ADVERTISEMENT

ಆಸ್ಪತ್ರೆ ಅವ್ಯವಸ್ಥೆ: ಸಾರ್ವಜನಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 5:47 IST
Last Updated 13 ಸೆಪ್ಟೆಂಬರ್ 2013, 5:47 IST

ಹರಿಹರ:  ನಗರದ ಸಾರ್ವಜನಿಕ ಆಸ್ಪತ್ರೆಗೆ ಪರಿಶೀಲನೆಗೆ ಗುರುವಾರ ದಿಢೀರ್ ಭೇಟಿ ನೀಡಿದ ಡಿಎಚ್‌ಒ ಡಾ.ವಿಶ್ವನಾಥ್‌ಗೆ ಸಾವರ್ಜನಿಕರು ಮುತ್ತಿಗೆ ಹಾಕಿ ಆಸ್ಪತ್ರೆಯ ಅವ್ಯವಸ್ಥೆಗಳ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು.

ಆಸ್ಪತ್ರೆಗೆ ಭೇಟಿ ನೀಡಿದ ಡಿಎಚ್‌ಒಗೆ ಸಾರ್ವಜನಿಕರು ಮುತ್ತಿಗೆ ಹಾಕಿ ತಡರಾತ್ರಿ ಆಸ್ಪತ್ರೆಗೆ ಯಾವುದಾದರೂ ಅಪಘಾತದಿಂದ ಮೃತಪಟ್ಟ ಪ್ರಕರಣಗಳು ಬಂದರೆ, ಶವವನ್ನು ಶವಾಗಾರಕ್ಕೆ ಸಾಗಿಸಲು ಸಿಬ್ಬಂದಿ ಇರುವುದಿಲ್ಲ.

ವಿದ್ಯುತ್ ವ್ಯತ್ಯಯವಾದಾಗ, ಇರುವ ಯುಪಿಎಸ್ ಹಾಗೂ ಜನರೇಟರ್ ಬಳಸದೇ ಮೇಣದಬತ್ತಿ ಬೆಳಕಿನಲ್ಲಿ ಚಿಕಿತ್ಸೆ ನೀಡುತ್ತಾರೆ. ರಾತ್ರಿ ಪಾಳಿಯಲ್ಲಿ ಡಿ ಗ್ರೂಪ್ ಸಿಬ್ಬಂದಿ ಇರುವುದಿಲ್ಲ. ಆಸ್ಪತ್ರೆಯ ಸುತ್ತಮುತ್ತ ಗಿಡಗಂಟೆಗಳು ಬೆಳೆದು ಸೊಳ್ಳೆಗಳು ಹೆಚ್ಚಾಗಿವೆ. ಆಸ್ಪತ್ರೆಗೆ ರೋಗಿಗಳನ್ನು ನೋಡಲು ಬರುವ ರೋಗಿಗಳ ಸಂಬಂಧಿಗಳು ರೋಗಿಗಳಾಗಬೇಕಾದ ದುಸ್ಥಿತಿ ಇದೆ ಎಂದು ಬೇಸರ ವ್ಯಕ್ತ ಪಡಿಸಿದರು.

ವಿಶ್ವನಾಥ ಮಾತನಾಡಿ, ನಾನು ಅಧಿಕಾರ ವಹಿಸಿಕೊಂಡು ಮೂರು ತಿಂಗಳಾಗಿದ್ದು, ಈ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಕೆಎಂಎಫ್ ಸಂಸ್ಥೆಯ ಬಾಕಿ ಪಾವತಿಸಲು ವ್ಯವಸ್ಥೆ ಮಾಡಿದ್ದೇನೆ. ಉಳಿದ ಸಮಸ್ಯೆಗಳ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಗುತ್ತಿಗೆ ಆಧಾರಿತ ನೌಕರರಿಗೆ ಕಳೆದ ಐದು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಇದರಿಂದ, ಆಸ್ಪತ್ರೆಯಲ್ಲಿ ಸ್ವಚ್ಛತೆಯ ಸಮಸ್ಯೆ ಹಾಗೂ ರೋಗಿಗಳ ಸ್ಥಳಾಂತರ ಸಮಸ್ಯೆಯಾಗಿದೆ. ಕೂಡಲೇ ವೇತನ ನೀಡುವ ವ್ಯವಸ್ಥೆಮಾಡಿ ಎಂದು ಸಾವರ್ಜನಿಕರು ಮನವಿ ಮಾಡಿದರು.

ಅನುದಾನದ ಕೊರತೆ ಕಾರಣ, ಒಂದು ತಿಂಗಳ ವೇತನ ನೀಡುವ ವ್ಯವಸ್ಥೆ ಮಾಡಿದ್ದೇವೆ. ಉಳಿದ ವೇತನವನ್ನು ಅನುದಾನ ಬಿಡುಗಡೆಯಾದ ನಂತರ ನೀಡಲಾಗುವುದು ಎಂದು ಡಾ.ವಿಶ್ವನಾಥ್ ಸಮಜಾಯಿಷಿ ನೀಡಿದರು.

ಡಾ.ಲೋಹಿತ್, ಡಾ.ನಾಗರಾಜ್, ಡಾ.ರಾಜಕುಮಾರ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ಮತ್ತು ವಿದ್ಯಾನಗರದ  ನಿವಾಸಿಗಳಾದ ಸಂತೋಷ, ಎನ್.ಇ. ಸುರೇಶ, ಮಂಜುನಾಥ ಚಿಂಚಲಿ, ಮಾರುತಿ ಬೇಡರ್, ಶ್ರೀನಿವಾಸ್, ಭರತ್, ಹಾಗೂ ವಸಂತಕುಮಾರ್ ಉಪಸ್ಥಿತರಿದ್ದರು.------------------

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.