ADVERTISEMENT

ಆರ್ಭಟಿಸಿದ ವರುಣ; ಬೀದಿಗೆ ಬಿದ್ದ ಬದುಕು

ಕಾಲುವೆಗಳಂತಾದ ರಸ್ತೆಗಳು; ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 6:53 IST
Last Updated 16 ಸೆಪ್ಟೆಂಬರ್ 2013, 6:53 IST

ದಾವಣಗೆರೆ: ಮಳೆಯ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಅಕ್ಕಿ, ಗೋಧಿ ಇರುವ ಚಿಕ್ಕ ಚಿಕ್ಕ ಚೀಲಗಳು, ತರಕಾರಿ ಮತ್ತು ಪಾತ್ರೆ ಮತ್ತಿತರ ಸಾಮಗ್ರಿ, ಮಳೆ ನೀರಿನೊಂದಿಗೆ ಮನೆಯೊಳಗೆ ನುಗ್ಗಿದೆ  ರಸ್ತೆ ಬದಿಯಲ್ಲಿನ ತ್ಯಾಜ್ಯ. ಹಿಡಿ ಶಾಪ ಹಾಕುತ್ತಾ ಅದನ್ನು ಹೊರಗೆ ಎತ್ತಿ ಹಾಕುತ್ತಿರುವ ಜನರು. ಕೆಲವೆಡೆ ಬಾಣಂತಿಯರು ಕೂಸು ಕೈಯಲ್ಲಿ ಹಿಡಿದು ಮನೆ ಹೊರೆಗೆ ನಿಂತಿರುವ ದೃಶ್ಯ...

ಇಂತಹ ಹತ್ತಾರು ದೃಶ್ಯಗಳು ನಗರದಲ್ಲಿ ಭಾನುವಾರ ಸಂಜೆ ಕೇವಲ ಒಂದು ತಾಸಿನ ಅವಧಿಯಲ್ಲಿ ಸುರಿದ ಮಳೆಗೆ ಕಂಡುಬಂದವು.

ಕೆಲವು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ನಗರದ ಜನತೆ ಸುಧಾರಿಸಿಕೊಳ್ಳುತ್ತಿರುವಾಗಲೇ ಮತ್ತೊಮ್ಮೆ ವರುಣ ತನ್ನ ಆರ್ಭಟ ತೋರಿಸಿದ. ಇದರಿಂದಾಗಿ ನಗರದ ಬಹುತೇಕ ಕೊಳಚೆ ಪ್ರದೇಶದ ನಿವಾಸಿಗಳು ಬಹಳಷ್ಟು ತೊಂದರೆಯನ್ನು ಅನುಭವಿಸಿ, ಪಾಲಿಕೆ ವಿರುದ್ಧ ಹಿಡಿಶಾಪವನ್ನು ಹಾಕುತ್ತಾ ಕಣ್ಣೀರು ಸುರಿಸಿದರು.

ನಗರದ ಹಳೆಯ ದಾವಣಗೆರೆಯ ಜಾಲಿನಗರ, ಚೌಡೇಶ್ವರಿ ನಗರ, ಎಸ್‌ಪಿಎಸ್‌ ನಗರ, ಬಾಬು ಜಗಜೀವನರಾಂ ನಗರ, ಶಿವನಗರ, ಶಾಂತಿನಗರ, ಬಂಬೂ ಬಜಾರ್‌, ಎಪಿಎಂಸಿ ಹಿಂಭಾಗ ಹಾಗೂ ಕೆಎಸ್‌ಆರ್‌ಟಿಸಿ ಪ್ರದೇಶ ಸೇರಿದಂತೆ ಈ ಭಾಗದ ಬಹುತೇಕ ಕೊಳಚೆ ಪ್ರದೇಶಗಳು ಮಳೆ ನೀರಿನಿಂದ ಆವೃತವಾಗಿದ್ದವು.

ಅದರಲ್ಲೂ ಜಾಲಿನಗರದಲ್ಲಿ ಸುಮಾರು 60ರಿಂದ 70 ಮನೆಗಳಿಗೆ ಮಳೆ ನೀರು ನುಗಿ್ಗರುವುದು ಕಂಡು ಬಂದಿತ್ತು. ಇದೇ ಪ್ರದೇಶದಲ್ಲಿ 2 ಮನೆಗಳ ಗೋಡೆಗಳು ಮಳೆಯಿಂದಾಗಿ ಕುಸಿದವು.

‘ಸ್ವಾಮಿ, ನಾವು ಬಡವರು, ಮಳೆ ಬಂದಾಗೆಲ್ಲಾ ನಮ್ಮ ಮನೆಗೆ ನೀರು ನುಗ್ಗುತ್ತದೆ. ಇಲ್ಲಿನ ದೊಡ್ಡ ಚರಂಡಿ ತುಂಬಿ, ಅದರ ಕೊಳಚೆ ನೀರು ಮನೆಯೊಳಗೆ ಹರಿಯುತ್ತದೆ. ಅಡುಗೆ ಸಾಮಗ್ರಿಗಳೆಲ್ಲಾ ತೇಲಿ ಹೋಗುತ್ತವೆ. ಈ ಮಳೆಯಿಂದಾಗಿ ನಮ್ಮ ಬದುಕೇ ನಾಶವಾಗುತ್ತಿದೆ. ಮೊನ್ನೆ ಬಿದ್ದ ಮಳೆಯಿಂದ ನಾವು ಸಾಕಷ್ಟು ತೊಂದರೆ ಅನುಭವಿಸಿದ್ದವು.

ಈಗ ಮತ್ತೆ ಭಾರಿ ಮಳೆ ಬಿದ್ದಿದೆ. ಪ್ರತಿ ಸಾರಿ ಮನೆಗೆ ನುಗ್ಗಿದ ಮಳೆ ನೀರನ್ನು ಹೊರಗೆ ಚೆಲ್ಲುವುದೇ ನಮಗೆ ಕೆಲಸವಾಗಿದೆ. ಪಾಲಿಕೆ ಅಧಿಕಾರಿಗಳು ಇಲ್ಲಿನ ಚರಂಡಿ ಮತ್ತು ರಸ್ತೆಯನ್ನು ದುರಸ್ತಿಗೊಳಿಸುತ್ತಿಲ್ಲ. ನಮ್ಮ ಕಷ್ಟ ಯಾರು ಕೇಳುತ್ತಿಲ್ಲ. ಜೀವನವೇ ಬೇಸರವಾಗಿದೆ’ ಎಂದು ಜಾಲಿನಗರದ ರಾಜಶೇಖರ, ಶೋಭಾ ಬಾಬುರಾವ್‌ ಮತ್ತು ರಂಗನಾಥ ಶಕುಂತಲಾ ಅಳಲು ತೋಡಿಕೊಂಡರು.

‘ಊಟನೇ ಮಾಡಿಲ್ಲ. ಅಡುಗೆ ಮಾಡಿಟ್ಟಿದ್ದ ಅನ್ನದ ಪಾತ್ರೆ– ಸಾಂಬಾರು ಎಲ್ಲಾ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದೆ. ಮನೆಯೊಳಗೆ ಕೊಚ್ಚೆಗುಂಡಿ ನೀರು ನುಗ್ಗೈತಿ. ನೋಡ್ರಿ ಅಲ್ಲಿ ಗರ್ಭಿಣಿಯರು ಮನೆಯಿಂದ ಹೊರಗೆ ಬಂದು ನಿಂತಾರ. ರಾತ್ರಿ ಈ ರೀತಿ ಮಳೆ ಬಂದ್ರೆ ನಾವು ಎಲ್ಲಿಗೆ ಹೋಗಬೇಕು.

ರಸ್ತೆ ಎತ್ತರ ಮಾಡಿದ್ದಾರೆ. ರಸ್ತೆಯಲ್ಲಿ ಹರಿಯುವ ನೀರೆಲ್ಲಾ ಮನೆಯೊಳಗೆ ನುಗು್ಗತಿ್ತದೆ. ಪಾಲಿಕೆ ಸದಸ್ಯರ, ಅಧಿಕಾರಿಗಳ ಬಳಿ ನಮ್ಮ ಕಷ್ಟ ಹೇಳಿಕೊಂಡರೂ ಯಾರೂ  ಸ್ಪಂದಿಸುತ್ತಿಲ್ಲ ಎಂದು ಅಳುತ್ತಾ ಮಳೆಯಿಂದಾದ ಕಷ್ಟವನ್ನು ತೋಡಿಕೊಂಡರು ಚೌಡೇಶ್ವರಿ ನಗರದ ದುಗ್ಗಮ್ಮ ಹಾಗೂ ಇಲ್ಲಿನ ನಿವಾಸಿಗಳಾದ ಆರ್‌.ರವಿಕುಮಾರ್‌, ಎಚ್‌.ಪಿ.ಗೋಪಾಲರಾಜ್‌ ಮತ್ತು ಬಾಬು ಜಗಜೀವನರಾಂ ನಗರದ ಕೆ.ಸಿ.ನಿರಂಜನಮೂರ್ತಿ.

ಮಳೆಯಿಂದಾಗಿ ಪಿ.ಬಿ.ರಸ್ತೆಯಲ್ಲಿನ ಅಗ್ನಿಶಾಮಕ ದಳದ ಕಚೇರಿ ಬಳಿಯಲ್ಲಿ ನಾಲ್ಕು ದ್ವಿಚಕ್ರವಾಹನಗಳು ಕೊಚ್ಚಿಹೋದ ಘಟನೆ ಕೂಡ ನಡೆದಿದೆ.

ಇಂತಹ ಹತ್ತಾರು ಸಮಸ್ಯೆಗಳು ನಗರದ ಬಹುತೇಕ ಕೊಳಚೆ ಪ್ರದೇಶದಲ್ಲಿ ಕಂಡು ಬಂದವು. ಆದರೆ, ಜನಪ್ರತಿನಿಧಿಗಳಾಗಲಿ, ಪಾಲಿಕೆ ಅಧಿಕಾರಿ ಮತ್ತು ಸದಸ್ಯರಾಗಲಿ ಯಾರು ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎನ್ನುವುದೇ ಕೊಳಚೆ ಪ್ರದೇಶಗಳ ಬಹುತೇಕ ಜನರ ಅಳಲು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.