ADVERTISEMENT

ಅನುದಾನಿತ ಶಾಲೆ ಅಡುಗೆ ಕೋಣೆಗೆ ರೂ 11 ಲಕ್ಷ!

ಸರ್ಕಾರಿ ಶಾಲೆಗೆ ರೂ 40 ಸಾವಿರದಿಂದ ರೂ 60 ಸಾವಿರ; ಕೆಡಿಪಿ ಸಭೆಯಲ್ಲಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 9:14 IST
Last Updated 17 ಜುಲೈ 2013, 9:14 IST

ದಾವಣಗೆರೆ: ಸರ್ಕಾರಿ ಶಾಲೆಗಳಲ್ಲಿ ಅಡುಗೆ ಕೋಣೆಗಳ ನಿರ್ಮಾಣಕ್ಕೆ ತಲಾ ಕೇವಲ ರೂ 40 ಸಾವಿರದಿಂದ ರೂ  60 ಸಾವಿರದವರೆಗೆ ಅನುದಾನ ನೀಡಿದ್ದ ಶಿಕ್ಷಣ ಇಲಾಖೆ, ಅನುದಾನಿತ ಶಾಲೆಗಳಿಗೆ ರೂ  11 ಲಕ್ಷದವರೆಗೆ ಖರ್ಚು ಮಾಡಲು ಅವಕಾಶ ಕಲ್ಪಿಸಿ ಧಾರಾಳತನ ಪ್ರದರ್ಶಿಸಿದೆ!

-ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಈ ಅಂಶ ಬೆಳಕಿಗೆ ಬಂದಿತು. ವಿಷಯ ಪ್ರಸ್ತಾಪಿಸಿದ ಅಧ್ಯಕ್ಷ ದೊಗ್ಗಳ್ಳಿ ರೇವಣಸ್ದ್ದಿದಪ್ಪ, 2011ರಿಂದ ಇಲ್ಲಿವರೆಗೆ ತಾಲ್ಲೂಕಿನ 119 ಅನುದಾನಿತ ಶಾಲೆಗಳಲ್ಲಿ 188 ಅಡುಗೆ ಕೋಣೆ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಆದರೆ, ಅಂದಿನ ತಾ.ಪಂ. ಅಧ್ಯಕ್ಷರು, ಸದಸ್ಯರಿಗೆ ಮಾಹಿತಿ ನೀಡಿಲ್ಲ ಏಕೆ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಲು ಶಿಕ್ಷಣ ಇಲಾಖೆ ಅಧಿಕಾರಿಗಳು ತಬ್ಬಿಬ್ಬಾದರು. ಮಧ್ಯಪ್ರವೇಶಿಸಿದ ಇಒ ಎಲ್.ಎಸ್.ಪ್ರಭುದೇವ, ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಾರದೇ ಇಲಾಖೆ ಮಟ್ಟದಲ್ಲಿಯೇ ಈ ಪ್ರಕ್ರಿಯೆ ನಡೆದಿದೆ. ಸೌಜನ್ಯಕ್ಕಾದರೂ ತಿಳಿಸಬೇಕಿತ್ತು ಎಂದರು.

ಶಿಕ್ಷಣ ಇಲಾಖೆಯು ಅನುದಾನಿತ ಶಾಲೆ ಮುಂದೆ ತರಬೇಕೋ, ಸರ್ಕಾರಿ ಶಾಲೆ ಬೆಳೆಸಬೇಕೋ? ಸರ್ಕಾರಿ ಶಾಲೆಗೆ ರೂ 40 ಸಾವಿರದಿಂದ ರೂ  60 ಸಾವಿರ ವೆಚ್ಚದಲ್ಲಿ ಪುಟ್ಟದಾಗಿ ಅಡುಗೆ ಕೋಣೆ ನಿರ್ಮಿಸಲಾಗಿದೆ; ಅವು ಕಿಷ್ಕೆಂದೆಯಂತಾಗಿವೆ. ಆದರೆ, ಅನುದಾನಿತ ಶಾಲೆಗಳ ಕೊಠಡಿಗೆ ರೂ 11 ಲಕ್ಷ ಒದಗಿಸಲಾಗಿದೆ. ಇದು ಎಷ್ಟು ಸರಿ? ಸರ್ಕಾರಿ ಶಾಲೆಗಳಿಗೆ ಹೆಚ್ಚು ಮೂಲಸೌಲಭ್ಯ ಕಲ್ಪಿಸಬೇಕೋ ಬೇಡವೋ? ಅನುದಾನಿತ ಶಾಲೆಗಳಿಗೆ ನೀಡಿರುವ  ರೂ  2.74 ಕೋಟಿ ಕಡಿಮೆಯೇ? ಎಂದು ಅಧ್ಯಕ್ಷರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

`ಚುನಾಯಿತ ಜನಪ್ರತಿನಿಧಿಗಳ ಗಮನಕ್ಕೆ ತಾರಲಿಲ್ಲ ಎಂದ ಮೇಲೆ, ನಾವ್ಯಾಕೆ ಇರಬೇಕು? ತಾ.ಪಂ. ಅಗತ್ಯವಿಲ್ಲ ಎಂದು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸೋಣ. ಹೇಳಿದ್ದಕ್ಕೆ ಸಹಿ ಹಾಕಲು ನಾವಿದ್ದೇವೆ ಎಂದು ಭಾವಿಸಿದ್ದೀರಾ. ವ್ಯಕ್ತಿಗೆ ಬೇಡ, ಹುದ್ದೆ ಗೌರವಿಸಿ' ಎಂದು ಅಧಿಕಾರಿಗಳ ಬೆವರಿಳಿಸಿದರು.

`ಇದು ಪುನರಾವರ್ತನೆ ಆಗಬಾರದು. ಚುನಾಯಿತ ಜನಪ್ರತಿನಿಧಿಗಳ ಗಮನಕ್ಕೆ ತಾರಬೇಕು' ಎಂದು ಇಒ ಪ್ರಭುದೇವ ಅಧಿಕಾರಿಗಳಿಗೆ ಸೂಚಿಸಿದರು. ಶಿಕ್ಷಣ ಇಲಾಖೆ ದಾವಣಗೆರೆ ಉತ್ತರ ವಲಯದ ಪ್ರಭಾರ ಅಧಿಕಾರಿ ಮಾತನಾಡಿ, ವಲಯಕ್ಕೆ 45,223 ಪಠ್ಯಪುಸ್ತಕ, 10,480 ಸಮವಸ್ತ್ರ ಸರಬರಾಜಾಗಿದೆ. ಶಾಲೆಗಳಿಗೆ ನೀಡಲಾಗಿದೆ. 1,574 ಬೈಸಿಕಲ್‌ಗಳು ಬರಬೇಕಿದೆ ಎಂದು ತಿಳಿಸಿದರು.

ಕೃಷಿ ವಸ್ತುಪ್ರದರ್ಶನದಿಂದ ಮಾಹಿತಿ ಪ್ರಚಾರ ಮಾಡಲು ಸಾಧ್ಯವಾಗುತ್ತಿದೆ. ಹೀಗಾಗಿ, ಹೋಬಳಿ ನಂತರ ಗ್ರಾಮ ಮಟ್ಟದಲ್ಲಿಯೂ ಪ್ರದರ್ಶನ ಆಯೋಜಿಸಬೇಕು ಎಂದು ಅಧ್ಯಕ್ಷರು ಮತ್ತು ಇಒ ಕೃಷಿ ಇಲಾಖೆ ಅಧಿಕಾರಿಗೆ ಸೂಚಿಸಿದರು. ಉಪಾಧ್ಯಕ್ಷೆ ನಿರ್ಮಲಮ್ಮ ಅಜ್ಜಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಂದ್ರಪ್ಪ ಹಾಜರಿದ್ದರು.

ಇಲಾಖೆ ತರಬೇತಿ ಪಡೆದ ಇಬ್ಬರು ಉತ್ತೀರ್ಣ
ತಾಲ್ಲೂಕಿನಲ್ಲಿ ರೂ  1.61 ಕೋಟಿ ವಿದ್ಯಾರ್ಥಿ ವೇತನ ಬರುವುದು ಬಾಕಿ ಇದೆ. ಇದಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ. ಅಂತರ್ಜಾತಿ ವಿವಾಹ ಪ್ರೋತ್ಸಾಹಧನಕ್ಕೆ ಸಂಬಂಧಿಸಿದ 34 ಅರ್ಜಿ ಬಾಕಿ ಇವೆ.

ಇಲಾಖೆಯಿಂದ ತರಬೇತಿ ಪಡೆದ ದಾವಣಗೆರೆಯ ಇಬ್ಬರು ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಸಾಲಿನಲ್ಲಿ ಐಎಎಸ್, ಐಪಿಎಸ್ ಪರೀಕ್ಷೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
- ಕುಬ್ಯಾನಾಯ್ಕ, ಸಹಾಯಕ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ .

ADVERTISEMENT

ಕಳಪೆ ಬಿತ್ತನೆಬೀಜ, ರಸಗೊಬ್ಬರ: ಕ್ರಿಮಿನಲ್ ಕೇಸ್
ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಶೇ 71ರಷ್ಟು ಬಿತ್ತನೆಯಾಗಿದೆ. ರಸಗೊಬ್ಬರ ಕೊರತೆ ಇಲ್ಲ. 37,651 ಟನ್ `ಕಾಪು' ದಾಸ್ತಾನಿದೆ. ಆಲೂರು ಗ್ರಾಮದಲ್ಲಿ ಡಿಎಪಿ ಗೊಬ್ಬರವನ್ನು ರೂ  2,250ರ ಬದಲಿಗೆ ರೂ  1,350ಕ್ಕೆ ಮಾರಾಟ ಮಾಡುತ್ತಿದ್ದುದ್ದನ್ನು ಗಮನಿಸಲಾಯಿತು. ಕಳಪೆ ಎಂದು ಕಂಡುಬಂದಿದ್ದರಿಂದ, ಆ ಗೊಬ್ಬರ ಮುಟ್ಟುಗೋಲು ಹಾಕಿಕೊಂಡು ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

ಕಳಪೆ ಬಿತ್ತನೆಬೀಜ, ಪ್ಯಾಕಿಂಗ್ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವಡೆ ಮೆಕ್ಕೆಜೋಳಕ್ಕೆ ಗೊಣ್ಣೆಹುಳು ಬಾಧೆ ಕಂಡುಬಂದಿದೆ. ತಡವಾಗಿ ಬಿತ್ತಿದ ಮೆಕ್ಕೆಜೋಳದಲ್ಲಿ ಕಡಿಮೆ ಇಳುವರಿ ದೊರೆಯಲಿದೆ.
- ಪ್ರಕಾಶ್, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ .

ರೂ 8 ಕೋಟಿ ಬಿಡುಗಡೆ
ತಾಲ್ಲೂಕಿಗೆ ಕೆಲ ಶೀರ್ಷಿಕೆಯ 500 ಪುಸ್ತಕಗಳ ಕೊರತೆ ಇದೆ. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಅಡಿ ದಕ್ಷಿಣ ವಲಯದ ಸರ್ಕಾರಿ ಪ್ರೌಢಶಾಲೆಗಳ ತರಗತಿ ಕೊಠಡಿ, ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಕೊಠಡಿ, ಕಲಾ ಕೊಠಡಿಗಳ ನಿರ್ಮಾಣಕ್ಕೆ ರೂ  8 ಕೋಟಿ ಅನುದಾನ ಬಿಡುಗಡೆಯಾಗಿದೆ. ಹೈದರಾಬಾದ್ ಮೂಲದ ಕಂಪೆನಿಗೆ ಗುತ್ತಿಗೆ ನೀಡಲಾಗಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು.
- ಬಿ.ಸಿ.ಸಿದ್ದಪ್ಪ, ಬಿಇಒ, ದಕ್ಷಿಣ ವಲಯ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.