ADVERTISEMENT

ಅಮಿತ್ ಶಾ ಭರ್ಜರಿ ರೋಡ್ ಷೋ

ಹರಪನಹಳ್ಳಿ: ಕೊಟ್ರೇಶ್ ಹೆಸರು ‍ಪ್ರಸ್ತಾಪಿಸದೆ ತರಾಟೆಗೆ ತೆಗೆದುಕೊಂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 8 ಮೇ 2018, 12:29 IST
Last Updated 8 ಮೇ 2018, 12:29 IST
ಪುರಸಭೆ ಬಳಿ ಪುರಸಭಾಧ್ಯಕ್ಷ ಎಚ್.ಕೆ.ಹಾಲೇಶ್ ನೇತೃತ್ವದಲ್ಲಿ ಕ್ರೇನ್ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಹೂವಿನ ಮಳೆ ಸುರಿಸಿದರು.
ಪುರಸಭೆ ಬಳಿ ಪುರಸಭಾಧ್ಯಕ್ಷ ಎಚ್.ಕೆ.ಹಾಲೇಶ್ ನೇತೃತ್ವದಲ್ಲಿ ಕ್ರೇನ್ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಹೂವಿನ ಮಳೆ ಸುರಿಸಿದರು.   

ಹರಪನಹಳ್ಳಿ: ‘ಬಿಜೆಪಿ ತೊರೆದು ಬೇರೆ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಸ್ಥಳೀಯ ಮುಖಂಡನಿಗೆ ಚುನಾವಣೆಯಲ್ಲಿ ಠೇವಣಿಯೂ ಸಿಗದಂತೆ ಮಾಡಿ’ ಎಂದು ಜೆಡಿಎಸ್ ಸೇರ್ಪಡೆಗೊಂಡಿರುವ ಅರಸೀಕೆರೆ ಎನ್.ಕೊಟ್ರೇಶ್ ಅವರ ಹೆಸರು ಪ್ರಸ್ತಾಪಿಸದೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಟೀಕೆ ಮಾಡಿದರು.

ಪಟ್ಟಣದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಜಿ.ಕರುಣಾಕರರೆಡ್ಡಿ ಪರವಾಗಿ ಭರ್ಜರಿ ರೋಡ್ ಷೋ ನಡೆಸಿದ ಅವರು ಮಾತನಾಡಿ, ತಾಲ್ಲೂಕಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಅಭ್ಯರ್ಥಿ ಜಿ.ಕರುಣಾಕರ ರೆಡ್ಡಿ ಅವರನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

ಪಟ್ಟಣದ ಎಡಿಬಿ ಕಾಲೇಜಿನ ಹೆಲಿಪ್ಯಾಡ್‌ಗೆ ಮಧ್ಯಾಹ್ನ 2ಕ್ಕೆ ಆಗಮಿಸಿದ ಅಮಿತ್ ಶಾ ಬೈಪಾಸ್‌ನ ಕೊಟ್ಟೂರು ರಸ್ತೆಯ ಮೂಲಕ ಸರ್ಕಾರಿ ಆಸ್ಪತ್ರೆ ಬಳಿಯಿರುವ ಕಾರ್ಯಕರ್ತರ ಮನೆಗೆ ತೆರಳಿ ಊಟ ಸೇವಿಸಿದರು. ನಂತರ 3 ಗಂಟೆಗೆ ಹಿರೆಕೆರೆ ವೃತ್ತಕ್ಕೆ ತೆರಳಿ, ವಿವಿಧ ಹೂಗಳಿಂದ ಅಲಂಕಾರಗೊಂಡಿದ್ದ ತೆರೆದ ವಾಹನದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಮತ್ತು ಅಭ್ಯರ್ಥಿ ಜಿ.ಕರುಣಾಕರರೆಡ್ಡಿ ಜೊತೆಗೂಡಿ ರೋಡ್ ಷೋ ನಡೆಸಿದರು.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದ್ದು, ಮುಂಬರುವ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪೂರಕವಾಗಿರಲಿದೆ. ಬಿಜೆಪಿಯಿಂದ ಮಾತ್ರ ರಾಜ್ಯದಲ್ಲಿ ಸ್ಥಿರ ಮತ್ತು ಸುಭದ್ರ ಸರ್ಕಾರ ನೀಡಲು ಸಾಧ್ಯ. ಯಡಿಯೂರಪ್ಪನವರ ನೇತೃತ್ವದಲ್ಲಿ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತರ ₹ 1 ಲಕ್ಷದವರೆಗಿನ ಸಾಲಮನ್ನಾ, ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸುವುದಾಗಿ ಘೋಷಿಸಲಾಗಿದೆ ಎಂದು ಹೇಳಿದರು.

ಪುರಸಭೆ ಬಳಿ ಪುರಸಭಾಧ್ಯಕ್ಷ ಎಚ್.ಕೆ.ಹಾಲೇಶ್ ನೇತೃತ್ವದಲ್ಲಿ ಕ್ರೇನ್ ಮೂಲಕ ರಾಷ್ಟ್ರೀಯ ಅಧ್ಯಕ್ಷರಿಗೆ ಹೂವಿನ ಮಳೆ ಸುರಿಸಲಾಯಿತು. ಮೆರವಣಿಗೆಯಲ್ಲಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪ್ಲೇಕಾರ್ಡ್ ಪ್ರದರ್ಶಿಸಿದರು. ಬಿಜೆಪಿ ಬಾವುಟ ಎಲ್ಲೆಡೆ ಹಾರಾಡಿತು. ಡೊಳ್ಳು, ಹಲಗೆ ವಾದನ ಮತ್ತು ಹಗಲುವೇಷಗಾರರು ಮೆರವಣಿಗೆಗೆ ಮೆರುಗು ತಂದರು.

ಸಿದ್ದೇಶ್ವರ ವಿಶ್ವಾಸ

ಸಂಸದ ಸಿದ್ದೇಶ್ವರ ಮಾತನಾಡಿ, ‘ಇದೇ 15ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಬಿ.ಎಸ್.ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ. ಮಾಜಿ ಸಚಿವರಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಬಿಜೆಪಿ ಅಭ್ಯರ್ಥಿ ಕರುಣಾಕರರೆಡ್ಡಿ ಅವರನ್ನು ಅಧಿಕ ಬಹುಮತದೊಂದಿಗೆ ಗೆಲ್ಲಿಸಿ’ ಎಂದು ಮನವಿ ಮಾಡಿದರು.

**
ಹರಪನಹಳ್ಳಿಗೆ ಸಂವಿಧಾನದ 371 ‘ಜೆ’ ಸೌಲಭ್ಯ ಸಿಕ್ಕಿದೆ ಎಂದು ಕಾಂಗ್ರೆಸ್ಸಿಗರು ಕ್ಷೇತ್ರದ ಜನರಿಗೆ ಸುಳ್ಳು ಹೇಳಿ ವಂಚಿಸುತ್ತಿದ್ದಾರೆ. ಬಿಜೆಪಿಗೆ ಮತ ನೀಡುವ ಮೂಲಕ ಇಂತಹ ಸುಳ್ಳುಗಾರರಿಗೆ ತಕ್ಕ ಉತ್ತರ ನೀಡಿ
– ಕರುಣಾಕರರೆಡ್ಡಿ, ಬಿಜೆಪಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.