ದಾವಣಗೆರೆ: ಅಣು ವಿದ್ಯುತ್ ಸ್ಥಾವರಗಳು ಸುರಕ್ಷಿತ. ಅವುಗಳಿಂದ ಮಾನವ ಅಥವಾ ಪರಿಸರದ ಮೇಲೆ ಪ್ರತಿಕೂಲ ಪರಿಣಾಮವೇನು ಉಂಟಾಗುವುದಿಲ್ಲ. ಹೀಗಾಗಿ, ಇಂತಹ ಸ್ಥಾವರಗಳ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಕುವೆಂಪು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಪಿ. ವಂಕಟರಾಮಯ್ಯ ತಿಳಿಸಿದರು.
ನಗರದ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಸಂಸ್ಥೆಯಲ್ಲಿ ವಿಜ್ಞಾನ ವೇದಿಕೆ ವತಿಯಿಂದ ಈಚೆಗೆ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ- 2012 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ಹಿಂದೆಯೇ ಹಲವು ಅಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾಗಿದೆ. ಅವುಗಳು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದೆ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಮಾಹಿತಿಯನ್ನು ಪ್ರಚಾರಪಡಿಸಬೇಕು. ಮುಖ್ಯವಾಗಿ ಇಂಥ ಯೋಜನೆಗಳನ್ನು ಪ್ರಬಲವಾಗಿ ವಿರೋಧಿಸುತ್ತಿರುವ ಗ್ರಾಮೀಣ ಪ್ರದೇಶಗಳ ಜನಸಾಮಾನ್ಯರಿಗೆ ಈ ವಿಷಯವನ್ನು ತಿಳಿಸುವ ಅಗತ್ಯವಿದೆ.
ಭವಿಷ್ಯದ ದಿನಗಳಲ್ಲಿ ಅಣು ವಿದ್ಯುತ್ ಸ್ಥಾವರಗಳಿಗೆ ಆದ್ಯತೆ ನೀಡಿದಲ್ಲಿ, ಭಾರತ `ಸೂಪರ್ ಪವರ್~ ದೇಶವಾಗಲಿದೆ ಎಂದು ಪ್ರತಿಪಾದಿಸಿದರು.
ಯುವ ಎಂಜಿನಿಯರ್‌ಗಳು ಪರ್ಯಾಯ ವಿದ್ಯುತ್ ಮೂಲಗಳಾದ ಸೌರಶಕ್ತಿ, ಜಲ ವಿದ್ಯುತ್, ಪವನಶಕ್ತಿ ಮೊದಲಾದವುಗಳಿಗೆ ಸಂಬಂಧಿಸಿದಂತೆ ಹೆಚ್ಚು ಹೆಚ್ಚು ಸಂಶೋಧನೆಗಳನ್ನು ನಡೆಸಬೇಕು ಹಾಗೂ ಯೋಜನೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಕರೆ ನೀಡಿದರು.
ಬಿಐಇಟಿ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ, ಪ್ರಾಂಶುಪಾಲ ಪ್ರೊ.ವಿ. ರಾಮಸ್ವಾಮಿ, ವಿಜ್ಞಾನ ವೇದಿಕೆ ಸಂಚಾಲಕ ಪ್ರೊ.ಎಂ.ಎಸ್. ದೇವೇಂದ್ರಪ್ಪ, ಪ್ರೊ.ಕೆ.ಎಸ್. ಬಸವರಾಜಪ್ಪ, ಪ್ರೊ.ಬಿ.ಇ. ಬಸವರಾಜಪ್ಪ ಮಾತನಾಡಿದರು.
ವಿಜ್ಞಾನ ವೇದಿಕೆ ವತಿಯಿಂದ ನಡೆಸಿದ ರಸಪ್ರಶ್ನೆ, ಪ್ರಬಂಧ, ಚರ್ಚಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.ಬಿಐಇಟಿ ಆಡಳಿತ ಮಂಡಳಿ ಅಧ್ಯಕ್ಷ ಎ.ಸಿ. ಜಯಣ್ಣ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.