ಹರಪನಹಳ್ಳಿ: ರಾಷ್ಟ್ರೀಯ ಪಕ್ಷಗಳು ಅನುಸರಿಸುತ್ತಿರುವ ಮಲತಾಯಿ ಧೋರಣೆಯಿಂದಾಗಿ ರಾಜ್ಯದ ಪ್ರಜ್ಞಾವಂತ ಮತದಾರರು, ಪ್ರಾದೇಶಿಕ ಪಕ್ಷಗಳ ಕಡೆ ಒಲವು ತೋರುತ್ತಿದ್ದಾರೆ. ಆದರೆ, ಅಧಿಕಾರದ ವ್ಯಾಮೋಹದಿಂದ ಅವಕಾಶವಾದಿ ರಾಜಕಾರಣಕ್ಕೆ ಮುಂದಾಗಿರುವ ಬಿಜೆಪಿಯ ಇಬ್ಬರು ನಿರ್ಗಮಿತ ನಾಯಕರು ಕಟ್ಟಲು ಹೊರಟಿರುವ ಪ್ರಾದೇಶಿಕ ಪಕ್ಷಗಳನ್ನು ರಾಜ್ಯದ ಜನ ನಂಬುವುದಿಲ್ಲ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಟಿ. ದಾಸಕರಿಯಪ್ಪ ಅಭಿಪ್ರಾಯಪಟ್ಟರು.
ಸ್ಥಳೀಯ ನಟರಾಜ ಕಲಾಭವನದಲ್ಲಿ ಜೆಡಿಎಸ್ ತಾಲ್ಲೂಕು ಘಟಕ ಶನಿವಾರ ಹಮ್ಮಿಕೊಂಡಿದ್ದ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಾದೇಶಿಕತೆಯ ಸ್ಪಷ್ಟ ಸಿದ್ಧಾಂತದ ಹಿನ್ನೆಲೆಯ ಜತೆಗೆ, ತನ್ನದೇ ಆದ ತತ್ವಗಳ ಸ್ಪಷ್ಟ ಸ್ವರೂಪ ಹೊಂದಿರುವ ಜೆಡಿಎಸ್ ಅಧಿಕಾರ ನಡೆಸಿದ ಸಂದರ್ಭದಲ್ಲಿ ಜಾರಿಗೊಳಿಸಿದ ಜನಪರ ಯೋಜನೆಗಳ ಮೂಲಕ ಜನತೆಯ ಮನದಾಳದಲ್ಲಿ ಬಲವಾದ ನಂಬುಗೆ ಉಳಿಸಿಕೊಂಡಿದೆ.
ಕೇವಲ ಜಾತಿ ಬಲಾಬಲವನ್ನೇ ನಂಬಿಕೊಂಡು, ಯಾವುದೇ ಗೊತ್ತುಗುರಿ ಇಲ್ಲದೇ, ಹುಟ್ಟಿಕೊಳ್ಳುತ್ತಿರುವ ಪಾಪದ ಪ್ರಾದೇಶಿಕ ಪಕ್ಷಗಳಿಗೆ ರಾಜ್ಯದ ಮತದಾರ ಸೊಪ್ಪು ಹಾಕುವುದಿಲ್ಲ. ರಾಜ್ಯದಾದ್ಯಂತ ಜೆಡಿಎಸ್ ಹಾಗೂ ಕುಮಾರಸ್ವಾಮಿ ಪರವಾದ ಅಲೆ ಎದ್ದಿದೆ. ಹೀಗಾಗಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಆಡಳಿತದ ಚುಕ್ಕಾಣಿ ಜೆಡಿಎಸ್ ಪಾಲಾಗಲಿದೆ ಎಂದ ಅವರು, ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು ಪಕ್ಷದ ಬಲವರ್ಧನೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ರಾಜ್ಯದ ಸಂಪತ್ತನ್ನು ಲೂಟಿ ಹೊಡೆಯುವುದಕ್ಕಾಗಿಯೇ ಅಧಿಕಾರ ದುರ್ಬಳಕೆ ಮಾಡಿಕೊಂಡ ಬಿಜೆಪಿ ಸರ್ಕಾರದ 12ಮಂದಿ ಸಚಿವ-ಶಾಸಕರು ಕೋರ್ಟ್ ಜಾಮೀನಿನ ರಕ್ಷಣೆಯಲ್ಲಿ ಹೊರಗೆ ಮುಖಹೊತ್ತು ತಿರುಗುತ್ತಿದ್ದಾರೆ. ಯಾವಾಗ ಜೈಲು ಪಾಲಾಗುತ್ತಾರೋ ಗೊತ್ತಿಲ್ಲ. ಜನವಿರೋಧಿ ನೀತಿ ಹಾಗೂ ಭ್ರಷ್ಟಾಚಾರದ ಕಳಂಕದ ಮಸಿ ಮೆತ್ತಿಕೊಂಡು, ಸರ್ಕಾರ ನಡೆಸುವುದಕ್ಕಿಂತ ವಿಧಾನಸಭೆ ವಿಸರ್ಜಿಸಿ, ಜನಾದೇಶ ಪಡೆಯಲು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮುಂದಾಗಲಿ ಎಂದು ಒತ್ತಾಯಿಸಿದರು.
ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಸಾಸ್ವಿಹಳ್ಳಿ ಚನ್ನಬಸವಗೌಡ ಅಧ್ಯಕ್ಷತೆವಹಿಸಿದ್ದರು. ರೈತ ವಿಭಾಗದ ರಾಜ್ಯಘಟಕದ ಅಧ್ಯಕ್ಷ ಕೆ. ನಾಗೇಶ್ವರರಾವ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ಅಮಾನುಲ್ಲಾ ಖಾನ್, ಮಹಿಳಾ ಘಟಕದ ಅಧ್ಯಕ್ಷ ಕೆ. ಮಂಜುಳಾ, ಮುಖಂಡರಾದ ಮುನ್ನಾ ಪೈಲ್ವಾನ್, ಬೇಲ್ದಾರ್ ಬಾಷಾ, ರಾಮಚಂದ್ರಪ್ಪ, ಬಾತಿ ಶಂಕರ್, ಎಚ್.ಸಿ. ಗುಡ್ಡಪ್ಪ, ಶಿಕಾರಿ ಬಾಲಪ್ಪ, ರಾಮನಾಯ್ಕ, ಕುಮಾರನಾಯ್ಕ, ಆಸಗೋಡ್ ಹಾಲೇಶ, ಮಲ್ಕಪ್ಪ, ಇಮ್ರಾನ್ ಬಾಷಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.