ADVERTISEMENT

ಅಡಿಗಲ್ಲು ಕಾರ್ಯಕ್ರಮದಲ್ಲಿ ಕರುಣಾಕರ ರೆಡ್ಡಿ ಭರವಸೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 9:45 IST
Last Updated 16 ಫೆಬ್ರುವರಿ 2011, 9:45 IST

ಹರಪನಹಳ್ಳಿ: ಉದ್ದೇಶಿತ ಗರ್ಭಗುಡಿ ಬ್ಯಾರೇಜ್ ಯೋಜನೆಯ ಕಾಮಗಾರಿಗೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಜಿ. ಕರುಣಾಕರರೆಡ್ಡಿ ಹೇಳಿದರು.
ಮಂಗಳವಾರ ತಾಲ್ಲೂಕಿನ ಗರ್ಭಗುಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸೋಮಲಿಂಗೇಶ್ವರ ದೇವಸ್ಥಾನದ ಪುನರ್ ನಿರ್ಮಾಣದ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ತುಂಗಾಭದ್ರೆ ಹಾದು ಹೋಗಿದ್ದರೂ ಸಹ, ಕೇವಲ ಶೇ. 10ರಷ್ಟು ಮಾತ್ರ ನೀರಾವರಿ ಪ್ರದೇಶವಿದೆ.

ಒಂದೆಡೆ ಮಳೆಯ ಜೂಜಾಟ ಹಾಗೂ ಇನ್ನೊಂದೆಡೆ ಅಂತರ್ಜಲ ಕುಸಿತದ ಕಡು ಕೋಪಕ್ಕೆ ಬಲಿಯಾದ ರೈತರ ಬದುಕು ಅತಂತ್ರವಾಗಿದೆ. ಅಂತಹ ರೈತರಿಗೆ ಸಂಜೀವಿನಿ ರೂಪದಲ್ಲಿರುವ ಯೋಜನೆಗೆ ಯೋಜನಾ ವರದಿ ಸಿದ್ಧಪಡಿಸಿ ಪ್ರಸ್ತಾವ ಸಲ್ಲಿಸಲಾಗಿದೆ. ಮೊದಲು ಕೇವಲ ` 8 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಯಿತು. ಅದರಿಂದ ಕೇವಲ ಹಣ ವೆಚ್ಚವಾಗುತ್ತಿತ್ತೇ ವಿನಃ, ಸಾರ್ಥಕ ಆಗುತ್ತಿರಲಿಲ್ಲ. ಯೋಜನೆಯನ್ನು ಪರಿಷ್ಕರಿಸಿ ಕಾಮಗಾರಿಯ ಗುಣಮಟ್ಟ ಹಾಗೂ ಪ್ರಯೋಜನೆಯ ಸಲುವಾಗಿ ` 46 ಕೋಟಿ ಪ್ರಸ್ತಾವ ಹಣಕಾಸು ಇಲಾಖೆಗೆ ಸಲ್ಲಿಸಲಾಗಿದೆ. ಈಗಾಗಲೇ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಅವರು ಹಾಗೂ ಇಲಾಖೆ ಉನ್ನತ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ ಎಂದರು.

ಪ್ರತಿವರ್ಷ ಮಳೆಗಾಲದಲ್ಲಿ ತುಂಗಭದ್ರಾ ನದಿಯಲ್ಲಿ ಉಂಟಾಗುತ್ತಿದ್ದ ಪ್ರವಾಹದಿಂದ ಆತಂಕ ಎದುರಿಸುತ್ತಿದ್ದ ಹಲುವಾಗಲು ಹಾಗೂ ಗರ್ಭಗುಡಿ ಗ್ರಾಮದ ಮನೆಗಳ ಸ್ಥಳಾಂತರದ ಪ್ರಕ್ರಿಯೆಗಾಗಿ ನಿರ್ಮಿಸುತ್ತಿರುವ ‘ಆಸರೆ’ ಯೋಜನೆ ಕಾಮಗಾರಿ ನಿಧಾನವಾಗಿದೆ ಎಂದು ಗ್ರಾಮಸ್ಥರು ದೂರಿದ ಹಿನ್ನೆಲೆಯಲ್ಲಿ, ಯೋಜನಾ ಪ್ರದೇಶಕ್ಕೆ ಶೀಘ್ರದಲ್ಲಿಯೇ ಭೇಟಿ ನೀಡಿ, ಕಾಮಗಾರಿ ಗುಣಮಟ್ಟ, ಚುರುಕುಗೊಳಿಸುವಂತೆ ನಿರ್ವಹಣಾ ಏಜೆನ್ಸಿಗೆ ಸೂಚಿಸಲಾಗುವುದು ಎಂದು ಹೇಳಿದರು.

ಸ್ಥಗಿತಗೊಂಡಿರುವ ಏತ ನೀರಾವರಿ ಯೋಜನೆಯನ್ನು ಕೂಡಲೇ ಪುನರಾರಂಭಿಸಲು ಸಂಬಂಧಿಸಿದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸುವುದಾಗಿ ಗ್ರಾಮಸ್ಥರ ಮನವಿಗೆ ತಿಳಿಸಿದರು.ಉಪ ವಿಭಾಗಾಧಿಕಾರಿ ಕೆ. ಶ್ರೀನಿವಾಸ್, ಡಿವೈಎಸ್‌ಪಿ ಅನಿತಾ ಬಿ. ಹದ್ದಣ್ಣವರ್, ತಹಶೀಲ್ದಾರ್ ಟಿ.ವಿ. ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಎಸ್. ಜತ್ತಿ, ಜಿ.ಪಂ. ಸದಸ್ಯ ಆರ್. ಈಶ್ವರಪ್ಪ, ಆರುಂಡಿ ನಾಗರಾಜ, ಜಿ. ನಂಜನಗೌಡ, ಗಿರಿರಾಜರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.