ADVERTISEMENT

ಇತಿಹಾಸವನ್ನು ತಿರುಚಲು ಯಾರಿಂದಲೂ ಸಾಧ್ಯವಿಲ್ಲ: ವಡ್ನಾಳ್

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 6:09 IST
Last Updated 11 ನವೆಂಬರ್ 2017, 6:09 IST

ಚನ್ನಗಿರಿ: ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿರುವವರಲ್ಲಿ ಟಿಪ್ಪು ಸುಲ್ತಾನ್ ಕೂಡಾ ಪ್ರಮುಖರಾಗಿದ್ದಾರೆ. ಇತಿಹಾಸವನ್ನು ತಿರುಚಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸಕ ವಡ್ನಾಳ್ ರಾಜಣ್ಣ ತಿಳಿಸಿದರು. ಪಟ್ಟಣದ ಶಾದಿ ಮಹಲ್‌ನಲ್ಲಿ ತಾಲ್ಲೂಕು ಆಡಳಿತ ಹಾಗೂ ಮುಸ್ಲಿಂ ಸಮಾಜದಿಂದ ಶುಕ್ರವಾರ ನಡೆದ ‘ಮೈಸೂರು ಹುಲಿ’ ಹಜರತ್ ಟಿಪ್ಪುಸುಲ್ತಾನ್ ಅವರ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತಿಹಾಸವನ್ನು ತಿರುಚಿ ಟಿಪ್ಪು ದೇಶಪ್ರೇಮಿ ಅಲ್ಲ ಎಂದು ಹೇಳುವವರು ಇನ್ನೊಮ್ಮೆ ಇತಿಹಾಸದ ಪುಟಗಳನ್ನು ತಿರುವಿ ಅಭ್ಯಾಸ ಮಾಡಬೇಕು. ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಜಂಟಿ ಅಧಿವೇಶನ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಅವರು ಟಿಪ್ಪು ಅವರ ಬಗ್ಗೆ ಹೊಗಳಿ ಮಾತನಾಡಿರುವುದು ಸಾಕ್ಷಿಯಾಗಿದೆ ಎಂದರು.

ಮುಸ್ಲಿಂ ಸಮಾಜದ ಧರ್ಮಗುರು ಮೌಲಾನ ಇಬ್ರಾಹಿಂ ಸಖಾಫಿ ಸಾಬ್ ಮಾತನಾಡಿ, ‘ಮತಕ್ಕಾಗಿ ರಾಜಕಾರಣಿಗಳು ಸಮಾಜದ ಸ್ವಾಸ್ಥವನ್ನು ಹಾಳು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಕೇವಲ ಮತಕ್ಕಾಗಿ ಜಯಂತಿ ಆಚರಿಸುವುದೂ ಸರಿಯಾದ ಕ್ರಮವಲ್ಲ. ಕೋಮುವಾದ ಭಯೋತ್ಪಾದನೆಗಿಂತ ಅಪಾಯಕಾರಿಯಾದ ಬೆಳವಣಿಗೆ.

ADVERTISEMENT

ಸರ್ಕಾರ ಟಿಪ್ಪು ಜಯಂತಿ ಆಚರಿಸಲು ತೀರ್ಮಾನಿಸಿದ ಮೇಲೆ ಅವರ ಬಗ್ಗೆ ತಿಳಿದುಕೊಳ್ಳಲು ಕೆಲವರಲ್ಲಿ ಆಸಕ್ತಿ ಮೂಡಿದೆ. ಜಯಂತಿಗಳು ಸಾರ್ವಜನಿಕವಾಗಿ ನಡೆಯುವಂತಾಗಬೇಕು’ ಎಂದು ಹೇಳಿದರು. ಡಿವೈಎಸ್‌ಪಿ ಎಂ.ಕೆ.ಗಂಗಲ್, ಸಿಪಿಐ ಕೆ.ಎನ್.ಗಜೇಂದ್ರಪ್ಪ, ತಹಶೀಲ್ದಾರ್ ಎಸ್.ಪದ್ಮಕುಮಾರಿ, ತಾಲ್ಲೂಕು ಪಂಚಾಯ್ತಿ ಇಒ

ಎಂ.ಆರ್.ಪ್ರಕಾಶ್, ಸದಸ್ಯಆರ್.ಷಡಕ್ಷರಿ, ಪುರಸಭೆ ಸದಸ್ಯ ಅಸ್ಲಾಂಬೇಗ್, ಮುಸ್ಲಿಂ ಸಮಾಜದ ಮುಖಂಡರಾದ ಹಾಜಿ ಅಮಾನುಲ್ಲಾ ಸಾಬ್, ಅಹಮದ್ ಜಾನ್, ಟಿಪ್ಪು ಅಭಿಮಾನಿಗಳ ಬಳಗದ ಅಧ್ಯಕ್ಷ ಬದ್ರುದ್ದೀನ್ ಉಪಸ್ಥಿತರಿದ್ದರು. ಹಾಲಸ್ವಾಮಿ ವಿರಕ್ತ ಮಠದ ಜಯದೇವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಎಂ.ಬಿ.ನಾಗರಾಜ್ ಉಪನ್ಯಾಸ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.