ADVERTISEMENT

ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 7:56 IST
Last Updated 21 ಏಪ್ರಿಲ್ 2018, 7:56 IST

ಹರಪನಹಳ್ಳಿ: ಜಮ್ಮುವಿನಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ವಿವಿಧ ಸಂಘಟನೆಗಳು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ‌ ನಡೆಸಿದವು.

ಝರಾ-ಎ-ಮುಸ್ತಫಾ ಎಜುಕೇಷನ್ ಆ್ಯಂಡ್ ವೆಲ್‌ಫೇರ್‌ ಅಸೋಸಿಯೇಷನ್, ಶಹೀದ್ ಎ-ಅಜಂ, ಸುನ್ನಿ ಸ್ಟೂಡೆಂಟ್ ಫೆಡರೇಷನ್, ಲಬ್ಬೈಕ್ ರಸಲೂಲ್ಲಾ ಅಸೋಸಿಯೇಷನ್, ಸುವರ್ಣ ಕರ್ನಾಟಕ ಇತ್ತೆಹಾದ್ ವೇದಿಕೆ, ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘಟನೆ, ಕೃಷಿ ಕೂಲಿಕಾರರ ಸಂಘ, ಅಂಗವಿಕಲರ ಸಂಘ ಸೇವೆ ವಿವಿಧ ನ್ಯಾಯಪರ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ಐಬಿ ವೃತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.

ದೇಶದಲ್ಲಿ ಬಾಲಕಿಯರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಜನರಲ್ಲಿ ಆತಂಕ ಮೂಡಿಸಿವೆ. ದೇಶದ ಏಕತೆಗೆ ಧಕ್ಕೆ ಉಂಟುಮಾಡುತ್ತಿವೆ. ಸಾಮೂಹಿಕ ಅತ್ಯಾಚಾರ ಪ್ರಕರಣಗಳನ್ನು ವಿಶೇಷ ಎಂದು ಪರಿಗಣಿಸಿ, ತ್ವರಿತವಾಗಿ ವಿಚಾರಣೆ ನಡೆಸಬೇಕು. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಯಾವುದೇ ಜಾತಿ, ಧರ್ಮ, ರಾಜಕೀಯದ ಬಣ್ಣ ಬಳಿಯದೇ ಅಪರಾಧಗೈದವರ ವಿರುದ್ಧ ಸಮಾಜ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.

ADVERTISEMENT

ಬಾಲಕಿಯ ಮೇಲೆ ಅತ್ಯಾಚಾರಗೈದ ಕಾಮುಕರನ್ನು ಶಿಕ್ಷಿಸುವ ಮೂಲಕ ಅವರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಒತ್ತಾಯಿಸಿದರು. ಜೆ.ಎಂ. ಸರ್ಕಾವಸ್, ಎನ್.ಶಮ್ನಾಫಿರಾ, ಎಸ್.ಮೊಹಮ್ಮದ್ ಇರ್ಫಾನ್ ಬಾಷಾ, ಜಬಿವುಲ್ಲಾ ರಜ್ಪ, ನಾಲಾಬಂದ್ ಬಾಷಾ, ಟಿ.ವಿ.ರೇಣುಕಮ್ಮ, ಇಸ್ಮಾಯಿಲ್ ಸಾಬ, ಧನರಾಜ್, ಬಿ.ಕೆ.ಇಮ್ರಾನ್, ಆರ್.ದಾವೂದ್, ತನ್ವೀರ್, ಕೆ.ಮಹಬೂಬ್, ಎನ್.ಅಶ್ರಫ್, ಹಾಜಿ ಮಹಮ್ಮದ್ ಬಾಷಾ, ಡಿ ನಯಾಜ್, ಎಸ್ ಮಕ್ಬೂಲ್ ಬಾಷಾ,ಎಂ.ಜಿಲಾನ್, ಕೆ. ಮಾಬು ಇದ್ದರು.

ಹೊನ್ನಾಳಿ:

ಉತ್ತರ ಪ್ರದೇಶ, ದೆಹಲಿ ಹಾಗೂ ಜಮ್ಮು ಕಾಶ್ಮೀರದಲ್ಲಿನ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗೆ ಗುರಿ ಮಾಡುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ
ವಿರುದ್ಧ ತಾಲ್ಲೂಕು ಮುಸ್ಲಿಂ ಯುವಕರ ಒಕ್ಕೂಟ ಶುಕ್ರವಾರ ಪ್ರತಿಭಟನೆ ನಡೆಸಿತು.

ಪ್ರತಿಭಟನೆಗೆ ಚುನಾವಣಾ ಆಯೋಗದ ಅನುಮತಿ ಪಡೆಯದೇ ಇರುವ ಕಾರಣ ಯುವಕರು ಮೌನ ಮೆರವಣಿಗೆ ನಡೆಸಿ ಸಾರ್ವಜನಿಕರ ಗಮನ ಸೆಳೆದರು. ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಮ್ಮು ಕಾಶ್ಮೀರದ ಯುವತಿ ಮೇಲೆ ಅತ್ಯಾಚಾರ ನಡೆದಿದ್ದನ್ನು ತೀವ್ರವಾಗಿ ಖಂಡಿಸಿದರು.

ನಂತರ ಶನಿವಾರದಂದು ಚುನಾವಣಾ ಆಯೋಗದ ಅನುಮತಿ ಪಡೆದು ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸಿ ತಾಲ್ಲೂಕು ಆಡಳಿತಕ್ಕೆ
ಮನವಿ ಸಲ್ಲಿಸುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.