ADVERTISEMENT

ಅಡ್ಡಪಲ್ಲಕ್ಕಿ ಉತ್ಸವಕ್ಕೆ ಅಪಸ್ವರ ಸಲ್ಲದು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 8:10 IST
Last Updated 20 ಅಕ್ಟೋಬರ್ 2012, 8:10 IST

ಹರಪನಹಳ್ಳಿ: ಸರ್ವರಿಗೂ ಸಮಾನತೆಯ ಮಂತ್ರ ಬೋಧಿಸಿದ ಹಾಗೂ ಮನುಕುಲದ ಕಲ್ಯಾಣಕ್ಕಾಗಿ ಜಗತ್ತಿಗೆ ಆದರ್ಶ ಹಾಗೂ ಉದಾತ್ತ ಮೌಲ್ಯಗಳ ಸಂದೇಶ ಸಾರಿದ ವೀರಶೈವ ಧರ್ಮ ಪ್ರಸಾರದ ಪವಿತ್ರ ಕಾಯಕದಲ್ಲಿ ತೊಡಗಿಸಿಕೊಂಡಿರುವ ಪಂಚಪೀಠಗಳ ಕೆಲ ಆಚರಣೆ ಹಾಗೂ ಪರಂಪರೆಯ ಕುರಿತು ಅಪಸ್ವರದ ಗುಲ್ಲೆಬ್ಬಿಸುತ್ತಿರುವುದು ವಿಷಾದ ಸಂಗತಿ ಎಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶೀಕೇಂದ್ರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಮೇಗಳಪೇಟೆಯ ಗುಗ್ಗಳ ವೀರಭದ್ರೇಶ್ವರಸ್ವಾಮಿ ದೇವಸ್ಥಾನದಲ್ಲಿ ದಸರಾ ಅಂಗವಾಗಿ ಹಮ್ಮಿಕೊಂಡಿರುವ 16ನೇ ವರ್ಷದ ಶ್ರೀದೇವಿ ಪುರಾಣ ಪ್ರವಚನ ಹಾಗೂ ದಸರಾ ಧರ್ಮಜಾಗೃತಿ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ಅಡ್ಡಪಲ್ಲಕ್ಕಿ ಉತ್ಸವದ ಬಳಿಕ ನಡೆದ ಧರ್ಮಸಭೆಯ ನೇತೃತ್ವ ವಹಿಸಿ, ಆಶೀರ್ವಚನ ನೀಡಿ ಅವರು ಮಾತನಾಡಿದರು.

ಧರ್ಮಜಾಗೃತಿ, ಧರ್ಮಪ್ರಸಾರ ಹಾಗೂ ಮಾನವ ಕಲ್ಯಾಣಕ್ಕಾಗಿ ಶ್ರಮಿಸಿದ ಯುಗಪ್ರವರ್ತಕ, ಆದಿ ಗುರುವರ್ಯರನ್ನು ಭಕ್ತರು, ಶ್ರದ್ಧಾ-ಭಕ್ತಿಯಿಂದ ಆಧ್ಯ ಉತ್ಸವದ ಮೂಲಕ ಬರಮಾಡಿಕೊಂಡು, ಗುರುವಿನಲ್ಲಿ ಶಿವನ ಸಾಕಾರ ರೂಪವನ್ನು ಕಾಣುತ್ತಿರುವ ಪರಂಪರೆ ಶತಶತಮಾನಗಳಿಂದಲೂ ನಡೆದು ಕೊಂಡು ಬಂದಿದೆ. 

ಕ್ರಮೇಣ ಈ ಆಧ್ಯ ಉತ್ಸವ ಭಕ್ತ ಬಾಯಲ್ಲಿ ಅಪಭ್ರಂಶಗೊಳ್ಳುವ ಮೂಲಕ ಅಡ್ಡಪಲ್ಲಕ್ಕಿ ಉತ್ಸವ ಎಂದು ರೂಢಿಗತವಾಗಿದೆ. ಈ ಪರಂಪರೆಯ ಆಚರಣೆ ಭಕ್ತರ ಭಾವನೆಗಳ ಮೇಲೆ ಅವಲಂಬಿತವಾಗಿದೆಯೇ ಹೊರತು, ಯಾರ ಮೇಲೆಯೂ ಒತ್ತಾಯಪೂರ್ವಕದ ಹೇರಿಕೆಯಲ್ಲ. ಆದಾಗ್ಯೂ ಕೆಲ ಆಚರಣೆ, ಪರಂಪರೆ ಕುರಿತು ಭಕ್ತರಲ್ಲಿ ಗೊಂದಲ ಸೃಷ್ಟಿಸಲು ಹೊರಟಿದ್ದಾರೆ ಎಂದು ಹೇಳಿದರು.

ವ್ಯವಹಾರಿಕ ದೃಷ್ಟಿಕೋನದಿಂದ ಕೆಲವರು ಶೈಕ್ಷಣಿಕ ದಾಸೋಹದ ಹೆಸರಿನಲ್ಲಿ ಕೆಲವರು ಶಿಕ್ಷಣ ಸಂಸ್ಥೆ ತೆರೆಯುವ ಮೂಲಕ ಧರ್ಮ ಪರಂಪರೆಯನ್ನು ವಾಣಿಜ್ಯೀಕರಣ ಗೊಳಿಸಲು ಹೊರಟಿದ್ದಾರೆ. ಆದರೆ, ಪಂಚಪೀಠಗಳು ಮನುಷ್ಯ- ಮನುಷ್ಯನ ಹೃದಯಗಳನ್ನು ಬೆಸೆಯುವ ಮೂಲಕ ಪರಸ್ಪರ ಪ್ರೀತಿ, ಭಾತೃತ್ವ, ಏಕತೆ, ಕೋಮು ಸೌಹಾರ್ದತೆ ನೆಲೆಗಟ್ಟಿನಲ್ಲಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಸ್ಥಾಪಿಸುವ ಗುರುತರ ಸಾಮಾಜಿಕ ಹೊಣೆಗಾರಿಕೆಯಲ್ಲಿ ತೊಡಗಿಸಿಕೊಂಡಿವೆ ಎಂದು ಪ್ರತಿಪಾದಿಸಿದರು.

ನೇತೃತ್ವ ವಹಿಸಿದ್ದ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಸ್ಥಳೀಯ ತೆಗ್ಗಿನಮಠದ ಚಂದ್ರಮೌಳೀಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಅವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ರಾಮಘಟ್ಟದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರು ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಬೆಣ್ಣಿಹಳ್ಳಿ ಹಿರೇಮಠದ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ಹೂವಿನಹಡಗಲಿ ಗವಿಮಠದ ಹಿರಿಯ ಶಾಂತವೀರ ಸ್ವಾಮೀಜಿ, ನಂದಿಪುರ ಮಹೇಶ್ವರ ಸ್ವಾಮೀಜಿ, ನಿಚ್ಚವ್ವನಹಳ್ಳಿ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ, ಡಿವೈಎಸ್‌ಪಿ ಎಚ್.ಆರ್. ರಾಧಾಮಣಿ, ಪುರಸಭಾ ಸದಸ್ಯರಾದ ಎಚ್.ಬಿ. ಪರಶುರಾಮಪ್ಪ, ಪ್ರದೀಪ್, ತೆಗ್ಗಿನಮಠದ ವ್ಯವಸ್ಥಾಪಕ ಟಿ.ಎಂ. ಚಂದ್ರಶೇಖರಯ್ಯ, ಮುಖಂಡರಾದ ಕೆ.ಎಂ. ಮಂಜುನಾಥಯ್ಯ, ಟಿ.ಎಚ್.ಎಂ. ವಿರೂಪಾಕ್ಷಯ್ಯ, ಗಂಗಾಧರ ಗುರುಮಠ್, ಸದ್ಯೋಜಾತಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.