ADVERTISEMENT

ಅವಸಾನದ ಅಂಚಿಗೆ ತಲುಪಿದ ವಿದ್ಯಾಕೇಂದ್ರ

ಎನ್.ಕೆ.ಆಂಜನೇಯ
Published 7 ಅಕ್ಟೋಬರ್ 2017, 8:35 IST
Last Updated 7 ಅಕ್ಟೋಬರ್ 2017, 8:35 IST
ಹೊನ್ನಾಳಿಯ ಟಿ.ಬಿ. ವೃತ್ತದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈಚೆಗೆ ಸುರಿದ ಮಳೆ ನೀರು ಕಟ್ಟಡಕ್ಕೆ ತಾಗಿ ನಿಂತಿರುವುದು
ಹೊನ್ನಾಳಿಯ ಟಿ.ಬಿ. ವೃತ್ತದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈಚೆಗೆ ಸುರಿದ ಮಳೆ ನೀರು ಕಟ್ಟಡಕ್ಕೆ ತಾಗಿ ನಿಂತಿರುವುದು   

ಹೊನ್ನಾಳಿ: ಜಿಲ್ಲೆಯಲ್ಲಿ ಶತಮಾನ ಕಂಡಶಾಲೆಗಳ ಪೈಕಿ ಪಟ್ಟಣದ ಸಮೀಪವಿರುವ ಟಿ.ಬಿ. ವೃತ್ತದ ಬಳಿಯಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ಯಂತ ಹಳೆಯದು. ಆದರೆ, ಈ ಶಾಲೆ ಹೆಮ್ಮೆಪಡುವ ಬದಲು ಕೆಲವು ವರ್ಷಗಳಿಂದ ಈಚೆಗೆ ಅವಸಾನದ ಅಂಚಿಗೆ ಬಂದು ತಲುಪಿದೆ.

ಈ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಗೋಡೆಗಳ ಮೇಲ್ಪದರ ಹಂತಹಂತವಾಗಿ ಕಳಚಿ ಬೀಳುತ್ತಿದೆ. ಮರದ ಕಿಟಕಿಗಳು, ಬಾಗಿಲುಗಳು ಮುರಿದುಬಿದ್ದಿವೆ. ಚಾವಣಿಗೆ ಆಗಾಗ್ಗೆ ಚುರುಕಿ ಹಾಕಿಸುವ ಮೂಲಕ ತೇಪೆ ಕಾರ್ಯ ನಡೆಯುತ್ತಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.

ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ನಡೆಯುತ್ತಿರುವ ಈ ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದಾರೆ. ಎರಡೂ ಮಾಧ್ಯಮಗಳಲ್ಲಿ ಒಟ್ಟು 300 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಹಿಂದೆ ಕಲಿತವರು ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದು ದೇಶ, ವಿದೇಶಗಳಲ್ಲಿ ನೆಲೆಸಿದ್ದಾರೆ. ಶಾಲೆಯ ದುರಸ್ತಿ ಮಾಡಿಸಬೇಕೆಂದು ಮುಖ್ಯ ಶಿಕ್ಷಕ ಎಂ.ರುದ್ರಯ್ಯ ಅಧಿಕಾರಿಗಳಿಗೆ, ಜನಪ್ರನಿಧಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಈ ಶಾಲೆಗೆ ಆವರಣಗೋಡೆ ಇಲ್ಲ. ಇದರಿಂದ ಇಲ್ಲಿಗೆ ಹಂದಿಗಳ ಹಿಂಡು ಬರುತ್ತದೆ. ಬಿಸಿಯೂಟ ಉಂಡ ಮಕ್ಕಳು ಬಟ್ಟಲು ತೊಳೆದ ನೀರು ಹೊರ ಹೋಗುತ್ತಿಲ್ಲ. 

ADVERTISEMENT

ಸಾಲದು ಎಂಬಂತೆ ಒಂದು ವಾರದಿಂದ ಸುರಿಯುತ್ತಿರುವ ಮಳೆಯ ನೀರು ಶಾಲೆಯ ಅಂಗಳದಲ್ಲಿ ಸಂಗ್ರಹವಾಗಿದ್ದು, ಆವರಣ ಕೆರೆಯಂತಾಗಿದೆ.ಇಲ್ಲಿ ಸಂಗ್ರಹವಾದ ಮಳೆ ನೀರು ಹೊರಗೆ ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಈ ಸಮಸ್ಯೆ ಬಗೆಹರಿಸಿ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಈ ಭಾಗದ ಪಂಚಾಯ್ತಿ ಸದಸ್ಯರು, ತಾಲ್ಲೂಕು ಪಂಚಾಯ್ತಿ ಸದಸ್ಯರಿಗೆ ಮನವಿ ಮಾಡಿದ್ದೆವು. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮುಖ್ಯಶಿಕ್ಷಕ ರುದ್ರಯ್ಯ.

ಶಾಲೆಯ ಸಂಪೂರ್ಣ ದುರಸ್ತಿ ಆಗಬೇಕು ಎಂಬುದನ್ನು ಶಾಸಕ ಡಿ.ಜಿ.ಶಾಂತನಗೌಡ ಅವರಿಂದ ಮೊದಲ್ಗೊಂಡು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ತಾಲ್ಲೂಕು ಪಂಚಾಯ್ತಿ ಸದಸ್ಯರು, ಗ್ರಾಮ ಪಂಚಾಯ್ತಿ ಸದಸ್ಯರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಬಿಇಒ ಗಮನಕ್ಕೆ ಹತ್ತಾರು ಬಾರಿ ತರಲಾಗಿದೆ ಎನ್ನುತ್ತಾರೆ ಶಿಕ್ಷಕರೊಬ್ಬರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.