ADVERTISEMENT

ಆಸರೆ ಹಸ್ತಾಂತರಕ್ಕೆ ಸಂತ್ರಸ್ತ ಕುಟುಂಬಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 5:25 IST
Last Updated 16 ಮಾರ್ಚ್ 2012, 5:25 IST

ಹರಪನಹಳ್ಳಿ: ನೆರೆಪೀಡಿತ ಪ್ರದೇಶದ ಕುಟುಂಬಗಳ ಸ್ಥಳಾಂತರಕ್ಕಾಗಿ ನಿರ್ಮಿಸಿರುವ `ಆಸರೆ~ ಯೋಜನೆಯ ಮನೆಗಳನ್ನು ಕೂಡಲೇ ಸಂತ್ರಸ್ತ ಕುಟುಂಬಗಳಿಗೆ ಹಸ್ತಾಂತರಿಸುವಂತೆ ಒತ್ತಾಯಿಸಿ ಗುರುವಾರ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ನೇತೃತ್ವದಲ್ಲಿ ಹರಿಶ್ಚಂದ್ರ ನಗರ ನಿವಾಸಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಶಾಸಕ ಜಿ. ಕರುಣಾಕರರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಹಳೇ ತಾಲ್ಲೂಕು ಕಚೇರಿ ಮುಂಭಾಗದಿಂದ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಧೋರಣೆಗೆ ಧಿಕ್ಕಾರದ ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂತ್ರಸ್ತ ಕುಟುಂಬಗಳು, ಮಿನಿ ವಿಧಾನಸೌಧಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಆಚಾರ್ ಬಡಾವಣೆಯಲ್ಲಿರುವ ಶಾಸಕರ ಗೃಹಕಚೇರಿಗೆ ತೆರಳಿ ಶೀಘ್ರವೇ ಮನೆಗಳನ್ನು ಹಸ್ತಾಂತರಿಸುವಂತೆ ಒತ್ತಾಯಿ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ಅಂಗ ಸಂಘಟನೆಯ ಮುಖಂಡ ಎಚ್.ಎಂ. ಸಂತೋಷ್ ಮಾತನಾಡಿ, ಕಳೆದ ಎರಡೂವರೆ ವರ್ಷದ ಹಿಂದೆ ಸಂಭವಿಸಿದ ಜಲಪ್ರಳಯದಿಂದಾಗಿ ಹರಿಶ್ಚಂದ್ರ ನಗರದ ನಿವಾಸಿಗಳ ಬದುಕು ಅಕ್ಷರಶಃ ಬೀದಿ ಪಾಲಾಗಿದೆ. ಪ್ರತಿ ಮಳೆಗಾಲದಲ್ಲಿಯೂ ಜೀವ ಕೈಯಲ್ಲಿಡಿದುಕೊಂಡು ಬದುಕು ಸಾಗಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಸಂತ್ರಸ್ತ ಕುಟುಂಬಗಳನ್ನು ಸ್ಥಳಾಂತರಿಸಿ, ಶಾಶ್ವತ ನೆಲೆ ಒದಗಿಸುವ ಉದ್ದೇಶದಿಂದ ನಿರ್ಮಿಸಲಾಗಿರುವ ಆಸರೆ ಬಡಾವಣೆಯ ಕಾಮಗಾರಿ ಪೂರ್ಣಗೊಂಡು ಆರೆಂಟು ತಿಂಗಳು ಉರುಳಿದರೂ, ಉದ್ಘಾಟನೆಯ ನೆಪದಲ್ಲಿ ಹಸ್ತಾಂತರ ಮಾಡದೆ ಸಂತ್ರಸ್ತರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

ಪಕ್ಷದ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಸಂತ್ರಸ್ತರಿಗಾಗಿ ನಿರ್ಮಿಸಿದ ಮನೆಗಳು ಉಪಯೋಗಿಸದೆ ಇರುವುದರಿಂದ ಈಗಾಗಲೇ ಕೆಲ ಮನೆಗಳು ಶಿಥಿಲಾವಸ್ಥೆಗೆ ತಲುಪಿವೆ. ಜತೆಗೆ, ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿ ಮಾರ್ಪಟ್ಟಿವೆ. ಇತ್ತ ಮನೆಗಳಿಲ್ಲದೆ, ಮುರುಕು ಚಪ್ಪರದಲ್ಲಿರುವ ಕುಟುಂಬಗಳು ಮನೆಗಾಗಿ ಚಾತಕಪಕ್ಷಿಯಂತೆ ಕಾಯುತ್ತಿವೆ. ಉದ್ಘಾಟನೆಯ ಹೆಸರಿನಲ್ಲಿ ವಿಳಂಬ ಧೋರಣೆ ಅನುಸರಿಸದೆ, 15ದಿನಗಳ ಒಳಗೆ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು.

ಮುಖಂಡರಾದ ಗೋಣಿಬಸಪ್ಪ, ಚಂದ್ರಾನಾಯ್ಕ, ಕೊಟ್ರೇಶನಾಯ್ಕ ಹಾಗೂ ಸಂತ್ರಸ್ತರ ಕುಟುಂಬದ ನಾಗರತ್ನಾ, ಮೂಕಾಂಬಿಕೆ, ಯಶೋದಾ, ಗೀತಮ್ಮ, ಲಲಿತಾ, ಮಡಿವಾಳ ನಿಂಗಮ್ಮ, ಮಂಜಮ್ಮ, ಸಾವಿತ್ರಮ್ಮ, ಕೊಟ್ರಮ್ಮ, ಅನ್ನಪೂರ್ಣಮ್ಮ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.