ ನಿಷೇಧ ಮಾಡಲು ಕೇಂದ್ರ ಸರ್ಕಾರ ಹೊರಟಿರುವುದು ದುರದೃಷ್ಟದ ಸಂಗತಿಯಾಗಿದೆ. ರಾಜ್ಯದಲ್ಲಿ 5.5 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಬೆಳೆ ನಿಷೇಧದಿಂದ ಲಕ್ಷಾಂತರ ಕುಟುಂಬಗಳು ಬೀದಿಗೆ ಬೀಳುತ್ತವೆ. ಅಡಿಕೆಯಿಂದ ಯಾವುದೇ ದುಷ್ಪರಿಣಾಮಗಳು ಇಲ್ಲವೆಂದು ಸಾಬೀತಾದರೂ ಸಿಗರೇಟ್‌ ಕಂಪೆನಿಗಳ ಲಾಬಿಯಿಂದ ಅಡಿಕೆ ನಿಷೇಧ ಮಾಡಬೇಕೆಂಬ ವ್ಯವಸ್ಥಿತ ಪಿತೂರಿ ನಡೆದಿದೆ ಎಂದು ತುಮ್ಕೋಸ್‌ ಅಧ್ಯಕ್ಷ ಎಚ್‌.ಎಸ್‌.ಶಿವಕುಮಾರ್ ದೂರಿದರು.

ಅಡಿಕೆ ಬೆಳೆ ನಿಷೇಧ ವದಂತಿ ವ್ಯಾಪಕವಾಗಿ ಹಬ್ಬಿದ್ದು, ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಅಡಿಕೆ ಬೆಳೆ ನಿಷೇಧ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಅಡಿಕೆ ಬೆಳೆಗಾರರು ತೀವ್ರ ಹೋರಾಟ ಮಾಡಲು ಸಿದ್ಧರಾಗಿದ್ದಾರೆ ಎಂದರು.

ತುಮ್ಕೋಸ್‌ ಕಚೇರಿಯಿಂದ ಹೊರಟ ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ತಹಶೀಲ್ದಾರ್‌ ಕಚೇರಿಗೆ ಆಗಮಿಸಿ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.

ಕಗ್ಮಾ ಸಂಘದ ಅಧ್ಯಕ್ಷ ಆರ್‌.ಎಂ.ರವಿ, ತುಮ್ಕೋಸ್ ನಿರ್ದೇಶಕರಾದ ಎಚ್‌.ಎಸ್‌. ಮಲ್ಲಿಕಾರ್ಜುನಪ್ಪ, ಈಶ್ವರಪ್ಪ, ಜಿ.ಆರ್‌.ಶಿವಕುಮಾರ್‌, ರೈತ ಸಂಘದ ಅಧ್ಯಕ್ಷ ಕುಬೇಂದ್ರಪ್ಪ, ಮುಗಳಿಹಳ್ಳಿ ಶ್ರೀಕಂಠಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.