ADVERTISEMENT

ಅವಳ ದೃಷ್ಟಿಯಲ್ಲಿ ರೋಝಾ, ನಮಾಜ್...

ಮಂಜುಶ್ರೀ ಎಂ.ಕಡಕೋಳ
Published 10 ಆಗಸ್ಟ್ 2012, 10:20 IST
Last Updated 10 ಆಗಸ್ಟ್ 2012, 10:20 IST

ಈ ತಿಂಗಳು ಎಲ್ಲ ತಿಂಗಳಂತಲ್ಲ. ಹಾಗಾಗಿ, ವರ್ಷದ ಹನ್ನೆರೆಡು ತಿಂಗಳಲ್ಲಿ ಇದು ವಿಶೇಷ ಮಾಸ. ವರ್ಷದುದ್ದಕ್ಕೂ ಸುಖವುಂಡ ಮೈ-ಮನಕ್ಕೆ ಬಡವರ ನೋವು-ಕಷ್ಟದ ಅರಿವುಂಟಾಗಲೆಂದೇ ರೂಪಿತವಾಗಿದೆ ಈ ರಂಜಾನ್ ಮಾಸ. ಇತರ ಮಾಸಗಳಲ್ಲಿ ಮುಸ್ಲಿಂ ಮಹಿಳೆಯರ ದಿನಚರಿ ಸಾಮಾನ್ಯವೆಂಬಂತೆ ಕಂಡುಬಂದರೂ, ಈ ಮಾಸದ ದಿನಚರಿ ಅವರಿಗೆ ವಿಶೇಷ ಅನುಭವ ನೀಡುವ ಮಾಸವೆಂದೇ ಪರಿಗಣಿತ.

ರಂಜಾನ್ ಮಾಸ ಆರಂಭವಾಗುವ ಮುನ್ನವೇ ಹೆಣ್ಣುಮಕ್ಕಳು ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯ ಆರಂಭಿಸುತ್ತಾರೆ. ಹಬ್ಬದ ಸಡಗರ ಇಮ್ಮಡಿಯಾಗುವ ಕ್ಷಣಗಳಲ್ಲಿ ಮನೆ ಸ್ವಚ್ಛವಾಗಿದ್ದರೆ ಚೆನ್ನ ಎಂಬ ಭಾವ ಮಹಿಳೆಯರದು. ಹಾಗಾಗಿ, ರಂಜಾನ್ ಶುರುವಾಗುವ ಮುನ್ನವೇ ಹೆಂಗಳೆಯರಿಂದ ಸ್ವಚ್ಛತಾ ಅಭಿಯಾನ ಅರಂಭವಾಗುತ್ತದೆ.

ಬೆಳ್ಳಂಬೆಳಗ್ಗೆ ಸೂರ್ಯ ಬಾನಲ್ಲಿ ಮೂಡುವ ಮುನ್ನ, ಕಾಡಿಗೆಯಷ್ಟು ಕಡುಕಪ್ಪಿಗಿನ ಮೋಡದಲ್ಲಿ ಚುಕ್ಕಿ-ಚಂದ್ರಮ ಮಿನುಗುತ್ತಿರುವಾಗಲೇ ಮನೆಯ ಹೆಣ್ಣುಮಕ್ಕಳು ಎಚ್ಚರವಾಗುತ್ತಾರೆ. ಬೆಳಗಿನ ಜಾವದ ಮೂರು ಗಂಟೆಗೆ ಏಳುವ ಅವರು, ಸ್ನಾನ ಮಾಡಿ, ಸ್ವಚ್ಛ ಬಟ್ಟೆ ಧರಿಸುತ್ತಾರೆ. ಬೆಳಿಗ್ಗೆ 5ಕ್ಕೆ ಅಂದರೆ ಅಲ್ಲಾಹ್ ಕೂಗುವ ಮುನ್ನವೇ ಬಿಸಿಬಿಸಿ ಅಡುಗೆ ಮಾಡಿ, ಮನೆಮಂದಿಗೆ ಬಡಿಸುತ್ತಾರೆ. 5ಗಂಟೆಗೆ ಇನ್ನೂ ಮೂರ‌್ನಾಲ್ಕು ನಿಮಿಷ ಬಾಕಿ ಇರುವಾಗಲೇ ಆಹಾರ ಸೇವನೆ ಮುಗಿದಿರಬೇಕು. ಸಂಜೆ ಪ್ರಾರ್ಥನೆಯ ನಂತರ 7ಸುಮಾರಿಗೆ `ಇಫ್ತಾರ್~ ಇರುತ್ತದೆ. ಇದಕ್ಕಾಗಿ ಸಂಜೆ 4.30ರಿಂದಲೇ ಅಡುಗೆ ತಯಾರಿ ನಡೆಸಲಾಗುತ್ತದೆ.

 `ಕೆಲವರು ಕುಟುಂಬದ ಸದಸ್ಯರೊಂದಿಗೇ ಆಹಾರ ಸೇವಿಸಿದರೆ, ಇನ್ನು ಕೆಲವರು ಮನೆಯ ಗಂಡಸರು ಆಹಾರ ಸೇವಿಸಿದ ನಂತರ ಸೇವಿಸುವ ಪದ್ಧತಿ ರೂಢಿಸಿಕೊಂಡಿರುತ್ತಾರೆ. ಹೀಗೆ ಬೆಳಿಗ್ಗೆ `ಸಹರಿ~ (ಸಹೇರ್) ಕಾರ್ಯಕ್ರಮ ಮುಗಿದ ನಂತರ, ಗಂಡಸರು ನಮಾಜ್‌ಗೆ ತೆರಳುತ್ತಾರೆ. ಹೆಣ್ಣುಮಕ್ಕಳು ಮನೆಯಲ್ಲೇ ನಮಾಜ್ ಹಾಗೂ ಕುರ್‌ಆನ್ ಪಠಣ ಮಾಡುತ್ತಾರೆ. ನಂತರ ಮನೆಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಉದ್ಯೋಗಸ್ಥ ಮಹಿಳೆಯರು ಎಂದಿನಂತೆಯೇ ಉದ್ಯೋಗಕ್ಕೆ ತೆರಳುತ್ತಾರೆ. ಆದರೆ, ಅಪ್ಪಿ-ತಪ್ಪಿಯೂ ಉಗಳೂ ನುಂಗುವುದಿಲ್ಲ. ಹನಿ ನೀರೂ ಕುಡಿಯುವುದಿಲ್ಲ. ಎಂದು ಮಾಹಿತಿ ನೀಡುತ್ತಾರೆ ಗೃಹಿಣಿ ನೂರುನ್ನಿಸಾ.

ಗರ್ಭಿಣಿಯರು ಕೂಡಾ `ರೋಝಾ~ ಮಾಡಬಹುದು. ಅದು ಅವರ ಇಚ್ಛೆಗೆ ಬಿಟ್ಟದ್ದು. ಆದರೆ, ಬಾಣಂತಿಯರು `ರೋಝಾ~ ಆಚರಿಸುವಂತಿಲ್ಲ. ಮಗು ಹುಟ್ಟಿದ 40ದಿನದ ನಂತರ ತಲೆಮೇಲೆ ನೀರು ಹಾಕಿಕೊಂಡು ಶುದ್ಧರಾಗಿ `ರೋಝಾ~ ಮಾಡಬಹುದು. ಅಲ್ಲೆತನಕ ಕುರ್‌ಆನ್ ಅನ್ನೂ ಕೂಡಾ ಮುಟ್ಟುವಂತಿಲ್ಲ.  ರೋಝಾ ಮಾಡುವಾಗಲೇ ಹೆಣ್ಣುಮಕ್ಕಳು ಋತುಸ್ರಾವದ ಸಮಸ್ಯೆಗೆ ಒಳಗಾದರೆ ಅವರು ಉಪವಾಸ ಮುಂದುವರಿಸುವಂತಿಲ್ಲ. ಋತುಸ್ರಾವದ ಪ್ರಕ್ರಿಯೆ ಮುಗಿದ ನಂತರ ಸ್ನಾನ ಮಾಡಿ, ಉಪವಾಸ ಮುಂದುವರಿಸಬಹುದು. ಈ ಸಮಯದಲ್ಲಿ ಉಪವಾಸ ಮಾಡದ ದಿನಗಳನ್ನು ಲೆಕ್ಕಹಾಕಿ ಹಬ್ಬದ ನಂತರದ ದಿನಗಳಲ್ಲೂ ರೋಝಾ ಮುಂದುವರಿಸಬಹುದು.  ದೈವದ ಮೇಲಿನ ಧ್ಯಾನ ಮತ್ತು ನಂಬಿಕೆ ಇಟ್ಟಲ್ಲಿ ಎಂಥ ಕಠಿಣ ಸ್ಥಿತಿಯನ್ನೂ ಎದುರಿಸಬಹುದು. ಕಠಿಣ ಪೊಲೀಸ್ ತರಬೇತಿಯ ದಿನಗಳಲ್ಲೂ ನಾನು ರೋಝಾ ಮಾಡಿದ್ದೇನೆ ಎನ್ನುತ್ತಾರೆ ಡಿಸಿಐಬಿ ಇನ್‌ಸ್ಪೆಕ್ಟರ್ ಅರ್ಜುಮನ್‌ಬಾನು. 

`ಈ ವರ್ಷದ ವಾತಾವರಣ ಚೆನ್ನಾಗಿದೆ. ಹಾಗಾಗಿ, ಹೆಚ್ಚು ಸುಸ್ತಾಗುವುದಿಲ್ಲ. ರಂಜಾನ್ ಪ್ರಯುಕ್ತ ಶಾಪಿಂಗ್ ಜೋರಾಗಿ ಮಾಡ್ತೀವಿ. ಡಿಸೈನರ್ ಸೀರೆ, ಚೂಡಿದಾರ್, ಬಳೆ, ಸರ ಖರೀದಿ ಮಾಮೂಲು. ಕೆಲವರು ಚಿನ್ನ ಖರೀದಿಸುತ್ತಾರೆ. ಮುಖ್ಯವಾಗಿ `ಮೆಹಂದಿ~ ಹಚ್ಚಿಕೊಳ್ಳುವುದೇ ಒಂದು ರೀತಿಯ ಸಂಭ್ರಮ. ಕಣ್ಣಿಗೆ ಸುರ್‌ಮಾ ಹಚ್ಚಿ, ಬಣ್ಣ ಬೀರುವ ಮೆಹಂದಿ ಹೆಣ್ಣುಮಕ್ಕಳ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದರೆ, ಯಾವುದೇ ಕಾರಣಕ್ಕೂ ನೇಲ್‌ಪಾಲಿಷ್ ಹಚ್ಚುವಂತಿಲ್ಲ. ಸ್ವಚ್ಛ ಬಟ್ಟೆ ಧರಿಸಿ, ತಲೆ ಮೇಲೆ ಸೆರಗು ಇಲ್ಲವೇ ಓಡನಿ ಹೊದ್ದುಕೊಂಡೇ ನಮಾಜ್ ಮಾಡುತ್ತೇವೆ. ಅಕ್ಷರ ಬಲ್ಲವರು ಕುರ್‌ಆನ್ ಪಠಿಸುತ್ತಾರೆ. ಓದು ಬಾರದಿದ್ದವರು ಕುರ್‌ಆನ್ ಪಠಣ ಕೇಳಿಸಿಕೊಂಡು ಅಲ್ಲಾಹ್‌ನನ್ನು ಪ್ರಾರ್ಥಿಸುತ್ತಾರೆ. ಹೆಣ್ಣುಮಕ್ಕಳೆಲ್ಲಾ ಒಂದೆಡೆ ಸೇರಿ ಸಾಮೂಹಿಕ ಪ್ರಾರ್ಥನೆ ಮಾಡುತ್ತೇವೆ~ ಎನ್ನುತ್ತಾರೆ ವಿದ್ಯಾರ್ಥಿನಿ ಶಿಫಾ ಶಾಹಿ.


ರಂಜಾನ್ ದಿನ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ನಮಾಜ್ ಮಾಡಿ ಗುರು-ಹಿರಿಯರಿಗೆ ನಮಸ್ಕರಿಸುತ್ತೇವೆ. ಅಣ್ಣಂದಿರು ತಂಗಿಯರಿಗೆ ಹಣ ನೀಡಿ ಖುಷಿ ಪಡಿಸುತ್ತಾರೆ. ಈ ತಿಂಗಳಲ್ಲಿ ಹೆಣ್ಣುಮಕ್ಕಳಿಗೆ ತವರುಮನೆಯಿಂದ ವಿವಿಧ ಉಡುಗೊರೆ, ಬಟ್ಟೆ ನೀಡುವ ಪದ್ಧತಿಯೂ ಉಂಟು ಎನ್ನುತ್ತಾರೆ ಗೃಹಿಣಿ ಮುಮ್ತಾಜ್.
 

ವೈದ್ಯಕೀಯ ಮಹತ್ವ
ರೋಝಾ ಆಚರಣೆಯಿಂದ ಕೊಬ್ಬು, ಕಫ, ಕರುಳಿನ ರೋಗಗಳು ನಿವಾರಣೆಯಾಗುತ್ತವೆ ಎಂಬುದು ಜನಪದ ವೈದ್ಯರ ನಂಬಿಕೆ.

ಒಟ್ಟಾರೆ ಕುಟುಂಬದ ಶಕ್ತಿಕೇಂದ್ರವಾಗಿರುವ ಮಹಿಳೆಯರು ರಂಜಾನ್ ಮಾಸದಲ್ಲಿ ಕುಟುಂಬದ ಸದಸ್ಯರ ಆರೋಗ್ಯ ಗಮನದಲ್ಲಿಟ್ಟುಕೊಂಡು ಎಲ್ಲವನ್ನೂ ಸುಸೂತ್ರವಾಗಿ ನಿಭಾಯಿಸುತ್ತಾರೆ. ಕುಟುಂಬದ ಹಿತರಕ್ಷಣೆಯಲ್ಲೇ ಅಲ್ಲಾಹ್‌ನನ್ನು ಕಾಣುವ ಆಕೆಗೂ ರಂಜಾನ್ ಎಂದರೆ ತನ್ನನ್ನು ತಾನು ಹೊಸಬಳನ್ನಾಗಿ ರೂಪಿಸಿಕೊಳ್ಳುವ ಸಂತಸದ ಘಳಿಗೆ.
 

ADVERTISEMENT

ಆಹಾರ ಸೇವನೆಯ ನಿಯಮಗಳು
ಊಟಕ್ಕೆ ಕುಳಿತುಕೊಳ್ಳುವುದಕ್ಕಿಂತ ಮೊದಲು `ದಸ್ತಾರ್~ ಹಾಸಿ ಅದರ ಮೇಲೆ ಅನ್ನ ತುಂಬಿರುವ ಹರಿವಾಣ, ಪಾತ್ರೆಯಲ್ಲಿ ಸಾರು, ಪಲ್ಯ, ರೊಟ್ಟೆ, ತಟ್ಟೆಗಳು, ನೀರು ತುಂಬಿರುವ ಪಾತ್ರೆ, ಲೋಟ,  ಕೈತೊಳೆಯುವ ಲಗನ್ ಅಥವಾ ತಷ್ ಇಡಬೇಕು.

 ಪುರುಷರು ಟೋಪಿ, ಸ್ತ್ರೀಯರು ತಲೆ ಮೇಲೆ ಸೆರಗು ಅಥವಾ ಓಡನಿ ಹಾಕಿಕೊಂಡು ಕೈತೊಳೆದು ಊಟಕ್ಕೆ ಕುಳಿತುಕೊಳ್ಳಬೇಕು

 ತಟ್ಟೆಯಲ್ಲಿ ಒಂದು ಅನ್ನದ ಅಗಳೂ ಬಿಡದೇ, ಹೆಚ್ಚು ಮಾತನಾಡದೇ ಊಟ ಮಾಡಬೇಕು

 ಊಟ ಮಾಡುತ್ತಾ ಮತ್ತೆ ಬೇಕೆನಿಸಿದ್ದನ್ನು ಸ್ವತಃ ತಮ್ಮ ಬಲಗೈಯಿಂದಲೇ ಬಡಿಸಿಕೊಳ್ಳಬಹುದು.

ಏನೇನು ಅಡುಗೆ? 
ಬಿರಿಯಾನಿ, ಖುಷ್ಕಾ, ಖುರ್ಮಾ, ಖೈಮಾ ಕಬಾಬ್, ಕುಫ್ತೆ, ಸಮೋಸ, ದಾಲ್ ಚಾ, ಅಂಡೇ ಪಲಾವ್, ಬೋಟಿ, ಕಲೀಜಿ, ತಲೆ, ಕಾಲು ಮೊದಲಾದ ಭಾಗಗಳ ಸಾರು

 ಕ್ಷೀರ್‌ಕುರುಮಾ (ಸಿಹಿ ಶಾವಿಗೆ), ಫೇನಿಯಾ, ಜಾಮೂನ್, ಫಿರ‌್ನಿ, ನಾನ್‌ಖಥೈ, ಬ್ರೆಡ್‌ಪಾಯಸ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.