ADVERTISEMENT

ಅಸಮರ್ಪಕ ಕುಡಿಯುವ ನೀರು ಪೂರೈಕೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 7:30 IST
Last Updated 21 ಮಾರ್ಚ್ 2012, 7:30 IST

ಹರಿಹರ: ತಾಲ್ಲೂಕಿನ ಹನಗವಾಡಿ ಗ್ರಾಮದಲ್ಲಿ ಅಸಮರ್ಪಕ ಕುಡಿಯುವ ನೀರು ಪೂರೈಕೆ ಖಂಡಿಸಿ ಮಂಗಳವಾರ ಗ್ರಾಮಸ್ಥರು ಹಾಗೂ ಭಾರತ್ ನಿರ್ಮಾಣ ಸ್ವಯಂ ಸೇವಕರು ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆ ಹದಗೆಟ್ಟಿದೆ. ಸಮರ್ಪಕ ನೀರು ವಿತರಣೆಯಲ್ಲಿ ನೀರುಗಂಟಿಗಳು ಕರ್ತವ್ಯಲೋಪ ಎಸಗುತ್ತಿದ್ದಾರೆ. ಒಬ್ಬರ ಮನೆಗೆ ನೀರು ಬಂದರೆ, ಇನ್ನೊಬ್ಬರ ಮನೆಗೆ ನೀರು ಬರುವುದಿಲ್ಲ.
 
ಇದಕ್ಕೆ ಕಾರಣಗಳು ಅರ್ಥವಾಗುತ್ತಿಲ್ಲ. ನೀರಿನಲ್ಲಿ ಕ್ಲೋರೈಡ್ ಅಂಶ ಹೆಚ್ಚಾಗಿರುವುದರಿಂದ ಗ್ರಾಮಸ್ಥರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಬೇಸಿಗೆಯ ಸಮಯವಾದ್ದರಿಂದ ಶುದ್ಧ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಾಗಿದೆ. ಕೂಡಲೇ, ನೀರು ಶುದ್ಧಿಕರಣ ಹಾಗೂ ಸಮರ್ಪಕ ಸರಬರಾಜಿಗೆ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಗ್ರಾ.ಪಂ. ಅಧ್ಯಕ್ಷ ಶ್ರೀಧರಮೂರ್ತಿ ಮಾತನಾಡಿ, ಗ್ರಾಮದಲ್ಲಿ ನಲ್ಲಿ ನೀರಿಗೆ ಅನೇಕ ಮನೆಗಳಲ್ಲಿ ವಿದ್ಯುತ್ ಮೋಟರ್‌ಗಳ ಮೂಲಕ ನೀರು ಬಳಸಿಕೊಳ್ಳತ್ತಿದ್ದಾರೆ. ಇದರಿಂದ ಒಂದು ಮನೆಗೆ ನೀರು ಸರಬರಾಜಾದರೆ, ಇನ್ನೊಂದು ಮನೆಗೆ ನೀರು ಬರುವುದಿಲ್ಲ. ವಿದ್ಯುತ್ ಮೋಟರ್ ಬಳಕೆ ನಿಲ್ಲಿಸಿದರೆ, ಎಲ್ಲರ ಮನೆಗೂ ಪ್ರತಿದಿನ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ರೇವಣಸಿದ್ದಪ್ಪ, ವಿರೂಪಾಕ್ಷಪ್ಪ, ತಿಪ್ಪಣ್ಣ, ಹನುಮಂತಪ್ಪ ಹಾಗೂ ನೀರುಗಂಟಿ ಅಂಬಣ್ಣ ಇದ್ದರು.ಪ್ರತಿಭಟನೆಯಲ್ಲಿ ಬಸವರಾಜಪ್ಪ, ಬಸಪ್ಪ, ವೀರಭದ್ರಪ್ಪ, ಭಾರತ್ ನಿರ್ಮಾಣ ಸ್ವಯಂ ಸೇವಕರಾದ ಆರ್.ಬಿ. ಪ್ರವೀಣ್, ಸಿ.ಟಿ. ವಿರೂಪಾಕ್ಷ, ಸುನಿಲ್, ಹೊನ್ನಪ್ಪ, ರಮೇಶ್, ಗಿರೀಶ್ ಹಾಗೂ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.